-->
ಬದಲಾಗೋಣವೇ ಪ್ಲೀಸ್....! ಸಂಚಿಕೆ - 15

ಬದಲಾಗೋಣವೇ ಪ್ಲೀಸ್....! ಸಂಚಿಕೆ - 15

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು    ಹಣೆಪಟ್ಟಿ ಸಾಕು... ಹಿಮ್ಮಾಹಿತಿ ಬೇಕು
                  (ಹಿರಿಯರಿಗಾಗಿ )
---------------------------------------------
              ಮಕ್ಕಳಿಗೆ ಕೊಡುವ ಹಣೆಪಟ್ಟಿಗಳ ಲೋಕದಲ್ಲಿ ಜೀನಿಯಸ್ , ಆ್ಯಕ್ಟೀವ್, ಸ್ಮಾರ್ಟ್ , ಗುಡ್.. ಇತ್ಯಾದಿಗಳು ಧನಾತ್ಮಕ ಹಣೆಪಟ್ಟಿಗಳಾದರೆ ದಡ್ಡ , ಟ್ಯೂಬ್ ಲೈಟ್ , ಕೊಳಕ , ಬುದ್ದಿಹೀನ, ವೇಸ್ಟ್ ಬಾಡಿ, ದಂಡ ಪಿಂಡ, ಅಯೋಗ್ಯ, ಹೇಡಿ, ಹೆದರು ಪುಕ್ಕಳ, ನಾಲಾಯಕ್ , ಪೆದ್ದಿ , ಸೊಂಬೇರಿ .... ಇತ್ಯಾದಿಗಳು ನಕರಾತ್ಮಕ ಹಣೆ ಪಟ್ಟಿಗಳಾಗಿವೆ.
                    ಈ ರೆಡಿಮೇಡ್ ಹಣೆಪಟ್ಟಿಗಳ ಅರ್ಥ ಗೊತ್ತಿಲ್ಲದಿದ್ದರೂ ನಾಲಗೆ ತುದಿಯಲ್ಲಿ ಇನ್ನೊಬ್ಬರ ಮೇಲೆ ಪ್ರಯೋಗಿಸಲು ಬಾಣದಂತೆ ಸದಾ ಸಿದ್ಧವಾಗಿರುತ್ತವೆ. ಹಣೆಪಟ್ಟಿಗಳು ಕೇವಲ ನಾಲ್ಕೈದು ಅಕ್ಷರಗಳ ಪದವಾದರೂ ಸಕರಾತ್ಮಕ ಹಣೆಪಟ್ಟಿಗಳು ಮಗುವಿನ ಭವ್ಯ ಭವಿತವನ್ನು ಉತ್ಸಾಹಯುತ ಸಾಧನೆಯೆಡೆಗೆ ಸಾಗಿಸಿದರೆ, ನಕರಾತ್ಮಕ ಹಣೆಪಟ್ಟಿಗಳು ಶಕ್ತಿವಂತರನ್ನು ಶಕ್ತಿಹೀನರನ್ನಾಗಿಸುವ, ಭಯರಹಿತರನ್ನು ಭಯಭೀತರನ್ನಾಗಿಸುವ ಹಾಗೂ ಸಾಧಕರನ್ನು ನಿಸ್ಸಾಧಕರನ್ನಾಗಿಸುವ ಭಯಾನಕ ಅಂಶವಾಗಿದೆ.
        ಹಣೆಪಟ್ಟಿಗಳು ಮಕ್ಕಳ ಹಣೆಬರಹವನ್ನು ಬದಲಾಯಿಸಬಹುದು. "ನಿನಗೆ ಲೆಕ್ಕ ತಲೆಗೆ ಹೋಗಲ್ಲ ಪೆದ್ದಿ" ಎಂಬ ಹಣೆಪಟ್ಟಿ ಗಣಿತವನ್ನೇ ದ್ವೇಷಿಸುವ ಹಂತಕ್ಕೆ ಮಗುವನ್ನು ಕೊಂಡು ಹೋಗಬಲ್ಲದು. "ನೀನು ಬದುಕಲು ನಾಲಾಯಕ್ಕು" ಎಂಬ ಹಣೆಪಟ್ಟಿ ಮಗುವನ್ನು ನಿರ್ಜೀವಿಯನ್ನಾಗಿಸಬಹುದು. "ನೀನು ಬರೀ ದಂಡ ಪಿಂಡ" ಎಂಬ ಹಣೆಪಟ್ಟಿ ಮಗುವನ್ನು ನಿಜವಾಗ್ಲೂ ದಂಡ ಪಿಂಡವನ್ನಾಗಿಸಬಹುದು. ಹಾಗಾದರೆ ನಕರಾತ್ಮಕ ಹಣೆಪಟ್ಟಿಗಳು ಬೇಕಾ ಎಂಬುದು ಯಕ್ಷಪ್ರಶ್ನೆಯಾಗಿದೆ....!!!
      ವರ್ತನೆಯಲ್ಲಿನ ಬದಲಾವಣೆಯೇ ಕಲಿಕೆ. ಆ ಕಲಿಕೆಗೆ ನಕರಾತ್ಮಕ ಹಣೆಪಟ್ಟಿಗಳು ಯಾಕಾದರೂ ಬೇಕು. ಹಣೆಪಟ್ಟಿ ನೀಡಿ ಸಾಧಿಸುವುದಾದರೂ ಏನು? ಹಣೆಪಟ್ಟಿ ಬೇಕೇ-ಬೇಡವೇ....? ಎಂಬುದರ ಬಗ್ಗೆ ನೂರಾರು ವರ್ಷಗಳಿಂದ ಪರ- ವಿರೋಧವಾಗಿ ಚರ್ಚೆಗಳು ನಡೆದಿದೆ... ನಡೆಯುತ್ತಿದೆ... ಇನ್ನೂ ನಡೆಯಲಿದೆ. ಇದು ಅನಂತ... ಪರಿಹಾರ ರಹಿತವಾದದ್ದು. ಆದರೂ ಪ್ರಸ್ತುತ ಶೈಕ್ಷಣಿಕ ಅಂತರದ ಕಾಲಘಟ್ಟದಲ್ಲಿ ಹಣೆಪಟ್ಟಿ ಬಿಟ್ಟು ಹಿಮ್ಮಾಹಿತಿ ಕೊಡುವುದೇ ಉತ್ತಮ ಎಂಬುದು ನನ್ನ ಅನಿಸಿಕೆ.
       ನಾವು ಮಕ್ಕಳಿಗೆ ಹಣೆಪಟ್ಟಿ ಕಟ್ಟುವ ಬದಲು ಹಿಮ್ಮಾಹಿತಿ ನೀಡುವುದೇ ಸೂಕ್ತ ಎನ್ನುವುದಕ್ಕೆ ನಮ್ಮ ಬಾಲ್ಯದ ಘಟನೆಗಳೇ ಸಾಕ್ಷಿ. ನಾವು ನಮ್ಮ ಬಾಲ್ಯದಲ್ಲಿ ಹೇಗೆ ಕಲಿಯುತ್ತಿದ್ದೆವು, ಎಷ್ಟು ಕಲಿತಿದ್ದೆವು , ಆಗಿನ ತರಗತಿಯಲ್ಲಿ ಎಂತಹ ವೈವಿಧ್ಯಮಯ ಮಕ್ಕಳಿದ್ದರು ಎಂಬುದನ್ನು ಕಣ್ಣಾರೆ ನೋಡಿದ್ದೇವೆ. ಅಲ್ಲಿ ಉತ್ತಮತನದ ಮಧ್ಯೆ ಅಶಿಸ್ತು , ತುಂಟತನ , ಕಲಿಕೆಯಲ್ಲಿ ಮಂದಗಾಮಿ ಹಾಗೂ ಹಿಂದುಳಿದವರು, ವ್ಯಂಗ ಮಾತುಗಳು, ಸಣ್ಣ ಪುಟ್ಟ ಗಲಾಟೆಗಳು, ದ್ವೇಷಗಳು , ಚಾಡಿ ಮಾತುಗಳು, ಗುಂಪುಗಾರಿಕೆ, ಹೆಣ್ಣುಮಕ್ಕಳು ಹಾಗೂ ಗಂಡುಮಕ್ಕಳ ನಡುವೆ ಸ್ಪರ್ಧೆ - ಪ್ರೀತಿ - ತಾರತಮ್ಯಗಳು... ಇತ್ಯಾದಿಗಳು ಸಹಜವಾಗಿ ಇದ್ದವು. ಇವುಗಳ ಮಧ್ಯೆಯೇ ಮಕ್ಕಳಾಗಿ ಬೆಳೆದ ನಾವು ಹೇಗೆ ಬೋಧನೆಗಳನ್ನು ಕೇಳುತ್ತಿದ್ದೆವು...? ಈ ಸಂದರ್ಭದಲ್ಲಿ ಸಿಕ್ಕಿದ ಹಣೆಪಟ್ಟಿಗಳು ನಮ್ಮ ಅಥವಾ ಸಹಪಾಠಿಗಳ ಮೇಲೆ ಏನೆಲ್ಲ ಪರಿಣಾಮ ಬೀರಿದೆ..? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಮಕ್ಕಳ ಸ್ಥಾನದಲ್ಲಿ ನಮ್ಮ ಕಲಿಕಾ ಜೀವನವನ್ನು ನೋಡಬೇಕು. ಮಕ್ಕಳ ಮಾನಸಿಕ ಸ್ಥಿತಿ ಮನನ ಮಾಡಿಕೊಂಡು ಅವರ ತಪ್ಪುಗಳನ್ನು ತಿದ್ದಲು ಹಿಮ್ಮಾಹಿತಿ ನೀಡುವುದರಿಂದ ಬದಲಾವಣೆ ಖಂಡಿತಾ ಸಾಧ್ಯವಾಗಬಹುದು.
       ಹಣೆಪಟ್ಟಿ ಕ್ಷಣಮಾತ್ರದಲ್ಲೇ ನೀಡಬಹುದು. ಆದರೆ ಅದನ್ನು ಮಕ್ಕಳ ಮನಸ್ಸಿನಿಂದ ಕಿತ್ತು ತೆಗೆಯಲು ತುಂಬಾ ಸಮಯ ಬೇಕಾಗುತ್ತದೆ. ಇದು ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆಯಂತೆ ಸ್ಪಷ್ಟ. ಇದಕ್ಕಾಗಿ ಮೊದಲು ನಾವು ಹಣೆಪಟ್ಟಿ ಕೊಡುವುದರಿಂದ ಹಿಮ್ಮಾಹಿತಿ ಕೊಡುವುದಕ್ಕೆ ಬದಲಾಗಬೇಕಾಗಿದೆ. ಹಿಮ್ಮಾಹಿತಿ ಏಕೆ ಮತ್ತು ಹೇಗೆ ಕೊಡುವುದು..? ಎಂಬುದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಯೋಣ. ಆವರೆಗೆ ನಮ್ಮಲ್ಲಿ ನಾವು ಬದಲಾವಣೆ ಕಂಡುಕೊಳ್ಳೋಣ. ಈ ಬದಲಾವಣೆಗೆ ಯಾರನ್ನು ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್.. ಏನಂತೀರಿ...
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************Ads on article

Advertise in articles 1

advertising articles 2

Advertise under the article