-->
ಸಾಧನೆಗೆ ವಯಸ್ಸಿನ ಹಂಗಿಲ್ಲ

ಸಾಧನೆಗೆ ವಯಸ್ಸಿನ ಹಂಗಿಲ್ಲ


             ಸಾಧನೆಗೆ ವಯಸ್ಸಿನ ಹಂಗಿಲ್ಲ
         ---------------------------------
ಪ್ರೀತಿಯ ಮಕ್ಕಳೇ,......
         ಇಂದು ನಿಮ್ಮಂತೆಯೇ ಬಾಲಪ್ರತಿಭೆಯಾಗಿ ಮಿನುಗಿ,  ಪ್ರಧಾನ ಮಂತ್ರಿಗಳಿಂದಲೇ ಶಹಬ್ಬಾಷ್ ಗಿರಿ ಪಡೆದುಕೊಂಡ ಬಾಲಕನೋರ್ವನ ಯಶೋಗಾಥೆಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ.
       ಆತನೊಳಗೆ ಎಂದೂ ಬತ್ತದ ಉತ್ಸಾಹವಿತ್ತು….. ಕುಗ್ಗದ ಆಸಕ್ತಿ ಅವನ ಜೀವಾಳವಾಗಿತ್ತು…. ಸೋಲಿನುಂಡೆಯಲ್ಲೂ  ಜಯದ ಎಳೆಯನ್ನು ಹೊರತೆಗೆಯುವ ಅಸಾಧಾರಣ ಛಲವಿತ್ತು.…. ಜೊತೆಗೆ ಇವೆಲ್ಲವುಗಳಿಗೆ ಪೂರಕವೆಂಬಂತೆ  ಸುಪ್ತ ಪ್ರತಿಭೆಯು ಅವನೊಳಗೆ ಗುಪ್ತವಾಗಿತ್ತು.
             ದ.ಕ.ಜಿಲ್ಲೆಯ  ಉಪ್ಪಿನಂಗಡಿಯ ಯು.ಎಲ್.ಉದಯಕುಮಾರ್  ಹಾಗೂ ವಿನಯ ದಂಪತಿಗಳ ಪುತ್ರ  ಎ.ಯು.ನಚಿಕೇತ್  ಬಾಲಕನಾಗಿದ್ದಾಗಲೇ  ವಿಸ್ಮಯಗಳೆಡೆಗೆ ಕಣ್ಣರಳಿಸಿ ನೋಡುತ್ತಿದ್ದನು. ಅರಿಯಬೇಕೆಂಬ ಹಂಬಲವಿದ್ದರೂ,  ಅಂಜುಬುರುಕುತನದಿಂದ ತನ್ನೊಳಗಿನ ಆಸೆಗಳಿಗೆಲ್ಲ ತಣ್ಣೀರೆರೆಚುತ್ತಾ ಬಂದನು. ವೇದಿಕೆ ಏರಬೇಕೆಂಬ ತುಡಿತವಿದ್ದರೂ ಸಾಕಷ್ಟು ಧೈರ್ಯ ಸಾಲದೆ ಮೇಲಿಟ್ಟ ಕಾಲುಗಳನ್ನು ಹಾಗೇ ಹಿಂದಕ್ಕೆ ಎಳೆದುಕೊಳ್ಳುತ್ತಿದ್ದನು. ಹೆಚ್ಚು ಅಂತರ್ಮುಖಿಯಾಗಿರುತ್ತಿದ್ದ ಬಾಲಕನ ಎಳೆಯ ಮನಸ್ಸಿಗೆ ಹಾದಿ ಬೀದಿಯಲ್ಲಿ ಕಾಣ ಸಿಗುವ ವಸ್ತುಗಳನ್ನು ಸಂಗ್ರಹಿಸಿಟ್ಟು , ಹೊಸತನ್ನು ತಯಾರಿಸುವುದರಲ್ಲಿ ಮಾತ್ರ ಅಮಿತ ಉತ್ಸಾಹವಿತ್ತು. ಅದರಂತೆ ಮನೆಯೇ ಆತನ ಪುಟ್ಟ  ಸಂಗ್ರಹಾಲಯವಾಗಿತ್ತು.
      ಹೀಗಿರಲು ಬಾಲಕ ಮೂರನೇ ತರಗತಿಯಲ್ಲಿದ್ದಾಗ ಮಗುವಿನ  ಮನದ ಕುತೂಹಲವನ್ನು ಗುರುತಿಸಿ,
ಪೋಷಿಸಿದವರು ಶಿಕ್ಷಕಿ ಬ್ಲೆಂಡಿನ್.
 ಈತ ಒಲ್ಲೆನೆಂದರೂ ಬಿಡದೆ, ಶಿಕ್ಷಕಿ ಅವಕಾಶಗಳನ್ನು ಸೃಷ್ಟಿಸಿ, ಮಗುವಿನೊಳಗಿನ ಪ್ರತಿಭೆ ಅರಳಲು ಸೂರ್ಯರಶ್ಮಿಯಾದರು. ತತ್ಪರಿಣಾಮ ಮಗುವಿನಲ್ಲಿ ಆತ್ಮವಿಶ್ವಾಸ ಪುಟಿಯಲು ಪ್ರಾರಂಭಿಸಿತ್ತು. ಆರಂಭದಲ್ಲಿ  ಚಿತ್ರಕಲೆಯಲ್ಲಿ ಆಸಕ್ತಿ ಗರಿಗೆದರಿತ್ತು. ಅಂದಿನಿಂದ ಚಿತ್ರದೊಳು ಭಾವ ತುಂಬುವ ತನ್ನ ಆಸಕ್ತಿಗೆ ಸಮಯವನ್ನು ವಿನಿಯೋಗಿಸಲು ಆರಂಭಿಸಿದ. ಆದರೆ ತನಗಿಂತಲೂ ಅದ್ವಿತೀಯವಾಗಿ ಚಿತ್ರ ರಚನೆ ಮಾಡುತ್ತಿದ್ದ ಸಹಪಾಠಿಯೇ ಪ್ರತೀ ಬಾರಿ ಅಂತರ್ ಶಾಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಿದ್ದರಿಂದ , ಈತನಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಸದಾವಕಾಶ ದೊರೆಯಲೇ ಇಲ್ಲ. ಅವಕಾಶಗಳು ದೊರೆಯದಿದ್ದರೂ, ಕೈಕಟ್ಟಿ ಕುಳಿತುಕೊಳ್ಳದ ಬಾಲಕ ಬೆಳೆಯುತ್ತಿದ್ದಂತೆ, ಶಾಲೆಯಲ್ಲಿ ದೊರೆಯದ ಅವಕಾಶವನ್ನು  ಶಾಲಾ ಹೊರ ಪರಿಸರದಲ್ಲಿ ಹುಡುಕಲಾರಂಭಿಸಿದ. ಅಂಚೆ ಮುಖೇನ ಅಂತಾರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಗೆ ತಾನು ಅರ್ಜಿ ಹಾಕಿದ್ದಲ್ಲದೆ, ಸಹಪಾಠಿಗಳನ್ನೂ ಹುರಿದುಂಬಿಸಿದ .
           ಫಲಿತಾಂಶ………….!?  ತಾನು ಸೋಲಿಗೆ ಶರಣಾಗಿ ಗೆಳೆಯನ ಗೆಲುವಿನ ನಗೆಯಲ್ಲಿ ಭಾಗಿಯಾದ. ತದನಂತರ ಹಲವಾರು ಬಾರಿ , ಹಲವು ವಿಧದಲ್ಲಿ ಪ್ರಯತ್ನಿಸಿದರೂ ರಾಷ್ಟ್ರಮಟ್ಟದಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡಲಾಗಲೇ ಇಲ್ಲ.    
      ಸತತ ಸೋಲು, ನಿರಾಸೆಯಲ್ಲೂ
 ಮಾ॥ ನಚಿಕೇತನಿಗೆ ಪ್ರೇರಣೆಯಾಗಿದ್ದು , ಶಾಲೆಯಲ್ಲಿದ್ದ ಸ್ಕೌಟ್ಸ್ ವಿಭಾಗ ಹಾಗೂ ಸಂಸ್ಥೆಯಲ್ಲಿ ವಿಜ್ಞಾನ ವಿಷಯದಲ್ಲಿ ಸಂಶೋಧನೆಗೆ ಸಿಗುತ್ತಿದ್ದ ಮಾನ್ಯತೆ ಹಾಗೂ ಪ್ರಾಧಾನ್ಯತೆ .
        ವಿದ್ಯಾರ್ಥಿಯಾಗಿ ವಿಜ್ಞಾನ ವಿಷಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದ ಈತ ಹಲವಾರು ಸಂಶೋಧನೆಗಳಲ್ಲಿ ತನ್ನನ್ನು ತೊಡಗಿಸಿ ಕೊಳ್ಳಲಾರಂಭಿಸಿದ. ಇದರಿಂದಾಗಿ ಏಕಾಂಗಿಯಾಗಿ ಸ್ಪರ್ಧಾರ್ಥಿಯಾಗಿ…, ಕೆಲವೊಮ್ಮೆ ಕಲಿಕಾರ್ಥಿಯಾಗಿ ಪರ ಊರಿಗೆ  ಪ್ರಯಾಣಿಸಬೇಕಾದ ಸಂದರ್ಭ ಒದಗಿಬಂದಿತು. ಅನಿವಾರ್ಯ ಹಾಗೂ ಅಗತ್ಯ ಎಂಬಂತೆ ಈಗ ಆತನೊಳಗಿನ ಮೌನ ಕರಗಲಾರಂಭಿಸಿತು. ಅಂಜಿಕೆ ಹೋಗಿ  ಧ್ವನಿಯು ಹೊರಬರಲಾರಂಭಿಸಿತು. ಘನ ಹುದ್ದೆಯ ಅಧಿಕಾರಿಗಳೊಂದಿಗೆ ಸಂವಹನ ನಡೆಸಲಿದ್ದ ಅಧೈರ್ಯ ತನ್ನಿಂದ ತಾನಾಗಿಯೇ ಮಾಯವಾಗಲಾರಂಭಿಸಿತು. ಹಿರಿಯರ , ಸಹಪಾಠಿಗಳ ಬೆಂಬಲ , ಹೆತ್ತವರ ಪ್ರೋತ್ಸಾಹ ಸಂಶೋಧನಾ ಕ್ಷೇತ್ರದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಪ್ರೇರಣೆಯೊದಗಿಸಿತು.
         ಅಂದು ಶಾಲೆಯಿಂದ ಒಟ್ಟು 6 ತಂಡಗಳು ಅಂತರ್ ಶಾಲಾ ಮಟ್ಟದ ಸ್ಪರ್ಧೆಗೆ ಹೊರಟು ನಿಂತಿದ್ದವು. ಒಂದು ತಂಡದಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಸ್ಪರ್ಧೆ ಮುಗಿಸಿ ಹಿಂದಿರುಗುವಾಗ ಐದು ತಂಡಗಳ ಸದಸ್ಯರ ಮನದಲ್ಲಿ ಗೆಲುವಿನ ಸಂಭ್ರಮವಿದ್ದರೆ,  ನಚಿಕೇತ್ ಹಾಗೂ  ಮತ್ತವನ ಸಹಸ್ಪರ್ಧಿಯ ಮನದಲ್ಲಿ ಸೋತ ನೋವು ಮಡುಗಟ್ಟಿತ್ತು. ನಿರಾಶೆ…. ದುಃಖದ ಮಧ್ಯೆಯೂ ಸಹಸ್ಪರ್ಧಿ, "ಇನ್ನು ಮುಂದಿನ ವರ್ಷದ ಸ್ಪರ್ಧೆಯಲ್ಲಿ ನಾನು ಬೇರೊಬ್ಬನ ಜತೆ ಸ್ಪರ್ಧಿಸುವೆ" ಎಂಬ ತಿರಸ್ಕಾರದ ನಿರ್ಧಾರ ಪ್ರಕಟಿಸಿದಾಗ ಸೋಲಿಗೆ ತಾನೇ ಕಾರಣನಾದೆನೆಂಬ ಭಾವ ಮೂಡಿ ಮತ್ತಷ್ಟು ಮನಸ್ಸು ತಲ್ಲಣಗೊಂಡಿತ್ತು .
           ಅಂದು ರಾತ್ರಿ 8 .30 ರ ವೇಳೆ ಸ್ಪರ್ಧೆಗೆ ಕರೆದೊಯ್ದಿದ್ದ ಶಿಕ್ಷಕ ಕೃಷ್ಣಪ್ರಸಾದ್ ನಚಿಕೇತನನ್ನು ಮನೆಗೆ ಕರೆತಂದು ಬಿಡುತ್ತಾ, ಈತನ ನೋವನ್ನು  ಅರಿತವರಂತೆ ,, "ಇಂದಿನ ಸೋಲು ನಿನ್ನ ನಾಳೆಯ ಗೆಲುವಿಗೆ ಮೆಟ್ಟಿಲಾಗಬಹುದು , ಧೃತಿಗೆಡಬೇಡ." ಎಂಬ ಧೈರ್ಯದ ಮಾತುಗಳಿಗೆ ಬಾಲಕನ ಕಣ್ಣಲ್ಲಿ  ಜಿನುಗಿದ ನೀರು ಉತ್ತರವಾಯ್ತು. ಆತ್ಮವಿಶ್ವಾಸವನ್ನು ಬಲಗೊಳಿಸಿತು. ಸ್ಪರ್ಧೆಯಲ್ಲಿ ಸೋತರೂ ಪ್ರೀತಿಯಿಂದ ಬರಮಾಡಿಕೊಂಡ ಮನೆಯವರು, ಅಪ್ಪನಿಂದ "ಮುಂದಕ್ಕೆ ಸಾಗುತ್ತಿರು... ಧೃತಿಗೆಡದಿರು" ಎಂಬ ಭಾವ ಹೊತ್ತ ಬೆನ್ನ ಮೇಲಣ ಕರತಾಡನ ಬಾಲಕನಿಗೆ ನಿರಾಶೆಯಲ್ಲೂ ಆಶಾಕಿರಣ ಮೂಡಿದಂತಾಯಿತು.
          ತದನಂತರ ವರುಷಗಳ  ನಿತ್ಯ ಪರಿಶ್ರಮ, ಸತತ ಪ್ರಯತ್ನದ ಫಲವಾಗಿ ರಾಷ್ಟ್ರೀಯ ವಿಜ್ಞಾನ ಸಮಾವೇಶವೊಂದರಲ್ಲಿ ತೋರಿದ  ತಂಡ ಪ್ರಯತ್ನದಲ್ಲಿ  ಯಶಸ್ಸು ಸಂಪಾದಿಸಿ 2016 ರಲ್ಲಿ ಚಂಡೀಗಡದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ  ಭಾಗವಹಿಸಿದ  ಸಂತಸ  ನಚಿಕೇತನಿಗೆ ಪ್ರಾಪ್ತಿಯಾದ ಮೊದಲ ಸಂತೃಪ್ತಿ .
         2017ರಲ್ಲಿ  ನಡೆದ ಯುನಿಸೆಫ್ ವಿಜ್ಞಾನ ಸ್ಪರ್ಧೆಯಲ್ಲಿ ಹೆಸರು ನೋಂದಾಯಿಸಲಾಯಿತಾದರೂ , ಬಿಂಬುಳಿ ಹಣ್ಣಿನಿಂದ ವಿನೇಗರ್ ತಯಾರಿಸಬಹುದೆಂಬ ಇವನ ಸಂಶೋಧನೆ ಮೊದಲ ಪರೀಕ್ಷೆಯಲ್ಲಿಯೇ ಅನುತ್ತೀರ್ಣಗೊಂಡಿತು. ಆದರೂ ಪ್ರಾಜೆಕ್ಟ್ ವರದಿಯನ್ನು ಸಲ್ಲಿಸುವ ದಿನಗಳು ಹತ್ತಿರವಾದಂತೆ  ದಿಕ್ಕು ಕಾಣದಾದಾಗ ಗೆಳೆಯ ಅಮನ್ ನ ಅಜ್ಜನ ಸಲಹೆಯಂತೆ ಆ್ಯಸಿಡ್ ಬದಲಾಗಿ ಬಿಂಬುಳಿ ಹಣ್ಣಿನ ರಸವನ್ನು ಹಾಕಿ ರಬ್ಬರ್ ಶೀಟ್ ತಯಾರು ಮಾಡುವ ಸಂಶೋಧನೆ ಮಾಡಿ ಪರೀಕ್ಷೆಗೆ ಕಳುಹಿಸಲಾಯಿತು.
        ನಂತರ ನಡೆದದ್ದೆಲ್ಲವೂ ಅವಿಸ್ಮರಣೀಯ. ಈ ಸಂಶೋದನೆಯು ವಿಭಾಗೀಯ ಮಟ್ಟ , ರಾಷ್ಟ್ರೀಯ ಮಟ್ಟದಲ್ಲೂ ಚಿನ್ನದ ಪದಕ ಪಡೆದು, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಯಿತು. ಅಮೇರಿಕಾದ ಟೆಕ್ಸಾಸ್ ನಲ್ಲಿ 2017ರಲ್ಲಿ  ನಡೆದ  ಐಸ್ವೀಪ್ 2017 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ಜಾಗತಿಕ ಪ್ರಶಸ್ತಿ ಪಡೆದ ಸಾಧಕನಾಗಿ ಹೊರಹೊಮ್ಮಿದ ಹೆಮ್ಮೆಯ ನಚಿಕೇತ್ ನಮ್ಮ ಬದುಕಿಗೊಂದು ಪ್ರೇರಣೆ. ನಿಮ್ಮೆಲ್ಲರ ನಡೆಗೆ ಸ್ಫೂರ್ತಿಯ ಸಿಂಚನ.  
           ಮುಂದೆ ಗೂಗಲ್ ಸೈನ್ಸ್ ಫೇರ್ ಸ್ಪರ್ಧೆಯಲ್ಲಿ ಭಾಗವಹಿಸಿ 2019 ರಲ್ಲಿ ಅಮೇರಿಕಾದ ಕ್ಯಾಲಿಪೋರ್ನಿಯಾದಲ್ಲಿನ ಗೂಗಲ್ ಹೆಡ್ ಕ್ವಾರ್ಟರ್ಸ್ ನಲ್ಲಿ ಹದಿನೈದು ಸಾವಿರ ಅಮೇರಿಕಾದ  $  ಬಹುಮಾನದೊಂದಿಗೆ ನ್ಯಾಷನಲ್ ಜಿಯೋಗ್ರಾಫಿಕ್ ಅವಾರ್ಡ್ ಪಡೆದುಕೊಂಡ ಸಾಧಕನೆನಿಸಿಕೊಂಡ ನಚಿಕೇತ್ ನಮ್ಮ ನಡುವಿನ ಅನರ್ಘ್ಯ ರತ್ನ.  
         2019ರಲ್ಲಿ ವಿಜ್ಞಾನ  ಕ್ಷೇತ್ರದ ಈತನ ಸಾಧನೆಗಳನ್ನು ಗುರುತಿಸಿ ಭಾರತ ಸರ್ಕಾರ  ಎಳೆಯ ಸಾಧಕರಿಗೆ ನೀಡುವ ಪ್ರಧಾನ ಮಂತ್ರಿ ಬಾಲಶಕ್ತಿ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಹಲವು ಸಂಘಟನೆಗಳು ಬಾಲಕನ ಸಾಧನೆಗೆ ಬೆನ್ನು ತಟ್ಟಿದವು. ನಚಿಕೇತ್ ನಂತೆ ನಿಶ್ಚಲ ಗುರಿಯಿದ್ದು , ಶ್ರದ್ಧೆಯಿಂದ ಮುನ್ನಡೆದರೆ ನಮ್ಮ ಬದುಕೂ ಆದರ್ಶವಾದೀತಲ್ಲವೇ..?
          ಮಕ್ಕಳೆ, ಒಂದು ಕ್ಷಣ ಕಣ್ಣು ಮುಚ್ಚಿ ನೀವೇ ಯೋಚನೆ ಮಾಡಿ.... ಪ್ರಯತ್ನ ಪಟ್ಟರೆ ನಮ್ಮಲ್ಲೂ ಹಲವಾರು ನಚಿಕೇತರು ಉದಯವಾಗಲು ಸಾಧ್ಯವಿದೆ.  ಕುಂದದ ದೃಢತೆ, ಕುಗ್ಗದ ವಿಶ್ವಾಸ ನಮ್ಮ ಶಕ್ತಿಯಾಗಬೇಕು. ಅವಕಾಶಗಳು ನಮ್ಮ ಕದವನ್ನು  ತಟ್ಟುವವರೆಗೆ ನಾವು ಕಾಯುತ್ತಾ ಕುಳಿತುಕೊಳ್ಳಬಾರದು. ಬದಲಾಗಿ  ನಾವೇ ಅವಕಾಶವನ್ನು ಸೃಜಿಸಬೇಕು.., ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮ ಮನೋಬಲವನ್ನು ದಿನೇದಿನೇ ಗಟ್ಟಿಗೊಳಿಸಬೇಕು. ನಾವು ದಿನಕ್ಕೆ ಒಮ್ಮೆಯಾದರೂ   ಅಂತರಂಗ ಯಾನವನ್ನು ಕೈಗೊಳ್ಳಬೇಕು. ಆ ಮೂಲಕ ನಮಗೆದುರಾದ  ಸೋಲಿಗೆ ಕಾರಣಗಳನ್ನು ಹುಡುಕಬೇಕು…. ಪರಾಮರ್ಶಿಸಬೇಕು.. ಹಾಗೆಯೇ ಆ ಸೋಲಿನಲ್ಲೂ ಗೆಲುವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಗೆಲ್ಲಬೇಕು. 
ಏನಂತೀರಿ ಮಕ್ಕಳೇ…...............?
..................................................ಹರಿಣಾಕ್ಷಿ. ಕೆ
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
*******************************************



Ads on article

Advertise in articles 1

advertising articles 2

Advertise under the article