-->
ಜೀವನ ಸಂಭ್ರಮ  ಸಂಚಿಕೆ - 5

ಜೀವನ ಸಂಭ್ರಮ ಸಂಚಿಕೆ - 5


                        ಸಂತಸದ ಕಲಿಕೆ 
           ಮಕ್ಕಳೇ.... ನಾವೆಲ್ಲ ತಿಳಿದುಕೊಂಡಿರುವುದು ಕಲಿಯುವುದಕ್ಕಾಗಿ ಶಾಲೆಗೆ ಹೋಗುತ್ತೇವೆ ಎಂದು. ಇದು ಪೂರ್ಣ ಸತ್ಯವಲ್ಲ. ತೆರೆದ ಮನಸ್ಸಿದ್ದರೆ , ಪ್ರತೀ ಸಂದರ್ಭದಲ್ಲೂ , ಸನ್ನಿವೇಶದಲ್ಲೂ ಮತ್ತು ಘಟನೆಯಲ್ಲೂ ಕಲಿಯಬಹುದಾಗಿದೆ. ಅಕ್ಷರ ಕಲಿಕೆ ಮತ್ತು ವಿಷಯ ಕಲಿಕೆ ಮಾತ್ರ ಕಲಿಕೆಯಲ್ಲ . ವ್ಯವಸಾಯ ಮಾಡುವುದು , ಅಡುಗೆ ಮಾಡುವುದು , ಸ್ವಚ್ಛ ಪರಿಸರ ಕಾಪಾಡುವುದು , ನಮ್ಮ ಬಟ್ಟೆಗಳಿಗೆ ಇಸ್ತ್ರಿ ಮಾಡುವುದು ಹೀಗೆ ಜೀವನಕ್ಕೆ ಬೇಕಾದುದೆಲ್ಲವನ್ನೂ ಕಲಿಯಬೇಕಾಗುತ್ತದೆ. ಇದೂ ಕೂಡ ಕಲಿಕೆಯೆ.     
        ಕಲಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ನೆನಪು ಮತ್ತು ಮರೆವು. ಮರೆವು ತಪ್ಪೆ.........? ಅಲ್ಲ. ಅದು ವರ. ನಮಗೇನಾದರೂ ಮರೆವು ಇರದಿದ್ದಲ್ಲಿ ಈ ಲೋಕವೇ ಮನೋರೋಗದಿಂದ ತುಂಬಿರುತ್ತಿತ್ತು. ಸಾವು , ನೋವು , ಅಹಿತಕರ ಘಟನೆಗಳನ್ನು ನಾವು ಮರೆಯಲೇಬೇಕು. ಇದು ದೇವರು ಕೊಟ್ಟ ವರ. ಆದರೆ ಕೆಲವರಿಗೆ ಕಲಿತಿದ್ದು ನೆನಪಿನಲ್ಲಿ ಉಳಿಯುವುದಿಲ್ಲ ಎನ್ನುತ್ತಾರೆ. ಅದು ಸುಳ್ಳು. ಬಹುತೇಕ ಜನ ಕಷ್ಟಪಟ್ಟು ಕಲಿಯಬೇಕು ಎನ್ನುತ್ತಾರೆ. ಅದು ತಪ್ಪು. ಏನೇ ಕಲಿತರೂ ಇಷ್ಟಪಟ್ಟು ಕಲಿಯಬೇಕು. ಏಕೆ ಇಷ್ಟಪಟ್ಟು ಕಲಿಯಬೇಕು.........? ಮಕ್ಕಳೇ......, ನಮ್ಮ ಮೆದುಳು ಈಗಾಗಲೇ ಹೇಳಿದಂತೆ ಸಂತೋಷವಾಗಿರುವುದನ್ನು, ಇಷ್ಟವಾಗಿರುವುದನ್ನು ಮಾತ್ರ ನೆನಪಿನಲ್ಲಿ ಇಡುತ್ತದೆ .
            ನೆನಪಿನಲ್ಲಿ ಇರಬೇಕಾದರೆ ಇಷ್ಟಪಟ್ಟು , ಸಂತೋಷದಿಂದ, ಪ್ರೀತಿಯಿಂದ ಕಲಿಯಬೇಕು . ಕೆಲವು ಮಕ್ಕಳಿಗೆ ಕೆಲವು ವಿಷಯ ಕಠಿಣ ಎನಿಸುತ್ತದೆ. ಏಕೆಂದರೆ ಅರ್ಥವಾಗದಿದ್ದರೆ ಎಲ್ಲವೂ ಕಷ್ಟವೇ. ಅದಕ್ಕೆ ನಾವು ಕಲಿಯುವ ಪ್ರತಿಯೊಂದನ್ನು ಅರ್ಥಮಾಡಿಕೊಳ್ಳಬೇಕು. ಅರ್ಥವಾಗದಿದ್ದರೆ ಶಿಕ್ಷಕರಲ್ಲಿ ಮತ್ತು ಸ್ನೇಹಿತರಲ್ಲಿ ಪ್ರಶ್ನಿಸಿ ಪ್ರಶ್ನಿಸಿ ಅರ್ಥಮಾಡಿಕೊಳ್ಳಬೇಕು. ಕಲಿಕೆ ನಿಮ್ಮ ಹಕ್ಕು. ಬೇರೆಯವರು ಏನೆನ್ನುತ್ತಾರೆ ಎನ್ನುವುದು ಮುಖ್ಯವಲ್ಲ. ಅರ್ಥಮಾಡಿಕೊಳ್ಳುವುದೇ ಮುಖ್ಯ. 
               ಯಾವುದೇ ಕೆಲಸ ಅಥವಾ ಕಲಿಕೆ ಸಂತಸದಾಯಕ ಆಗುವಂತೆ ಯೋಜಿಸಬೇಕು. ಅದಕ್ಕಾಗಿ ವೇಳಾಪಟ್ಟಿ ಅಗತ್ಯ. ವೇಳಾಪಟ್ಟಿ ಕೇವಲ ಕಲಿಕೆಗೆ ಮಾತ್ರ ಸೀಮಿತವಲ್ಲ. ನೀವು ಸಂತೋಷದಾಯಕವಾಗಿ ಇರಬೇಕಾದರೆ, ಪ್ರತಿ ಕೆಲಸಕ್ಕೂ ವೇಳಾಪಟ್ಟಿ ಬೇಕು. ಇದನ್ನು ಪ್ರತಿದಿನ ಮಾಡಬೇಕು. ಇದು ಜೀವನಪರ್ಯಂತ ಮಾಡಬೇಕು. ಮಕ್ಕಳೇ, ಕಲಿಕೆ ಜೀವನಕ್ಕಾಗಿ, ಪರೀಕ್ಷೆಗಾಗಿ ಅಲ್ಲ. ಪರೀಕ್ಷೆಗಾಗಿ ಕಲಿತರೆ ಪರೀಕ್ಷೆಯ ನಂತರ ಕಲಿತ ವಿಷಯ ಮರೆತುಹೋಗುತ್ತದೆ. ಜೀವನಕ್ಕಾಗಿ ಕಲಿತರೆ ಜೀವನ ಮತ್ತು ಪರೀಕ್ಷೆ ಎರಡಕ್ಕೂ ಅನುಕೂಲವಾಗುತ್ತದೆ. ಕಲಿಕೆಗೆ ಯಾವುದೇ ಅಡ್ಡ ದಾರಿಯಿಲ್ಲ. 
         ಸಂತೋಷದ ಕಲಿಕೆಗಾಗಿ ಏನು ಮಾಡಬೇಕು.......? ಯಾವುದೇ ಒಂದು ಕೆಲಸವನ್ನು ದೀರ್ಘಕಾಲ ಮಾಡಿದರೆ , ಮನಸ್ಸಿಗೆ ಆಯಾಸವಾಗಿ , ಕೆಲಸದಲ್ಲಿ ಆಸಕ್ತಿ ಬರುವುದಿಲ್ಲ. ಅದಕ್ಕಾಗಿ ಸ್ವಲ್ಪ ಸ್ವಲ್ಪ ಕಲಿಕೆ ಅಥವಾ ಕೆಲಸವನ್ನು ಅಂದವಾಗಿ , ಮನಸ್ಸಿಟ್ಟು , ಶ್ರದ್ಧೆಯಿಂದ ಮತ್ತು ಪ್ರೀತಿಪೂರ್ವಕವಾಗಿ ಮಾಡಬೇಕು. ನಂತರ ವಿರಾಮ. ಇಲ್ಲಿ ವಿರಾಮ ಎಂದರೆ ಕೆಲಸ ಅಥವಾ ಕಲಿಕೆಯ ಬದಲಾವಣೆ ಅಷ್ಟೆ. ಅದಕ್ಕಾಗಿ ವೇಳಾಪಟ್ಟಿ ಬೇಕು. ಕಲಿಕೆಗಾಗಿ ಚಿಕ್ಕ-ಚಿಕ್ಕ ಗುರಿಗಳನ್ನು ನಿಗದಿ ಮಾಡಿಕೊಳ್ಳಬೇಕು. ಚಿಕ್ಕ ಚಿಕ್ಕ ಗುರಿಗಳು ದೊಡ್ಡ ಗುರಿಗೆ ಪೂರಕವಾಗಿರಬೇಕು. ಉದಾಹರಣೆಗೆ ನೀವು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಪಡೆಯುವುದು ನಿಮ್ಮ ಗುರಿಯಾಗಿದ್ದರೆ. ಪ್ರತಿದಿನ ಇಂತಿಷ್ಟು ಕಲಿಯಲೇಬೇಕೆಂಬ ಚಿಕ್ಕ ಚಿಕ್ಕ ಗುರಿ ಹಾಕಿಕೊಳ್ಳಬೇಕು. ಆ ಗುರಿಗಳನ್ನು ಪ್ರೀತಿಯಿಂದ , ಶ್ರದ್ಧೆಯಿಟ್ಟು ತಲುಪಲೇಬೇಕು. ನಾವು ಒಂದು ವಿಷಯ ಓದಲು ಕುಳಿತುಕೊಂಡೆವೆಂದರೆ 40 ನಿಮಿಷ ಮಾತ್ರ ಓದಬೇಕು. ಏಕೆಂದರೆ ನಮ್ಮ ಮೆದುಳು ಕೇವಲ 40 ನಿಮಿಷ ಮಾತ್ರ ಏಕಾಗ್ರತೆಯಿಂದ ಕೂಡಿರುತ್ತದೆ. ಇದು ಮನಶಾಸ್ತ್ರಜ್ಞರ ಸಂಶೋಧನೆಯಿಂದ ಕಂಡುಕೊಂಡ ಸತ್ಯ. ಹಾಗಾಗಿ 40 ನಿಮಿಷ ಇಷ್ಟಪಟ್ಟು ಅರ್ಥವಾಗುವಷ್ಟು ಬಾರಿ ಓದಿ. ಒಬ್ಬೊಬ್ಬರ ಓದಿನ ವೇಗ, ಗ್ರಹಿಸುವ ವೇಗ , ಬೇರೆ ಬೇರೆಯಾಗಿರುತ್ತದೆ. ವಿಷಯದ ಕಠಿಣತೆಗೆ ಅನುಗುಣವಾಗಿ ವಾಕ್ಯ ಎಷ್ಟೇ ಉದ್ದ ವಿರಲಿ , ಕೆಲವು ಬಾರಿ ಒಂದೊಂದು ಪದ, ಕೆಲವು ಬಾರಿ ಎರಡು ಅಥವಾ ಮೂರು ಪದವನ್ನು ಓದಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಓದುವ ಮುನ್ನ ಮುಖ್ಯ ಶೀರ್ಷಿಕೆ, ಉಪಶೀರ್ಷಿಕೆ , ಚಿತ್ರ , ಸೂತ್ರಗಳು ಮತ್ತು ಕೋಷ್ಟಕಗಳನ್ನು ಗಮನವಿಟ್ಟು ನೋಡಿ, ಪ್ರಶ್ನೆ ಮಾಡಿಕೊಂಡರೆ ಉತ್ತಮ. ಒಂದು ಪ್ಯಾರ ಓದಿದ ನಂತರ ಅದನ್ನು ಚಿತ್ರದ ರೂಪದಲ್ಲಿ ಕಲ್ಪಿಸಿಕೊಳ್ಳಬೇಕು. ನಮ್ಮ ಮುಂದೆ ಘಟನೆ ನಡೆದಂತೆ ಕಲ್ಪಿಸಿಕೊಳ್ಳಬೇಕು. ಈ ರೀತಿ ಚಿತ್ರದ ರೂಪದಲ್ಲಿ ಕಲ್ಪಿಸಿಕೊಂಡಾಗ ಅದು ಹೆಚ್ಚು ನೆನಪಿನಲ್ಲಿ ಇರುತ್ತದೆ. ನಂತರ ಪುಸ್ತಕ ಮುಚ್ಚಿ , ನಮ್ಮ ಸ್ವಂತ ವಾಕ್ಯದಲ್ಲಿ ಕಲ್ಪಿಸಿಕೊಂಡಂತೆ ಬರೆಯುವುದು. ಒಮ್ಮೆ ಬರೆದರೆ ನಾಲ್ಕು ಬಾರಿ ಓದಿದ್ದಕ್ಕೆ ಸಮ. ಹೀಗೆ 40 ನಿಮಿಷ ಓದಿದನಂತರ ನಾಲ್ಕೈದು ಬಾರಿ ಧೀರ್ಘ ಶ್ವಾಸ ತೆಗೆದುಕೊಳ್ಳುವುದು ಮತ್ತು ನೀರು ಕುಡಿಯುವುದು. ಐದು ನಿಮಿಷ ವಿಶ್ರಾಂತಿ ಪಡೆದು , ಇನ್ನೊಂದು ವಿಷಯ ಓದಲು ಪ್ರಾರಂಭಿಸಬೇಕು. ಹೀಗೆ ಪ್ರತಿಬಾರಿ ಓದುವ ಮುನ್ನ , ನಮಗೆ ನಾವೇ ಆತ್ಮವಿಶ್ವಾಸ ಮೂಡಿಸಿಕೊಳ್ಳಬೇಕು. ಇದು ನನ್ನಿಂದ ಸಾಧ್ಯ ಎಂದು ಹೇಳಿಕೊಳ್ಳಬೇಕು. ನೀರು ಕುಡಿಯುವುದರಿಂದ ಮೆದುಳಿನ ಜೀವಕೋಶಗಳ ನಿರ್ಜಲೀಕರಣವನ್ನು ತಡೆಯುತ್ತದೆ. ದೀರ್ಘಶ್ವಾಸದಿಂದ ಮೆದುಳು ಹೆಚ್ಚು ಆಮ್ಲಜನಕ ಪಡೆದು ಮೆದುಳಿನ ಜೀವಕೋಶಗಳು ಚುರುಕುಗೊಳ್ಳುತ್ತವೆ. ಅನಂತರ ವಾರಕ್ಕೊಮ್ಮೆ ಬರೆದಿರುವುದನ್ನು ಪುನರಾವರ್ತನೆ ಮಾಡಬೇಕು.ಯಾವ ವ್ಯಕ್ತಿ ನಿರಂತರ ಹೊಸ ಹೊಸ ಕಲಿಕೆ ಕಲಿಯುತ್ತಾನೋ , ಆತನಿಗೆ ಜೀವನದಲ್ಲಿ ಭಯವಿರುವುದಿಲ್ಲ. ಹೊಸ ಹೊಸ ಕಲಿಕೆಯಿಂದ ಬೇರೆ ಬೇರೆ ನಾವೀನ್ಯಯುತ ಕೆಲಸ ಮಾಡುವುದು ಸಾಧ್ಯ. ಯಾವುದೇ ಕೆಲಸ ಕನಿಷ್ಟವಲ್ಲ. ನಾವು ಮಾಡುವ ವಿಧಾನದಿಂದ ಅದರ ಸಫಲತೆ - ವಿಫಲತೆ ಅಡಗಿರುತ್ತದೆ. ಯಾವುದೇ ಕಲಿಕೆ ಅಥವಾ ಕೆಲಸ ಕಾಟಾಚಾರದಿಂದ, ಬೇಜವಾಬ್ದಾರಿಯಿಂದ ಮಾಡಿದರೆ ಅದು ವಿಫಲತೆಗೆ ದಾರಿ. 
          ಕಲಿಕೆ ಜೀವನಪರ್ಯಂತ ಇರಬೇಕು. ಕೆಲವು ಪುಸ್ತಕಗಳು ಸ್ಪೂರ್ತಿ ನೀಡುತ್ತವೆ. ಜೀವನಕ್ಕೆ ಉತ್ಸಾಹ , ಆತ್ಮವಿಶ್ವಾಸ ಮತ್ತು ಸಂತೋಷ ನೀಡಿದರೆ , ಅಂತಹ ಪುಸ್ತಕಗಳನ್ನು ದಿನನಿತ್ಯ ಸ್ವಲ್ಪವಾದರೂ ಓದಬೇಕು. ಇನ್ನು ಕೆಲವು ಜ್ಞಾನವನ್ನು ನೀಡುತ್ತದೆ. ಪಡೆದ ಜ್ಞಾನವನ್ನು ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಕಲಿಕೆ ಅನುಭವವಾದಾಗ ಅದು ಅನುಭೂತಿ(wisdom) ಆಗುತ್ತದೆ. ಜ್ಞಾನಕ್ಕಿಂತ ಅನುಭೂತಿ ಮಹತ್ವದ್ದು. ಜ್ಞಾನ ಪಡೆದವರೆಲ್ಲ ಮಹಾನ್ ವ್ಯಕ್ತಿಗಳು ಆಗಲಿಲ್ಲ. ಆದರೆ ಮಹಾನ್ ವ್ಯಕ್ತಿಗಳೆಲ್ಲರೂ ಅನುಭೂತಿ ಪಡೆದವರಾಗಿದ್ದಾರೆ. ಮಕ್ಕಳೇ..... ಕಲಿಯುವಾಗ ಅಡ್ಡಿಪಡಿಸುವ ವಸ್ತುಗಳಿಂದ ದೂರ ಇರಬೇಕು. ಇಷ್ಟಪಟ್ಟು ಕಲಿತು, ಕಲಿತಿದ್ದನ್ನು ಅನುಭವಿಸಿ , ಈ ದೇಶದ ಮಹಾನ್ ವ್ಯಕ್ತಿಗಳಾಗಿ ಎನ್ನುವುದು ಈ ಲೇಖನದ ಉದ್ದೇಶ.
............................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
**********************************************


Ads on article

Advertise in articles 1

advertising articles 2

Advertise under the article