-->
ಪದಗಳ ಆಟ ಭಾವಚಿತ್ರ ಪಾತ್ರ (ಸಂಚಿಕೆ - 8)

ಪದಗಳ ಆಟ ಭಾವಚಿತ್ರ ಪಾತ್ರ (ಸಂಚಿಕೆ - 8)

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 8

                  ಮಾತು ಮಾತಿಗೂ ಮಾತೆ
             ದಣಿವರಿಯದ ಪ್ರೀತಿಗೂ ಮಾತೆ

                ಜನನಿಯಾಗದೆ ಅಮ್ಮನಾದೆ, ಲೋಕಮಾತೆಯಾದೆ. ಹೇ ತಾಯಿ ಭವದ ಬಂಧನ ಬೇಡವೆಂದು ಸೇವೆಯ ಆಯ್ಕೆ ಮಾಡಿದೆಯಾ?
          ನೊಂದವರಿಗಾಗಿ ಮಿಡಿವ ನಿನ್ನ ಹೃದಯ ನಿನ್ನ ದೇಹಕ್ಕೆ ಪರರಿಗಾಗಿ ಬದುಕು ಎಂದಿತಲ್ಲ. ನೀನು ಯಾವ ಮಗುವಿಗೂ ಜನ್ಮ ಕೊಡಲಿಲ್ಲ. ಆದರೆ ನಿನ್ನ ಸೇವೆಯಿಂದ ಅದೆಷ್ಟು ಬಡವರು , ದರಿದ್ರರು, ರೋಗಿಗಳು ಋಣಮುಕ್ತರಾಗಿ ನವ ಜನ್ಮವನ್ನು ಪಡೆದರಲ್ಲ. ಎಂಥ ಧನ್ಯ, ಸಾರ್ಥಕ, ಪಾವನ ಜೀವನ ನಿನ್ನದು ತಾಯಿ....? 20ನೇ ಶತಮಾನದ ಅತ್ಯಂತ ಶ್ರೇಷ್ಠತಮ ಮಾನವತಾವಾದಿ ಪುನೀತೆ,  ಸುಜನ ಪ್ರೀತೆ,  ಮಾತೆ ಪ್ರೀತಿದಾತೆ.
         ನಿನ್ನ ಮಾತೆ ಹಂಚಿ ಉಣ್ಣದಿರುತ್ತಿದ್ದರೆ, ಹಸಿದವರಿಗೆ ಬಡಿಸದೇ ಒಂದು ತುತ್ತು ತಿನ್ನಬೇಡ ಎಂದು ನಿನಗೆ ಕಲಿಸದಿರುತ್ತಿದ್ದರೆ, ಬಡವರೆಲ್ಲ ನನ್ನ ಸಂಬಂಧಿಕರಲ್ಲದಿದ್ದರೂ ನನ್ನವರು ಎಂದು ಸಹಾನುಭೂತಿ  ತೋರಿಸದಿರುತ್ತಿದ್ದರೆ,.. ಲೋಕಮಾತೆ ಜನಿಸುತ್ತಿರಲಿಲ್ಲ. ನಿನಗೆ ನಿನ್ನ ಹೃದಯದ ಕರೆ ಕೇಳಿಸದಿರುತ್ತಿದ್ದರೆ, ನೀನು  ಅದಕ್ಕೆ ಓಗೊಡದಿರುತ್ತಿದ್ದರೆ,...
        ಅದೆಷ್ಟು ಅವಕಾಶವಂಚಿತರ ದನಿ  ನಿನಗೆ ಕೇಳಿಸುತ್ತಿರಲಿಲ್ಲ. ಅದೆಷ್ಟೋ ಹೆಣ್ಣುಮಕ್ಕಳು ಅಜ್ಞಾನಿಗಳಾಗಿ ಬಡವರಾಗಿಯೇ ಉಳಿಯುತ್ತಿದ್ದರು. ನಿನ್ನೊಳಗೆ ದಯೆ, ಕರುಣೆ, ಔದಾರ್ಯ, ನಿರಂತರ ನಿಷ್ಠೆ ಇಲ್ಲದಿರುತ್ತಿದ್ದರೆ ಲಕ್ಷ ಲಕ್ಷ ಮಂದಿ ಅಕಾಲದಲ್ಲಿ ಮರಣಿಸುತ್ತಿದ್ದರು. ನೀನು ಬೋಧನೆಯ ವೃತ್ತಿಯನ್ನು ತ್ಯಾಗ ಮಾಡದಿರುತ್ತಿದ್ದರೆ, ಕೊಳಚೆಗೇರಿಯ ಬೀದಿಗಳಲ್ಲಿ ಅಲೆದಾಡದಿರುತ್ತಿದ್ದರೆ,  ನೊಂದವರ, ಬನ್ನ ಪಟ್ಟವರ,  ನಿರಾಶ್ರಿತರ , ಪ್ರೀತಿ ವಂಚಿತರ,  ಅಲಕ್ಷಿತರ ದನಿ ನಿನಗೆ ಕೇಳುತ್ತಿರಲಿಲ್ಲ....  ಅದು ಎಷ್ಟು ಶತಮಾನಗಳವರೆಗೂ ಕೇಳುತ್ತಿರಲಿಲ್ಲ. ಮರಣಶಯ್ಯೆಯಲ್ಲಿರುವ ರೋಗಿಗಳ ಆರ್ತತೆ ನಿನಗೆ ತಟ್ಟದಿರುತ್ತಿದ್ದರೆ, ಅದೆಷ್ಟೋ ಕುಟುಂಬಗಳು ಬೀದಿ ಪಾಲಾಗುತ್ತಿದ್ದವು. ಅವೆಷ್ಟೋ  ಕನಸುಕಂಗಳು ದೃಷ್ಟಿಹೀನ ಆಗುತ್ತಿದ್ದವು. ಅವೆಷ್ಟೋ  ಮಕ್ಕಳು ಅನಾಥವಾಗಿಯೇ ಪರಂಧಾಮಗೈಯುತ್ತಿದ್ದವು.
       ನೀನು ದೀನದಲಿತರಿಗಾಗಿ ಆಶ್ರಮ, ಬಯಲ ಶಾಲೆ, ಸಂಚಾರಿ ಆರೋಗ್ಯ ಕ್ಲಿನಿಕ್ ಗಳನ್ನು  ತೆರೆಯದಿರುತ್ತಿದ್ದರೆ ಭಾರತ ಎಷ್ಟುಹಿಂದೆ ಉಳಿದಿರುತ್ತಿತ್ತು. ನಿನ್ನ ಈ ಸೇವಾ ಹೃದಯ ಎಷ್ಟು ವಿಶಾಲವಾದುದು. ಅದಕ್ಕೆ ಧರ್ಮ ಕಾಣಲಿಲ್ಲ, ಮತ ಗೊತ್ತಾಗಲಿಲ್ಲ, ಬಣ್ಣ ತಿಳಿಯಲಿಲ್ಲ, ವಾಸನೆ ಅರಿವಾಗಲಿಲ್ಲ, ರೋಗಕ್ಕೆ ಹೆದರಲಿಲ್ಲ, ಬೆದರಿಕೆಗೆ ಬಗ್ಗಲಿಲ್ಲ, ರಾಜಕೀಯಕ್ಕೆ ಅಂಜಲಿಲ್ಲ. ಆಯಾಸ, ದಣಿವು, ನಿದ್ದೆ, ವಿಶ್ರಾಂತಿ, ಪ್ರಲೋಭನೆ ನಿನ್ನ ಪದಕೋಶದಲ್ಲಿ ಸುಳಿಯಲಿಲ್ಲ. ಹೃನ್ಮಯ  ಕೋಶದಲ್ಲಿ ಇದ್ದದ್ದು ಒಂದೇ. ಅಖಂಡ ನಿಷ್ಕಲ್ಮಶ ಪ್ರೀತಿ,ಪ್ರೇಮ, ಕರುಣೆ,  ಸಹಾನುಭೂತಿ, ಔದಾರ್ಯ, ಶಾಂತಿ, ಸಹನೆ, ಕ್ಷಮೆ. ಎಲ್ಲಾ ಮಾನವರನ್ನು ಒಂದೇ ಸೂತ್ರದಲ್ಲಿ ಬಂಧಿಸಿದ ನಿನ್ನ ಪ್ರೇಮ ಸಾರ್ವತ್ರಿಕ ಪ್ರೇಮ.
       ನಿನ್ನ ಒಂದು ಕೈಯಲ್ಲಿ ನೀರಿನ ಪಾತ್ರೆ
       ನರಕದ  ಬೆಂಕಿಯನ್ನು ಆರಿಸಲಿಕ್ಕೆ.
       ಇನ್ನೊಂದು ಕೈಯ ದೊಂದಿ 
       ಸ್ವರ್ಗದಲ್ಲಿಯ ಕೀರ್ತಿಯನ್ನು  ಸುಡಲಿಕ್ಕೆ.
ಅಬ್ಬಾ ಮಹಾತ್ಮರ ಹೃದಯಾರವಿಂದದಿಂದ ಅರಳಿ ಅವರ ವದನಾರವಿಂದದಿಂದ ಮಾತ್ರ ಇಂಥ ಮಾರ್ಮಿಕ ಹೊನ್ನುಡಿಗಳು ಬರಲು ಸಾಧ್ಯ. ಇಂದು ಅಗತ್ಯವಿರುವವರಿಗೆ ಈ ಭೂಮಿಯಲ್ಲಿ ಬದುಕು ಕೊಡಬೇಕಾಗುತ್ತದೆ,  ಸ್ವರ್ಗ-ನರಕಗಳ ಭಯವಲ್ಲ ಎಂದ ಗಟ್ಟಿಗಿತ್ತಿ ಅಮ್ಮ ನೀನು. ಅಪ್ರತಿಮ ವಾಸ್ತವವಾದಿ ನೀನು. ಲೋಕದಲ್ಲಿ ಅಳುವ ಅಸಂಖ್ಯಾತ ಹಸುಳೆಗಳಿಗೆ ಮಾತೃ ವಾತ್ಸಲ್ಯವನ್ನು ಹರಿಸಬೇಕಾದರೆ ನಿನ್ನಂತಹ ಮಹಾಮಾತೆಗೆ ಮಾತ್ರ ಸಾಧ್ಯ.
       ನಿನ್ನೊಳಗಿನ ಅಪರಿಮಿತ ಅಚ್ಚಿನ್ನ ಪ್ರೇಮ ಹೃದಯತುಂಬಿ, ಮನದುಂಬಿ ಸುಭಾಷಿತಗಳು ಹರಿದು ಬರುತ್ತಲ್ಲಾ. ಆ ಅಣಿಮುತ್ತುಗಳು ನಮ್ಮನ್ನು ಪರಿಷ್ಕರಿಸುವ  ಸ್ಪರ್ಶಮಣಿ ಗಳು. ಶಾಂತಿಯ ಆರಂಭ ನಗು ಎಂದ ನೀನು ಶಾಂತಿದೂತೆಯಾದೆ. ಅಶಾಂತಿ,  ದುಃಖ ಇರುವಲ್ಲಿ ನಿನ್ನನ್ನು ಸಾಕ್ಷಿಪ್ರಜ್ಞೆ ಕರೆದೊಯ್ಯಿತು. ನೀನು ಜನರ ಬಗ್ಗೆ ತೀರ್ಮಾನ ತಗೊಳ್ಳಲು ಹೋಗುತ್ತಿದ್ದರೆ ಅವರ ಆತ್ಯಂತಿಕವಾದ ಪ್ರೀತಿಗೆ ಸಮಯ ಸಿಗುತ್ತಿರಲಿಲ್ಲ. ನಿನ್ನ ಸೌಜನ್ಯಪೂರ್ಣ ಮಮತಾಮಯಿ ಮಾತುಗಳು ಚಿಕ್ಕವಾದರೂ ಅವುಗಳ ಪರಿಣಾಮ ಧೀರ್ಘಕಾಲಿಕ,  ಶಾಶ್ವತ. ಇವು ಅಮ್ಮ ನಿನ್ನ ಅನುಭವದ ದರ್ಶನ, ಕಾಣ್ಕೆಗಳು. ಯೋಚನೆ, ವಚನ,  ಕೃತ್ಯಗಳಲ್ಲಿ ಏಕಸೂತ್ರತೆಯನ್ನು  ಸುಸ್ಥಿರಗೊಳಿಸಿ ಸರಳತೆಯನ್ನು ಉಸಿರಾಡಿದೆ.  ನೀನು ಜೀವರಲ್ಲಿ ಜೀವವಾಗಿ ಇನ್ನೂ ಚಿರಂಜೀವಿ. ಅಜರಾಮರೆ, ಅಚ್ಯುತೆ.
ಇಂಥವರು ನಿಮ್ಮೊಳಗಿಲ್ಲವೇ ...............?.................................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು
Mob: +91 99016 38372
*********************************************Ads on article

Advertise in articles 1

advertising articles 2

Advertise under the article