-->
ಪದಗಳ ಆಟ ಭಾವ ಚಿತ್ರ ಪಾತ್ರ (ಸಂಚಿಕೆ - 9)

ಪದಗಳ ಆಟ ಭಾವ ಚಿತ್ರ ಪಾತ್ರ (ಸಂಚಿಕೆ - 9)

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 9

              ನೀತಿಯವನಲ್ಲ ಜಾತಿಯವನಲ್ಲ
              ನಾಮದವನಲ್ಲ ಸೀಮೆಯವನಲ್ಲ
ತತ್ವಜ್ಞಾನಿ ಎನ್ನಲೆ,  ರಾಜಕೀಯ ಮುತ್ಸದ್ದಿ ಎನ್ನಲೇ, ಕವಿ ಎನ್ನಲೇ ಸಮಾಜ ಸುಧಾರಕ ಎನ್ನಲೇ, ಸಾಮಾನ್ಯ ಜನೋದ್ಧಾರಕ ಎನ್ನಲೇ.. 
         ರಾಜರ ಅರಮನೆಯೊಳಗೆ ಬಂಧಿಯಾಗಿದ್ದ ಸಾಹಿತ್ಯ ಸರಸ್ವತಿಯನ್ನು ಬಡವರ ಹೃದಯವಾಸಿ ಯನ್ನಾಗಿ ಮಾಡಿ ಮಾತೆತ್ತಿದರೆ ಕಾವ್ಯ ಸೃಷ್ಟಿಯಾಗುವ ಹಾಗೆ ಮಾಡಿದ ಯುಗಪ್ರವರ್ತಕ. ಶ್ರೀಮಂತ-ಬಡವ ಹೆಣ್ಣು- ಗಂಡು,  ಸಾಮಾನ್ಯ - ಅಸಾಮಾನ್ಯ ಬ್ರಾಹ್ಮಣ - ಅಬ್ರಾಹ್ಮಣ, ಕರಿ - ಬಿಳಿಯ, ಹಿಂದೂ - ಅಹಿಂದು ಯಾವ ಭೇದಭಾವವಿಲ್ಲದ ಸಮಾನ ಚಿಂತಕ. ಮೊದಲ ಸಂಸತ್ತು ಸಂಸ್ಥಾಪಕ. 
          ವೈದಿಕ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ವಿಧಿಸಿದ್ದ ಪಂಚ ಸೂತಕ ಗಳಿಂದ ಮುಕ್ತಗೊಳಿಸಿ ಸಮಾನ ಅಧಿಕಾರ ಕೊಟ್ಟು ಸಾಮಾಜಿಕ ಶೋಷಣೆಯಿಂದ ವಿಮೋಚನೆಗೊಳಿಸಿದ. ಹೆಣ್ಣಿಗೆ ತೊಡಿಸಿದ್ದ ಸಂಕೋಲೆಯನ್ನು ಕಿತ್ತೊಗೆದ. ಗಂಡನಿಗೆ ಸಮಾನವಾಗಿ ತಲೆಯೆತ್ತಿ ನಿಲ್ಲುವಂತೆ ಮಾಡಿದ. ಆ ಕಾಲದಲ್ಲಿ ಇಂತಹ ಸುಧಾರಣೆಗಳನ್ನು ತಂದಿರುವುದು ಒಂದು 
ಕ್ರಾಂತಿಯೇ ಸರಿ.
           ಭಕ್ತಿಯ ಖಜಾನೆ. ದೇವನನ್ನು  ದೇವ ಮಂದಿರದಿಂದ ಬಯಲಿಗೆ ತಂದ ಭಕ್ತಾಗ್ರೇಸರ. ಸತ್ಯ-ಮಿಥ್ಯಗಳ ವೈಪರೀತ್ಯವನ್ನು ಬಯಲಿಗೆಳೆದು ಬೂಟಾಟಿಕೆಯ ಭಕ್ತಿಯನ್ನು ವಿಡಂಬನೆ ಮಾಡಿದ. ಯಾವುದು ಸ್ಥಿರ?   ಯಾವುದು ಜಂಗಮ ? ಯಾವುದು ಶಾಶ್ವತ ? ಯಾವುದು ನಶ್ವರ ? ಜನರಿಗೆ ಅರ್ಥವಾಗುವ ಕನ್ನಡಕ್ಕೆ ಮಣೆಯಿಟ್ಟು,  ಮನ್ನಣೆ ಕೊಟ್ಟು ತತ್ವ ವೇದಾಂತಗಳನ್ನು ಮನಕೆ ಹತ್ತಿರ ತಂದ. ದೇವಾಲಯವ ಮನೆಗೆ ತಂದು,  ಶರೀರದಲ್ಲಿ ಸ್ಥಾಪಿಸಿ,  ದೇವರ ಮನದಲ್ಲಿ ನಿಲ್ಲಿಸಿ ತಾನು ಜಂಗಮವಾದ. ಪ್ರಶ್ನಿಸದೇ ಉಳಿದ ದೇವರು ಎಂಬ ಸತ್ಯದ ಬಗ್ಗೆ ಮೂಢನಂಬಿಕೆ , ಅಂಧ  ಆಚರಣೆಗಳ ಬಗ್ಗೆ ಪ್ರಶ್ನಿಸಿದ , ಧೈರ್ಯಶಾಲಿಯಾದ. ಮೋಕ್ಷಕ್ಕೆ ಅತ್ಯಂತ ಸರಳ ಸುಂದರ ಮಾರ್ಗ ತೋರಿಸಿದ  ಅದ್ವೈತ ಚಿಂತಕ. ಒಬ್ಬನ ಆತ್ಮವೇ ಶಿವ , ಶಿವನೇ ಆತ್ಮ . ಕೆಲಸದಿಂದ ಶೂದ್ರನಲ್ಲ ಕಾಯಕದಿಂದ ಕೈಲಾಸ. ಷಟ್ಸ್ಥಲ ಸಿದ್ಧಾಂತದ ಪ್ರವರ್ತಕ. ಭಕ್ತ , ಒಡೆಯ ,  ಕೃಪಾಸಿಂಧು,  ಪ್ರಾಣಲಿಂಗ, ಶರಣ, ಐಕ್ಯ ಮುಕ್ತಿ. 
         ಜ್ಞಾನಕ್ಕಿಂತ ಭಕ್ತಿ ಮಿಗಿಲು ಎಂದು ಎಲ್ಲಾ ವರ್ಗದ ಶ್ರಮಿಕರ ಮೂಲಕ ಕಾಣಿಸಿದ. ಅರಿವಿಗಿಂತ ದೊಡ್ಡ ಗುರುವಿಲ್ಲ ಎಂದ. ಅವನ ಅಧ್ಯಾತ್ಮದ ಪರಿಭಾಷೆಯೇ ಬೇರೆ. ಮಾನವ ಅಸ್ತಿತ್ವದ ಪಾತಳಿಗಳಲ್ಲಿ ಪ್ರಶ್ನಿಸಿದ ಅರಿವು ಅವನದು. ಲೌಕಿಕ ಹಾಗೂ ಪಾರಮಾರ್ಥಿಕ ಎರಡು ಸತ್ಯಗಳನ್ನು ಪ್ರಶ್ನಿಸಿ ಸತ್ಯ ಎಂದು ತಿಳಿದದ್ದು ಅದೆಲ್ಲಾ ಸುಳ್ಳು ಎಂದ. ಉಭಯ ವಳಿದು 
ಬೆಳಗಿದ ಜಾಣ. 
      ನೀತಿಯವನಲ್ಲ ಜಾತಿಯವನಲ್ಲ   
      ನಾಮದವನಲ್ಲ ಸೀಮೆಯವನಲ್ಲ
      ದಿಟದವನಲ್ಲ , ಸಟೆಯವನಲ್ಲ
      ಚರಿತನಲ್ಲ, ಅಚರಿತನಲ್ಲ
      ಕುಬುದ್ಧಿಯವನಲ್ಲ ಸುಬುದ್ಧಿಯವನಲ್ಲ
      ಅಹಂಕಾರಿಯಲ್ಲ,, ನಿರಹಂಕಾರಿಯಲ್ಲ
      ದುರ್ಭಾವದವನಲ್ಲ,  ಸದ್ಭಾವದವನಲ್ಲ
      ಇಹದವನಲ್ಲ, ಪರದವನಲ್ಲ  
     ಪುಣ್ಯದವನಲ್ಲ,  ಪಾಪದವನಲ್ಲ
     ಕಾರಣನಲ್ಲ, ಕಾರ್ಯನಲ್ಲ
     ವೈದಿಕನಲ್ಲ,  ವ್ಯವಹಾರಿಕನಲ್ಲ
     ಕರ್ಮಿಯಲ್ಲ,  ಧರ್ಮಿಯಲ್ಲ
ಈ ಪ್ರಾಪಂಚಿಕ ಪ್ರಭೇದಗಳನೆಲ್ಲ ಮೀರಿದ ಜ್ಞಾನೋದಯದ ಅವಸ್ಥೆಯನ್ನು, ಆನಂದದ ಸ್ತರವನ್ನು ತಲುಪಿದ ಸಾಧಕ. 
      ಆತನ ಅನುಭವ ವಿಶೇಷಗಳೆಲ್ಲ ಆ ಕಾಲದ ಜನರದು  ಮಾತ್ರವಲ್ಲ ಇಂದಿನ ಜನಮಾನಸವನ್ನು ರೂಪಾಂತರಿಸುವ, ಮಾನಸಿಕ ವಿನ್ಯಾಸವನ್ನು ಪರಿಷ್ಕರಿಸುವ ಅದ್ಭುತ ಕಾರ್ಯವನ್ನು ಮಾಡುತ್ತವೆ. ನಮ್ಮ ಮೂಲಭೂತ ಧೋರಣೆಗಳನ್ನೇ ಆಮೂಲಾಗ್ರವಾಗಿ ಬದಲಾಯಿಸುವ ಈ ಅನುಭವಗಳು ಆಳವಾದ ಅನುಭವರತ್ನಗಳು. ಆದ್ದರಿಂದಲೇ ಆತ ಬುದ್ಧಿ-ಭಾವಗಳ ವಿದ್ಯುದಾಲಿಂಗನದಂತಿದ್ದ.   ಜೈವಿಕವಾಗಿ ಅಗೋಚರವಾದ ಆತ್ಮವನ್ನು ಸತತವಾಗಿ ಅನುಭವಕ್ಕೆ ತಂದುಕೊಂಡು,  ಅದರ ಕುರಿತು ಯೋಚಿಸಿ, ಸಂವಾದಿಸಿ, ಕಾವ್ಯ ಸೃಷ್ಟಿಸಿ ಅದನ್ನು ಸಮಾಜದ ಎಲ್ಲರಿಗೂ ಅರಿವಿಗೆ ಬರುವ ಹಾಗೆ ಮಾಡಿರುವಲ್ಲಿ ಆತನ ಬೌದ್ಧಿಕ ಎಲ್ಲೆ  ವೇದ್ಯವಾಗುತ್ತದೆ.
      ಜ್ಞಾನದ ಬಲದಿಂದ ಅಜ್ಞಾನದ ಕೇಡು
      ಜ್ಯೋತಿಯ ಬಲದಿಂದ ತಮಂಧದ ಕೇಡು
      ಸತ್ಯದ ಬಲದಿಂದ ಅಸತ್ಯದ ಕೇಡು
      ಪರುಷದ ಬಲದಿಂದ ಅವಲೋಹದ ಕೇಡು
      ಶರಣರ ಅನುಭಾವದಿಂದ ಎನ್ನ ಭವದ ಕೇಡು       
ನಿಂದಿಸಿದರೆ ನಿಂದಿಸಲಿ ಬಿಡು
ಆರೋಪಗಳ ಹೊರಿಸಲಿ ಬಿಡು
ಅವರವರ ಬುತ್ತಿ ಅವರ ಹೆಗಲಿಗೆ
ಸುಮ್ಮನಿದ್ದು ಬಿಡು.
         ಈ ಸುಮ್ಮನಿರುವ ಪರಮ ಅನುಭೂತಿಗೆ ತಲುಪುವ ಪಯಣ ಪ್ರಯಾಸವೇ.  ಆಯಾಸ ತಪ್ಪಿಸಿ ಅನಾಯಾಸದಿಂದ ಆನಂದ ಹೊಂದಲು ಸುಲಭ, ಸರಳ ಸುಂದರ ಉಪಾಯ ವಚನಾಮೃತ.
        ಇಂಥವರು ನಿಮ್ಮೊಳಗಿಲ್ಲವೇ ...............?
...................................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************

Ads on article

Advertise in articles 1

advertising articles 2

Advertise under the article