-->
ಹಕ್ಕಿ ಕಥೆ - 16

ಹಕ್ಕಿ ಕಥೆ - 16

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

                    ಹಕ್ಕಿ ಕಥೆ - 16
ಮಕ್ಕಳೇ ನಮಸ್ತೇ.....
     ನವಮಾಸಗಳ ಕಾಲ ನಮ್ಮನ್ನು ಹೊತ್ತು ಹೆತ್ತು ಸಾಕಿ ಸಲಹುವ ತಾಯಿಯನ್ನು ದೇವರು ಎಂಬ ಅರ್ಥದಲ್ಲಿ ಪೂಜಿಸುವ ನವರಾತ್ರಿ ಹಬ್ಬದ ಈ ಸಂದರ್ಭದಲ್ಲಿ ಒಂದು ವಿಶೇಷ ಹಕ್ಕಿಯನ್ನು ನಿಮಗೆಲ್ಲ ಪರಿಚಯಿಸೋಣ ಎಂದು ಯೋಚಿಸಿದ್ದೇನೆ.
     ನವಮಾಸ, ನವರಂಧ್ರ, ನವಗ್ರಹ, ನವರಾತ್ರಿ ಇಲ್ಲೆಲ್ಲಾ ಬರುವ ನವ ಎಂಬ ಪದ ಈ ಹಕ್ಕಿಯ ಹೆಸರಿನಲ್ಲೂ ಇದೆ. ನವ ಎಂದರೆ ಒಂಭತ್ತು. ಈ ಹಕ್ಕಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಂದು, ಕಪ್ಪು, ನೀಲಿ, ಹಸಿರು, ಬಿಳಿ, ತಿಳಿನೀಲಿ, ಕೆಂಪು, ಬೂದು ಮತ್ತು ಗುಲಾಬಿ ಬಣ್ಣಗಳನ್ನು ಇದರ ದೇಹದ ಮೇಲೆ ಕಾಣಬಹುದು. ಇಂತಹ ಒಂಭತ್ತು ಬಣ್ಣಗಳಿಂದ ಶೋಭಿಸುವ ಈ ಹಕ್ಕಿಯನ್ನು ನವರಂಗ ಎಂದು ಕರೆಯುತ್ತಾರೆ.
         ಹಿಂದಿ ಭಾಷೆಯಲ್ಲೂ ಈ ಹಕ್ಕಿಯನ್ನು ನವರಂಗ್ ಎಂದೇ ಕರೆಯುತ್ತಾರೆ. ಕನ್ನಡದಲ್ಲಿ ಈ ಹಕ್ಕಿಗೆ ಹನಾಲುಗುಬ್ಬಿ ಎಂಬ ಇನ್ನೊಂದು ಹೆಸರೂ ಇದೆ. ಈ ಹಕ್ಕಿ ನಮ್ಮ ದಕ್ಷಿಣ ಭಾರತದ ಖಾಯಂನಿವಾಸಿ ಅಲ್ಲ. ಚಳಿಗಾಲದ ನವೆಂಬರ್ ನಿಂದ ಮೇ ತಿಂಗಳಿನ ವರೆಗೆ ನಮ್ಮ ಊರಿಗೆ ವಲಸೆ ಬರುವ ಹಕ್ಕಿ. ಮಳೆಗಾಲ ಶುರುವಾಯ್ತು ಎಂದರೆ ಮತ್ತೆ ತನ್ನ ತವರುಮನೆ ಹಿಮಾಲಯದ ತಪ್ಪಲು ಪ್ರದೇಶಗಳಿಗೆ ಹೋಗಿ ಸಂತಾನಾಭಿವೃದ್ಧಿ ಮಾಡುತ್ತದೆ. ಹೆರಿಗೆ ಬಾಣಂತನ ಎಲ್ಲ ಮುಗಿಸಿ ಹಿಮಾಲಯದಲ್ಲಿ ಮಂಜು ಬೀಳಲು ಶುರುವಾಗುವ ಕಾಲಕ್ಕೆ ದಕ್ಷಿಣ ಭಾರತಕ್ಕೆ ವಲಸೆ ಬರುತ್ತದೆ. 
         ಸ್ವಲ್ಪ ನಾಚಿಕೆ ಸ್ವಭಾವದ ಈ ಹಕ್ಕಿ ಬೆಳಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಮಾತ್ರ ವೀ... ಟ್ವೀ.. ಎಂದು ಇಂಪಾಗಿ ಹಾಡುತ್ತದೆ. ನೆರಳಿರುವ ಮರದಬುಡ, ಪೊದೆಗಳು, ತರಗೆಲೆಗಳು, ಹುಳ ಹುಪ್ಪಟೆಗಳು ಸಿಗುವ ಜಾಗಗಳಲ್ಲಿ ಆಹಾರ ಹುಡುಕುತ್ತಾ ಓಡಾಡುತ್ತಿರುತ್ತದೆ. ಮಹಾನಗರದ ಉದ್ಯಾನವನ ಮತ್ತು ಮನೆಗಳ ಹಿತ್ತಲಿನಲ್ಲೂ ಅನೇಕ ಪಕ್ಷಿ ವೀಕ್ಷಕ ಮಿತ್ರರು ಈ ಹಕ್ಕಿಯನ್ನು ಗಮನಿಸಿ ದಾಖಲಿಸಿದ್ದಾರೆ. ನಮ್ಮ ಮನೆಯ ಹಿಂದಿನ ಸಣ್ಣ ಕಾಡಿನಲ್ಲೂ ಈ ಹಕ್ಕಿಯನ್ನು ನಾನು ಅನೇಕಬಾರಿ ನೋಡಿದ್ದೇನೆ. ಇದು ತನ್ನ ಪುಟ್ಟ ಬಾಲವನ್ನು ಕುಣಿಸುತ್ತಾ ನೆಲದಮೇಲೆ ಕುಪ್ಪಳಿಸುತ್ತಾ ಓಡಾಡುವುದನ್ನು ನೋಡುವುದೇ ಚಂದ. ಈ ಬಾರಿ ಚಳಿಗಾಲದಲ್ಲಿ ಈ ನವರಂಗ ನಿಮ್ಮ ಮನೆಯ ಹಿತ್ತಲಿನಲ್ಲೂ ಕಾಣಸಿಗಬಹುದು... ಗಮನಿಸ್ತೀರಲ್ಲ...
ಹಕ್ಕಿಯ ಹೆಸರು: ನವರಂಗ ಅಥವಾ ಹನಾಲುಗುಬ್ಬಿ
ಇಂಗ್ಲೀಷ್ ಹೆಸರು: Indian Pitta
ವೈಜ್ಞಾನಿಕ ಹೆಸರು: (Pitta brachyuran)
ಇನ್ನೊಂದು ಹಕ್ಕಿ ಕಥೆಯ ಜೊತೆ ಮತ್ತೆ ಮುಂದಿನವಾರ ಸಿಗೋಣ, ನಮಸ್ಕಾರ
ಚಿತ್ರ ಕೃಪೆ: ರಾಧಾಕೃಷ್ಣ ರಾವ್ ಬಾಳಿಲ
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
*********************************************



Ads on article

Advertise in articles 1

advertising articles 2

Advertise under the article