-->
ಓ ಮುದ್ದು ಮನಸೇ ...…...! - 11

ಓ ಮುದ್ದು ಮನಸೇ ...…...! - 11




                   ಮಲಗಿಕೊಂಡವರು "ಏಳಿ" 
                   ಎದ್ದವರು "ಏಚ್ಚೆತ್ತುಕೊಳ್ಳಿ"
       ನೀವು ತಲೆಯನ್ನು ಒಂದು ಯಂತ್ರದ ಒಳಗೆ ತೂರಿ, ಕೆಲವೇ ಕ್ಷಣದಲ್ಲಿ ಆ ಯಂತ್ರವು ಜರಾಕ್ಸ್ ಮಷಿನ್ ನಂತೆ ನಿಮ್ಮ ಮೆದುಳನ್ನು ಯತಾವತ್ತಾಗಿ ಅಚ್ಚೊತ್ತಿ ಕೊಡುವುದಾದರೆ ಮತ್ತು ಹಾಗೆ ತಯಾರಿಸಿದ ಮೆದುಳು ಕಾರ್ಯಗತ ವಾಗುವಂತಿದ್ದರೆ....? ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿನ ಸಾಧನೆ ಅದೆಷ್ಟು ದೊಡ್ಡದು ಅಂದರೆ ಮಾನವನ ಮೆದುಳನ್ನು ಅಚ್ಚು ಹಾಕುವ ಯಂತ್ರವನ್ನು ಸಂಶೋಧನೆಯ ಮೂಲಕ ಕಂಡುಹಿಡಿಯುತ್ತಿರುವುದು ಒಂದು ಉದಾಹರಣೆಯಷ್ಟೇ. ಇಂತಹ ವಿಸ್ಮಯ ಜಗತ್ತಿನಲ್ಲಿ ಬದುಕುತ್ತಿರುವ ನಾವೇ ಧನ್ಯರು ಅಲ್ಲವೇ....!? ನಿಲ್ಲಿ ನಿಲ್ಲಿ.... ನಿಮ್ಮ ಧನ್ಯತೆಗೊಂದು ಫುಲ್ ಸ್ಟಾಪ್ ಇಡಿ. ನಮ್ಮೆಲ್ಲರನ್ನು ಅಚ್ಚರಿಗೊಳಿಸುತ್ತಿರುವ ಈ ವಿಸ್ಮಯಕಾರಿ ತಂತ್ರಜ್ಞಾನಗಳು ಭವಿಷ್ಯತ್ತಿನಲ್ಲಿ ತಂದೊಡ್ಡಬಹುದಾದ ಬಹುದೊಡ್ಡ ಸವಾಲುಗಳನ್ನು ಹೇಳುತ್ತೇನೆ ಕೇಳಿ. ಈ ಸವಾಲುಗಳು ಅಂತಿಂತಹ ಸವಾಲುಗಳಲ್ಲ, ನೀವು ತಿನ್ನುವ ಅನ್ನಕ್ಕೇ ಕನ್ನ ಹಾಕಬಲ್ಲ, ಭವಿಷ್ಯತ್ತಿನ ಭರವಸೆಯನ್ನೇ ಕಿತ್ತುಕೊಳ್ಳಬಲ್ಲ ಕಠಿಣಾತಿ ಕಠಿಣ ಸವಾಲುಗಳು.
        ಚಾಲಕನಿಲ್ಲದೆ ತನ್ನನ್ನು ತಾನೇ ನಿಯಂತ್ರಿಸಿಕೊಂಡು ಚಲಿಸಬಲ್ಲ ಕಾರುಗಳನ್ನು ರಸ್ತೆಗಿಳಿಸಲು ಗೂಗಲ್ ಮತ್ತು ಟೆಸ್ಲಾದಂತಹ ಆಟೋಮೊಬೈಲ್ ಕಂಪನಿಗಳು ಸಿದ್ಧಗೊಂಡಿವೆ. ಅಂತಹ ವಾಹನಗಳೇನಾದರು ಮಾರುಕಟ್ಟೆಗೆ ಬಂದರೆ ಡ್ರೈವರ್ ಉದ್ಯೋಗವನ್ನೇ ಜೀವನಾಧಾರವನ್ನಾಗಿಟ್ಟುಕೊಂಡಿರುವ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರೆ ಅಚ್ಚರಿಯಿಲ್ಲ. ಆನ್ ಲೈನ್ ಮೂಲಕ ನೀವು ವಸ್ತುವೊಂದನ್ನು ಆರ್ಡರ್ ಮಾಡಿದ್ದೀರೆಂದಿಟ್ಟುಕೊಳ್ಳಿ. ಆ ವಸ್ತುವು ನಿಮ್ಮ ಮನೆ ತಲುಪುವ ಸಮಯಕ್ಕೆ ಸರಿಯಾಗಿ ಹೊರಗಡೆಯಿಂದ ರಿಂಗೆಣಿಸಿದಾಗ ಬಾಗಿಲು ತೆರೆದ ನಿಮಗೆ ಹೋಮ್ ಡೆಲೆವರಿ ಬಾಯ್ ಬದಲು ವಸ್ತುವನ್ನು ಹೊತ್ತ ಕ್ಯಾಮರಾ ಕಣ್ಣುಗಳುಳ್ಳ ಡ್ರೋನ್ ಒಂದು ಎದುರಾದರೆ ಹೇಗಿರುತ್ತೆ? ಇಂತಹದ್ದೊಂದು ಸಾಧ್ಯತೆಯು ಬಹಳ ದೂರವಿಲ್ಲ. ತುರ್ತು ರಕ್ಷಣಾ ಕಾರ್ಯದಲ್ಲಿ ಇಂತಹ ಡ್ರೋನ್ ಗಳ ಬಳಕೆ ಈಗಾಗಲೇ ಆರಂಭವಾಗಿದೆ. ಮುಂದೊಂದುದಿನ ಡೆಲಿವೆರಿ ಬಾಯ್ ಗಳ ಕೆಲಸಕ್ಕೆ ಕತ್ತರಿ ಗ್ಯಾರಂಟಿ. ಇನ್ನು, ಹೊಟೆಲ್ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಯಂತ್ರಗಳು ಕೆಲಸಮಾಡುತ್ತಿದ್ದು ದೋಸೆ, ಚಪಾತಿ, ಪೂರಿ ಇತ್ಯಾದಿಗಳನ್ನು ಕ್ಷಣಮಾತ್ರದಲ್ಲಿ ತಯಾರಿಸಿಕೊಡುವ, ಅಡುಗೆ ಮಾಡುವ, ಮಸಾಲೆ ರುಬ್ಬುವ, ತರಕಾರಿ ಕತ್ತರಿಸುವ ಒಟ್ಟಾರೆ ಮಾನವನ ಸಹಾಯವಿಲ್ಲದೆ ತಮ್ಮಿಂದ ತಾವೇ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬಲ್ಲ ಹಲವಾರು ತಂತ್ರಜ್ಞಾನಗಳು ಭಾರತವನ್ನು ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಬಳಕೆಯಲ್ಲಿವೆ. ಇನ್ನು, ಜಪಾನ್ ದೇಶದ "ಹೆನ್ ನಾ" ಎನ್ನುವ ಹೊಟೇಲ್ ಒಂದು ಮಾನವ ಕೆಲಸಗಾರರಿಲ್ಲದೆ ಸಂಪೂರ್ಣ ರೋಬೋಟ್ ಗಳಿಂದಲೇ ನಡೆಸಲ್ಪಡುತ್ತಿರುವುದು ಜಗತ್ತನ್ನೇ ಬೆರಗಾಗಿಸಿದೆ. ಭಾರತದಲ್ಲೂ ಇಂತಹದ್ದೊಂದು ಚಮತ್ಕಾರ ಆರಂಭಗೊಂಡಿದೆ. ಚೆನ್ನೈನ ಮೊಮೊ ಎನ್ನುವ ಹೊಟೇಲ್ ಒಂದು ರೋಬೋಟ್ ಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಮೂಲಕ ಭಾರತದ ಮೊದಲ ಹೊಟೇಲ್ ಗರಿಮೆಗೆ ಪಾತ್ರವಾಗಿದೆ. ಅದೆಷ್ಟೋ ಜನ ಹೊಟೇಲ್ ಉಧ್ಯಮವನ್ನೇ ನಂಬಿ ಬದುಕುವವರಿದ್ದಾರೆ. ಅಡುಗೆ ಮಾಡುವವರು, ಪಾತ್ರೆ ತೊಳೆಯುವವರು, ತರಕಾರಿ ಕತ್ತರಿಸುವವರು, ಸಪ್ಲೈಯರ್ಸ್ ಗಳಿಂದ ಹಿಡಿದು ಗೇಟ್ ಕೀಪರ್ ವರೆಗಿನ ಎಲ್ಲಾ ಕೆಲಸಗಳಿಗೆ ಮುಂದೊಂದು ದಿನ ಕಂಟಕ ತಪ್ಪಿದ್ದಲ್ಲ. ಇತ್ತೀಚೆಗೆ ದುಬೈ ದೇಶದ ಮಾಲ್ ಒಂದು ರೋಬೋ ಪೋಲೀಸ್ ಅಫೀಸರ್ ಒಂದನ್ನು ಅಧಿಕೃತವಾಗಿ ಪರಿಚಯಿಸುವ ಮೂಲಕ ಅಸಾಧಾರಣ ಕೆಲಸಕ್ಕೆ ಕೈ ಹಾಕಿದೆ. ಇಂತಹದ್ದೊಂದು ಪ್ರಯತ್ನ ಪೋಲೀಸ್ ವೃತ್ತಿಯನ್ನು ಬಯಸುವ ಅದೆಷ್ಟೋ ಯುವಕರ ನಿದ್ದೆಗೆಡಿಸಿದರೆ ಆಶ್ಛರ್ಯವಿಲ್ಲ ಅಲ್ಲವೇ? ತಂತ್ರಜ್ಞಾನದ ಕೊಡುಗೆಯು ಕೇವಲ ಈ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ ಆರೋಗ್ಯ ಕ್ಷೇತ್ರಕ್ಕೂ ಕಾಲಿಟ್ಟಿದೆ. ಮನುಷ್ಯನ ಒಂದಿಡೀ ದೇಹದ ಅಂಗಾಂಗಗಳನ್ನೆಲ್ಲ ಜಾಲಾಡಿ, ರೋಗ ರುಜಿನಗಳನ್ನು ಪತ್ತೆ ಹಚ್ಚಿ, ಅದಕ್ಕೆ ಬೇಕಾದ ಔಷದೋಪಚಾರದ ಬಗ್ಗೆ ವೈದ್ಯರಿಗೇ ಸಲಹೆ ಕೊಡಬಲ್ಲ ರೋಬೋಟ್ ಗಳು ಈಗಾಗಲೇ ಬಳಕೆಯಲ್ಲಿವೆ. ಇದು ಕೇವಲ ಸಲಹಗೆ ಮಾತ್ರ ಸೀಮಿತವಾಗಿರದೆ ಆಪರೇಷನ್ ಥಿಯೇಟರ್ ನಲ್ಲಿ ನುರಿತ ವೈದ್ಯರು ಮಾತ್ರ ಮಾಡಬಲ್ಲಂತಹ ಸೂಕ್ಷ್ಮಾತೀ ಸೂಕ್ಷ್ಮ ಕೆಲಸವಾದ ಶಸ್ತ್ರ ಚಿಕಿತ್ಸೆಯನ್ನೂ ಮಾಡಬಲ್ಲ ರೋಬೋಟ್ ಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಡ ವಿನ್ಸಿ ಸರ್ಜಿಕಲ್ ಸಿಸ್ಟಮ್ ಅನ್ನುವುದು ಇದಕ್ಕೊಂದು ಉದಾಹರಣೆ. ಹಾಗಿದ್ದರೆ ಭವಿಷ್ಯತ್ತಿನ ಡಾಕ್ಟರ್ ಗಳ ಕೆಲಸದ ಗತಿ...? ಸಾಮಾನ್ಯವಾಗಿ ಪ್ರತೀ ಶಾಲೆಗಳಲ್ಲಿ ವಿಷಯಕ್ಕೊಬ್ಬರಂತೆ ಹತ್ತಾರು ಶಿಕ್ಷಕರಿರುತ್ತಾರೆ. ಒಬ್ಬರಾದ ಮೇಲೆ ಇನ್ನೊಬ್ಬರಂತೆ ತರಗತಿಗೆ ಬರೋದು, ಪಾಠ ಮಾಡೋದು ಮತ್ತು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳೋದು ಇವೆಲ್ಲವೂ ನಿಯಮಿತ ಸಮಯಕ್ಕೆ ಸೀಮಿತವಾಗಿರುತ್ತದೆ. ಹಿರಿಯ ಶಿಕ್ಷಕರಿದ್ದರೆ ಆರೋಗ್ಯದ ಸಮಸ್ಯೆ, ಹಬ್ಬ ಹರಿದಿನಕ್ಕೆ ರಜಾ, ಅಬ್ಬಬ್ಬಾ ಎಂದರೆ ನಿರಂತರವಾಗಿ ಒಂದೆರೆಡು ಘಂಟೆ ಮಾತ್ರ ಕೆಲಸಮಾಡುವ ಸಾಮರ್ಥ್ಯ, ಮತ್ತೆ ಎಲ್ಲಾ ಶಿಕ್ಷಕರೂ ಒಂದೊಂದು ವಿಷಯಗಳಲ್ಲಿ ಮಾತ್ರ ಹಿಡಿತ ಹೊಂದಿದವರು. ನಿಮ್ಮ ತರಗತಿಯಲ್ಲಿ ಶಿಕ್ಷಕರ ಬದಲು ಒಂದು ರೋಬೋಟ್ ಇಟ್ಟರೆ ಹೇಗೆ...? ಆರೋಗ್ಯದ ಸಮಸ್ಯೆ ಇಲ್ಲ, ರಜೆ ಬೇಡ, ಆಯಾಸವಿಲ್ಲ, ಎಷ್ಟು ವಿಷಯಗಳನ್ನು ಬೇಕಾದರು ತನ್ನೊಳಗಿಟ್ಟುಕೊಳ್ಳುವ ಸಾಮರ್ಥ್ಯ...! ಇಂತಹದ್ದೊಂದು ದಿನ ಬಹಳ ದೂರವೇನಿಲ್ಲ...! ಇವೆಲ್ಲವೂ ಕೇವಲ ಉದಾಹರಣೆಗಳಷ್ಟೇ. ಪ್ರಸ್ತುತ ತಂತ್ರಜ್ಞಾನವು ಎಲ್ಲಾ ಕ್ಷೇತ್ರದಲ್ಲಿ ತನ್ನ ಹೆಜ್ಜೆ ಇಡುತ್ತಿದೆ. ಮಾನವನ ಅನ್ವೇಷಣೆಗಳು ನಮಗೆ ಆಹ್ಲಾದಕರ ಬದುಕನ್ನು ಕೊಡುವುದರ ಜೊತೆ ಜೊತೆಗೆ ನಾಳೆಗಳ ಭರವಸೆಗೆ ಮಾರಕವಾಗಿಬಿಡುತ್ತಾವೇನೋ ಎನ್ನುವ ಭಯ ಹುಟ್ಟಿಸುತ್ತಿವೆ. ಜನಸಂಖ್ಯಾ ಹೆಚ್ಚಳ, ಉದ್ಯೋಗದ ಕೊರತೆ ಈಗಲೇ ನಮ್ಮನ್ನು ಕಾಡುತ್ತಿವೆ. ಇನ್ನು, ಒಂದಿಡೀ ಜಗತ್ತು ತಂತ್ರಜ್ಞಾನದ ಕಪಿಮುಷ್ಠಿಗೆ ಒಳಗಾದರೆ ನಮ್ಮ ಗತಿ....!
        ಅಷ್ಟಕ್ಕೂ ಇವೆಲ್ಲವನ್ನು ನಿಮಗೆ ಹೇಳುತ್ತಿರುವುದರ ಹಿಂದೆ ಕಾರಣವಿದೆ. ಪ್ರಸ್ತುತತೆಯ ಉಲ್ಲಾಸಕ್ಕೆ ಮನಸೋತು ನಾಳೆಗಳ ಸವಾಲನ್ನು ಮರೆತಿರುವ ಇವತ್ತಿನ ಯುವ ಪೀಳಿಗೆಯು ಎಚ್ಚೆತ್ತು ಕೊಳ್ಳಬೇಕಿದೆ. ಮೊಬೈಲ್ ಕೊಡ್ಸಿದ್ರೆ ಮಾತ್ರ ಶಾಲೇಗೆ ಹೋಗೋದು, ನಂಗೆ ಬರೇಯೋಕೆ ಬರಲ್ಲ, ಓದೋದು ಕಷ್ಟ, ಹಾಳಾದ ಪರೀಕ್ಷೆ ಯಾಕಾದ್ರೂ ಬರತ್ತಪ್ಪ. ಯಾವಾಗಲೂ ರಜೆಯಿದ್ರೆ ಎಷ್ಟು ಚೆನ್ನಾ...? ಅಪ್ಪ ಅಮ್ಮಂದಿರ ಮಾತಿಗೆ ಬೆಲೆಕೊಡದ, ಶಿಕ್ಷಕರ ಪಾಠಕ್ಕೆ ತಲೆಕೊಡದ ಅದೆಷ್ಟೋ ವಿದ್ಯಾರ್ಥಿಗಳಿಗೆ ಇದೊಂದು ಎಚ್ಚರಿಕೆಯಾಗಲಿ. ಮಾನವನ ಬುದ್ಧಿಮತ್ತೆ ಮತ್ತು ಹೃದಯವಂತಿಕೆಗೆ ಯಾವ ತಂತ್ರಜ್ಞಾನವೂ ಸರಿಸಾಟಿಯಿಲ್ಲ ಎನ್ನುವುದನ್ನು ಸಾಬೀತು ಪಡಿಸಲು ನಮ್ಮ ಪ್ರಯತ್ನದ ಅನಿವಾರ್ಯತೆಯಿದೆ. ಬಹುಶ ಸ್ವಾಮಿ ವಿವೇಕಾನಂದರು ಅದಕ್ಕಾಗಿಯೇ ಹೇಳಿದ್ದಿರಬೇಕು, ಮಲಗಿಕೊಂಡವರು "ಏಳಿ" ಎದ್ದವರು "ಏಚ್ಚೆತ್ತುಕೊಳ್ಳಿ".
.....................................ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ ಸಮಾಲೋಚಕರು
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
******************************************

 




Ads on article

Advertise in articles 1

advertising articles 2

Advertise under the article