-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 8

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 8ನಮಸ್ತೆ ಮಕ್ಕಳೇ,
    ಮನಸ್ಸಿನ ತುಂಬೆಲ್ಲಾ ಕುತೂಹಲ, ಆಸಕ್ತಿ, ಪ್ರೀತಿ, ಕಾಳಜಿ ತುಂಬಿಕೊಂಡು ಪ್ರತಿದಿನವೂ ಸಂಭ್ರಮಿಸುವ ನಿಮ್ಮ ಜೊತೆಗೆ ನಾನೂ ಮಗುವಾಗಬೇಕು.
   ಎಷ್ಟು ಚಂದ ಅಲ್ವಾ ಬಾಲ್ಯ.....! ದಸರಾ ಹಬ್ಬದ ನೆಪದಲ್ಲಿ ಈಗಾಗಲೇ ಆರಂಭವಾದ ಶಾಲೆಯ ಕಲಿಕಾ ಸಮಯಕ್ಕೆ ಒಂದಷ್ಟು ಬಿಡುವು... ಹೌದು. ಇನ್ನೂ ಹೊಸತಾಗಬೇಕು.. ಕಳೆದುಕೊಂಡದ್ದನ್ನು ಮತ್ತೆ ಪಡೆಯಬೇಕು.. ಏನನ್ನು?
     ಮರೆತು ಹೋದ ನಗುವನ್ನು..
ಕೇಳಿಸಿಕೊಳ್ಳಲು ಮರೆತ ಸಮಯವನ್ನು... ಅಪ್ಪ ಅಮ್ಮನೊಂದಿಗೆ ಬೆರೆಯುವ ಪ್ರೀತಿಯನ್ನು... ತಂಗಿ ತಮ್ಮ ಅಕ್ಕ ಅಣ್ಣನೊಂದಿಗೆ ಆಟ ಆಡುವ ಖುಷಿಯನ್ನು...
           ಈ ನಡುವೆ ನಾವು ಮಾತನಾಡಲು ಮರೆತಿದ್ದೇವೆ.. ಆಟ ಪಾಠ ಓದು ಬರೆಹದ ಬಿಡುವಿಲ್ಲದ ಕೆಲಸಗಳ ಜೊತೆಗೆ...! ನೀವು ಯಾರಿಗಾದರೂ ಧನ್ಯವಾದಗಳನ್ನು ಹೇಳುವ ಅಭ್ಯಾಸ ರೂಢಿಸಿಕೊಂಡಿದ್ದೀರಾ....? ಕೆಲವೊಮ್ಮೆ ನಮ್ಮ ಮಾತುಗಳು, ವರ್ತನೆಗಳು ನಾವು ಬೆಳೆದು ಬಂದ ವಾತಾವರಣದ ಪ್ರತಿಬಿಂಬವೆನಿಸುತ್ತದೆ. ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡಷ್ಟೂ ಬದುಕು ಅರ್ಥಪೂರ್ಣವಾಗುತ್ತದೆ. ಯಾರಿಗೆಲ್ಲಾ Thanks ಹೇಳ್ಬೇಕು? ಅಮ್ಮ ಮಾಡಿದ ಕೆಲಸಕ್ಕೆ ಥ್ಯಾಂಕ್ಯೂ ಅಮ್ಮಾ ಅಂದುಬಿಡಿ. ಈ ದಿನ ಅಪ್ಪ ನಿಮಗಾಗಿ ನೀಡಿದ ಸಮಯಕ್ಕೆ ಥ್ಯಾಂಕ್ಯೂ ಹೇಳಿಬಿಡಿ. ನಿಮ್ಮನ್ನು ಜಗಲಿಗೆ ತಲುಪಿಸುವ ಶಿಕ್ಷಕರಿಗೆ ಥ್ಯಾಂಕ್ಯೂ ಹೇಳ್ತೀರಾ....?..ಹೇಳ್ಬೇಕು ಅಲ್ವಾ? ಬಸ್ಸಿನಲ್ಲಿ ಚಿಲ್ಲರೆ ವಾಪಾಸ್ಸು ನೀಡಿದ ಕಂಡಕ್ಟರ್ ಮಾಮನಿಗೆ, ವಸ್ತುಗಳನ್ನು ಸರಿಯಾಗಿ ಪ್ಯಾಕ್ ಮಾಡಿ ಚೀಲಕ್ಕೆ ತುಂಬಿಸಿ ಕೊಡುವ ಅಂಗಡಿಯ ಅಣ್ಣನಿಗೆ, ಹೋಟೆಲ್ ನಲ್ಲಿ ಆಹಾರ ನಾವು ಆರ್ಡರ್ ಮಾಡಿದ್ದನ್ನೆಲ್ಲಾ ಕಾಳಜಿಯಿಂದ ಮೇಜಿನ ಮೇಲಿಡುವ ಕೈಗಳಿಗೆ, ಮನೆಯಿಂದ ಶಾಲೆಗೆ... ಶಾಲೆಯಿಂದ ಮನೆಗೆ ಜಾಗರೂಕತೆಯಿಂದ ತಲುಪಿಸುವ ರಿಕ್ಷಾ, ಬಸ್ಸಿನ ಚಾಲಕರಿಗೆ, ಹೇಗಿದ್ದೀ ಎಂದು ಪ್ರೀತಿಯಿಂದ ವಿಚಾರಿಸುವ ಪಕ್ಕದ ಮನೆಯವರಿಗೆ... ನಮ್ಮ ನೋವಿಗೆ ಸ್ಪಂದಿಸಿ ಸಮಾಧಾನ ನೀಡುವ ಗೆಳೆಯ ಗೆಳತಿಯರಿಗೆ, ತಪ್ಪು ಮಾಡಿದಾಗ ಎಚ್ಚರಿಸುವ ಆಂತರ್ಯದ ಒಡನಾಡಿಗಳಿಗೆ.. ಆಟದ ಖುಷಿಯನ್ನು ನೀಡುವ ಅಕ್ಕ ಅಣ್ಣ ತಮ್ಮ ತಂಗಿ... ಎಲ್ಲರಿಗೂ, ಮುದ್ದು ಮಾಡುವ ಅಜ್ಜ ಅಜ್ಜಿ ಎಲ್ಲ ಹಿರಿಯರಿಗೂ... ದಿನಕ್ಕೊಂದು ಸಲವಾದರೂ ಕೃತಜ್ಞತೆ ಯನ್ನು ಅರ್ಪಿಸಬೇಕಲ್ವಾ! ನಮ್ಮೆದುರಿಗೆ.. ನಮಗಾಗಿ ಸಹಾಯ ಮಾಡುವ ಪ್ರತಿಯೊಬ್ಬರಿಗೂ ಸಾಂದರ್ಭಿಕವಾಗಿ ಥ್ಯಾಂಕ್ಸ್ ನ್ನು ಒಮ್ಮೆ ಹೇಳಿಬಿಡಿ.. ಅದರ ಎರಡರಷ್ಟು ಪ್ರೀತಿ ಅವರ ಕಣ್ಣುಗಳಲ್ಲಿ ಕಾಣಸಿಗುತ್ತದೆ. ಆ ಬೆಳಕೇ ನಮ್ಮನ್ನು ಮುನ್ನಡೆಸುವುದು.
      ಅಬ್ಬಾ...! ನಾನೂ ಹೇಳಲು ಮರೆತೆ...ಪ್ರತಿ ಸಲವೂ ಪತ್ರವನ್ನು ಓದಿ ಸಂಭ್ರಮಿಸಿ ಮತ್ತೆ ಮತ್ತೆ ಬರೆಸುವಂತೆ ಮಾಡುವ ನನ್ನ ಪುಟಾಣಿ ಬಳಗದ ಪ್ರತಿಯೊಂದು ಮನಸ್ಸುಗಳಿಗೂ ಧನ್ಯವಾದಗಳು.
    ಮತ್ತೆ ಮರೆತೆ ನೋಡಿ...!ಜಗಲಿ ಎನ್ನುವ ಸುಂದರ ಸ್ಥಳದಲ್ಲಿ ನಮ್ಮೆಲ್ಲರನ್ನೂ ಸೇರಿಸಿ ಕಲಿಯುವಂತೆ ಮಾಡುವ ಜಗಲಿಯ ರೂವಾರಿ ತಾರನಾಥ ಕೈರಂಗಳ ಸರ್ ಮತ್ತು ಮುನ್ನಡೆಸುತ್ತಿರುವ ಎಲ್ಲ ಹಿರಿಯರಿಗೂ ಒಟ್ಟಿಗೆ thanks ಹೇಳೋಣ ಅಲ್ವಾ....?
      ಪತ್ರ ಓದಿದ ಕೂಡಲೇ ಯಾರಿಗೆಲ್ಲಾ thanks ಹೇಳ್ಬೇಕು ಹೇಳಿಬಿಡಿ. ಒಮ್ಮೆ ಮಾತ್ರ ಅಲ್ಲ. ಪ್ರತಿದಿನವೂ ಅಲ್ಲಲ್ಲಿ ಹೇಳಿಬಿಡಿ. ಇದು ನಿತ್ಯ ಅಭ್ಯಾಸವಾಗಲಿ.....
      ನಾನು ಯಾರನ್ನಾದರೂ ಮರೆತೆನಾ ನೆನಪಿಸಲು..? ಇನ್ಯಾರಿಗೆಲ್ಲಾ thanks ಹೇಳ್ಬಹುದು...? ನೆನಪಿಸ್ತೀರಲ್ಲಾ ಪತ್ರದಲ್ಲಿ......?
      ಆರೋಗ್ಯ ಜೋಪಾನ...
ರಜೆಯನ್ನು ಸುರಕ್ಷಿತವಾಗಿ ಸಂಭ್ರಮಿಸಿ.. ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ.. ಅಲ್ಲಿಯವರೆಗೆ ಅಕ್ಕನ ನಮನಗಳು.
 ....................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article