-->
ಬದಲಾಗೋಣವೇ ಪ್ಲೀಸ್....! ಸಂಚಿಕೆ - 11

ಬದಲಾಗೋಣವೇ ಪ್ಲೀಸ್....! ಸಂಚಿಕೆ - 11

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು

   ಬದಲಾಗೋಣವೇ ಪ್ಲೀಸ್....! ಸಂಚಿಕೆ - 11
   
                     ಬೆಳಕು ಕಲಿಸಿದ ಪಾಠ
            -------------------------------------
     ಬೆಳಕಿನ ಕಿಡಿಯೊಂದರಲ್ಲಿ ಮಾನವೀಯತೆಯು ಪ್ರಶ್ನೆಯನ್ನು ಕೇಳುತ್ತದೆ " ಅಯ್ಯಾ ಬೆಳಕಿನ ಕಿಡಿಯೇ , ಗಾಢ ಅಂಧಕಾರದ ಕಗ್ಗತ್ತಲ  ಕೋಣೆಯೊಳಗೆ ಬೆಳಕಿನ ದೀಪವನ್ನು ಬೆಳಗಿಸುವ ನೀನು ಕತ್ತಲಲ್ಲಿದ್ದವರಿಗೆ ಉಪಕಾರಿಯಾಗುತ್ತೀಯಾ ........?                       
ದೇವಾಲಯದಲ್ಲಿ ದೇವರ ದೀಪವನ್ನು ಬೆಳಗಿಸಿ ಭಕ್ತರ ನಂಬಿಕೆಗೆ ಸಾಲು ದೀಪವಾಗುತ್ತೀಯಾ.........?   ಅಡುಗೆ ಕೋಣೆಯಲ್ಲಿ ಸಾವಿರಾರು ಜನರಿಗೆ ಆಹಾರ ನೀಡಲು ಶಕ್ತಿಯ ಕಿಡಿಯಾಗುತ್ತೀಯಾ.........? ಬದುಕಿನ ಬಂಡಿಯ ಕಾಯಕದ ಆಧಾರಕ್ಕೆ ಬೆಳಕಾಗಿ ಜೀವನಾಧಾರವಾಗುತ್ತೀಯಾ.........? ಆದರೆ ಕೆಲವೊಮ್ಮೆ ಬೆಂಕಿಯ ಕೊಳ್ಳಿಯಾಗಿ ಮನೆಯನ್ನೇ ಸುಡುತ್ತೀಯಾ ........? ಕಾಡ್ಗಿಚ್ಚಿನ ಕೆನ್ನಾಲೆಯಲ್ಲಿ  ಜೀವ ಸಂಕುಲದ ಮರಣ ಮೃದಂಗ ಬಾರಿಸುತ್ತೀಯಾ.........? ಈ ರೀತಿ  ಒಮ್ಮೆ ವರವಾಗಿಯೂ ಮತ್ತೊಮ್ಮೆ  ಶಾಪವಾಗಿಯೂ ಏಕೆ ವರ್ತಿಸುತ್ತೀಯಾ ........? " ಎಂದು ಕೇಳಿತು.                               ಆಗ ಬೆಳಕಿನ ಕಿಡಿಯು " ಅಯ್ಯಾ ಮಾನವೀಯತೆಯೇ ,  ನಾನು ವರವೂ ಅಲ್ಲ ಶಾಪವೂ ಅಲ್ಲ. ನನಗೆ ನನ್ನದೇ ಆದ ಆಯ್ಕೆ ಇಲ್ಲ. ನನ್ನ ಕೈಯಲ್ಲಿ ಏನು ಆಗಲ್ಲ. ನನ್ನನ್ನು ಯಾರು ಬೇಕಾದರೂ ಎಲ್ಲಿ ಬೇಕಾದರೂ ಉಪಯೋಗಿಸಬಹುದು. ಸಮನಾದ ಬೆಳಕನ್ನೇ ಅಥವಾ ಬೆಂಕಿಯನ್ನು ಕೊಡುತ್ತೇನೆ. ಆದರೆ ಯಾರು ಹಚ್ಚಿದ್ದಾರೆ ಎಂಬುದೇ ಮುಖ್ಯ . ಹಚ್ಚುವವರು ಒಳ್ಳೆಯವರಾದರೆ ಬೆಳಕು ನೀಡುತ್ತೇನೆ. ಹಚ್ಚುವವರು ಹುಚ್ಚರಾದರೆ ನೋವಿನ ಸರಮಾಲೆ ನೀಡುತ್ತೇನೆ.... ಅಷ್ಟೇ ವ್ಯತ್ಯಾಸ. ಹಾಗಾಗಿ ನಾನು ದಿನಾಲೂ ಒಳ್ಳೆಯವರ ಕೈಯೊಳಗೆ ಸೇರಲು ಪ್ರಾರ್ಥಿಸುತ್ತೇನೆ. ಆದರೆ ನೀನು ಮಾತ್ರ ನಿನ್ನ ಬದುಕಿನ ಆಯ್ಕೆಯನ್ನು ಇನ್ನೊಬ್ಬರ ಕೈಯಲ್ಲಿ ಕೊಡಬೇಡ. ಕೊಟ್ಟರೂ ಸಜ್ಜನರ ಕೈಯಲ್ಲಿ ಕೊಡು... ಹುಷಾರ್ " ಎಂದು ಹೇಳಿತು.

       ಹೌದಲ್ವ ... ನಾವು ಕೂಡಾ ನಮ್ಮ ಬದುಕಿನ ಆಯ್ಕೆ ಅಥವಾ ಸ್ವಾತಂತ್ರ್ಯವನ್ನು ಯಾವಾಗ ಇನ್ನೊಬ್ಬರ ಕೈಯೊಳಗೆ ಕೊಡುತ್ತೇವೋ ಅದೇ ಫಲವನ್ನು ಪಡೆಯುತ್ತೇವೆ. ಕೆಟ್ಟವರ ಸಂಗ ಅಥವಾ ದುರ್ಜನರ ಕೈಗೆ ನಮ್ಮ ಬದುಕನ್ನು ಕೊಟ್ಟು ತನ್ನನ್ನು ತಾನು ಮಾದಕ ಚಟ, ಕುಡಿತ, ಜೀತ, ಅನಗತ್ಯ ಸಾಲ ಮತ್ತು ಕೆಟ್ಟ ಗುಣಗಳ ನರಕ ಕೂಪಕ್ಕೆ ತಳ್ಳಿದ ಅನೇಕ ಉದಾಹರಣೆಗಳನ್ನು ನಾವಿಂದು ಕಾಣಬಹುದಾಗಿದೆ.  ಹಾಗಾಗಿ ನಾವು ನಮ್ಮ ಬದುಕಿನ ಆಯ್ಕೆಯನ್ನು ನಾವೇ ನಿರ್ಧರಿಸಬೇಕು ಅಥವಾ ಸಜ್ಜನರ ಕೈಯಲ್ಲಿ ನೀಡಬೇಕು. ಆಗ ಬದುಕು ಬಂಗಾರವಾಗುವುದು.
         ಯಾವ ದೀಪದ ಬೆಳಕನ್ನು ಗಾಳಿಗೆ ನಂದಬಾರದೆಂದು ಎರಡೂ ಕೈಗಳ ಆಸರೆ ಕೊಟ್ಟು ಕಾಪಾಡುತ್ತೇವೋ ಅದೇ ದೀಪ ಒಮ್ಮೊಮ್ಮೆ ಅಗೋಚರವಾದ ಅಸ್ಪಷ್ಟ ಗಾಳಿಯ ಪ್ರಭಾವಕ್ಕೊಳಗಾಗಿ ಆಸರೆಯಾಗಿಹ ಕೈಯನ್ನೇ ಸುಡುತ್ತದೆ. ಅದೇ ರೀತಿ ನಾವು ಅಮೂಲ್ಯವಾದ ಸಮಯವನ್ನು ಅಥವಾ ಶ್ರಮವನ್ನು ಯಾರಿಗೆ ನೀಡುತ್ತೇವೆಯೂ ಅವರೇ ಬೇರಾವುದೇ ಅಪಕಲ್ಪಿತ ವಿಚಾರಗಳಿಂದ (ಗಾಳಿಮಾತಿನ ಪ್ರಭಾವದಿಂದ) ಕೆಲವೊಮ್ಮೆ ನಮ್ಮನ್ನು ಸುಡಬಹುದು ಅಥವಾ ನೋಯಿಸಬಹುದು.  ಆದರೂ ನಾವು ಆಸರೆಯಾಗಿರುವುದನ್ನು ಬಿಡಬಾರದು. ಆಸರೆ ನೀಡುವ ಸತ್ಯ ಗೊತ್ತಾದಾಗ ಪರಿಸ್ಥಿತಿ ಸರಿಯಾಗುವುದು.
        ಬೆಳಕಿನ ಕಿಡಿಯಿಂದ ದೀಪ ಬೆಳಗಿಸಬಹುದು. ಆದರೆ ಬೆಳಗಿದ ದೀಪ ನಿರಂತರತೆಯನ್ನು ಕಾಯ್ದುಕೊಳ್ಳಬೇಕಾದರೆ  ಎಣ್ಣೆ ಹಾಗೂ ಬತ್ತಿಯ ಜತೆ ಅಗೋಚರವಾದ ಗಾಳಿಯ ಮಿಳಿತ ಅತೀ ಮುಖ್ಯ. ಈ ಮೂರರ ಹೊಂದಾಣಿಕೆಯೇ ಬೆಳಕಿಗೆ ಮೂಲವಾಗಿರುತ್ತದೆ. ಅದೇ ರೀತಿ ನಮ್ಮೊಳಗಿನ ನಂಬಿಕೆ  ಹಾಗೂ  ನಾನು ಇದನ್ನು ಮಾಡಬಲ್ಲೆನೆಂಬ ದೃಢವಿಶ್ವಾಸದ ಜತೆಗೆ ಧೈರ್ಯವೆಂಬ ಎಣ್ಣೆಯು , ಪ್ರಯತ್ನವೆಂಬ ಬತ್ತಿಯೊಳಗೆ ಸೇರಿದಾಗ ಸಾಧನೆಯ ಬೆಳಕನ್ನು ಬೆಳಗಿಸಬಹುದು. ನೋಡುಗರಿಗೆ ಮಾರ್ಗದರ್ಶಕವಾಗಬಹುದು.
       ಸಣ್ಣದಾಗಿರುವ ಬೆಂಕಿ ಕಿಡಿಯು  ಅವಕಾಶ ಸಿಕ್ಕಾಗ ತನ್ನ ಅಂತರ್ಗತ  ಶಕ್ತಿಯನ್ನು ಪರಮಾಣು ಬಾಂಬ್ ಗಿಂತ ಶಕ್ತಿಶಾಲಿಯಾಗಿ ಹೊರಹೊಮ್ಮಿ ಸುವುದನ್ನು ಕಾಣಬಹುದು . ಹಾಗೆಯೇ ನಮ್ಮ ಸಂಪರ್ಕ ವಲಯದ ಪ್ರತಿಯೊಬ್ಬರ ಶಕ್ತಿಯನ್ನು ಕೀಳಂದಾಜಿಸಬಾರದು. ಎಲ್ಲರೂ ಅವಕಾಶ ಸಿಕ್ಕಾಗ ಶಕ್ತಿಶಾಲಿಗಳಾಗುತ್ತಾರೆ ಎಂಬುದನ್ನು ಮನಗಾಣಬೇಕು.
     ದೀಪವು ದೇವರ ಬಳಿಯಿದ್ದರೆ ದೇವರ ದೀಪ
     ಓದುಗನ ಬಳಿಯಿದ್ದರೆ ಓಂಕಾರದೀಪ
     ಕೆಲಸಗಾರರ ಬಳಿಯಿದ್ದರೆ ಕಾಯಕ ದೀಪ
     ಜ್ಞಾನಿಯ ಬಳಿಯಿದ್ದರೆ ಜ್ಞಾನ ದೀಪ
     ಸಾಧಕನ ಬಳಿಯಿದ್ದರೆ ಸಾಧಕ ದೀಪ
    ಮದುವೆ ಮನೆಯಲ್ಲಿದ್ದರೆ ಮಂಗಳ ದೀಪ
    ಹೆಣದ ಬಳಿಯಿದ್ದರೆ ಅಶುಭ ದೀಪ
    ಕಟುಕನ ಕೈಯಲ್ಲಿದ್ದರೆ ಕೊಳ್ಳಿ ದೀಪ
    ಸೇವಕನ ಬಳಿಯಿದ್ದರೆ ನಂದಾದೀಪ
ಇದರಾರ್ಥ ದೀಪ ಒಂದೇಯಾದರೂ ಇರುವ ಸ್ಥಾನದ ಮೇಲೆ ಬೇರೆ ಬೇರೆ ಹೆಸರು ಪಡೆಯುತ್ತದೆ. ಅದರಂತೆ ನಮ್ಮ ಸಂಪರ್ಕ ವಲಯದಿಂದಾಗಿ ಸಾಧಕ , ಜ್ಞಾನಿ , ಶ್ರಮಿಕ , ಉಪಕಾರಿ , ದಾನಿ , ಕಟುಕ , ಅಜ್ಞಾನಿ , ಹುಚ್ಚ , ಅರೆಹುಚ್ಚ..... ಇತ್ಯಾದಿ ಹೆಸರುಗಳು ನಮ್ಮ ವ್ಯಕ್ತಿತ್ವಕ್ಕೆ ಅಂಟುತ್ತದೆ. ಹಾಗಾಗಿ ನಾವು ಹೇಗಿದ್ದೇವೆ ಎನ್ನುವುದಕ್ಕಿಂತ ,  ಎಲ್ಲಿದ್ದೇವೆ ? ಎನ್ನುವ ಪರಿಜ್ಞಾನ ನಮಗಿರಬೇಕು.
         ಬೆಳಕು ಅರಮನೆಯಲ್ಲಿದ್ದರೂ ಗುಡಿಸಲಲ್ಲಿದ್ದರೂ ಕೊಡುವ ಬೆಳಕು ಒಂದೇ. ಅಲ್ಲಿ ಕಿಂಚಿತ್ತೂ ತಾರತಮ್ಯವಿಲ್ಲ. ಹಾಗೆಯೇ ಇನ್ನೊಬ್ಬರಿಗೆ ಬೆಳಕಾಗಬೇಕಾದರೆ ನಮ್ಮಲ್ಲಿ ತಾರತಮ್ಯ ಮನೋಭಾವ ಇರಬಾರದು.
             ದೀಪದ ಬೆಳಕು ಎಲ್ಲಿದ್ದರೂ ಕಾಣುತ್ತದೆ. ಅದು ತನ್ನ ಪರಿಚಯವನ್ನು ತಾನೆಂದಿಗೂ ಮಾಡುವುದಿಲ್ಲ. ಆದರೂ ಎಲ್ಲರಿಗೂ ಪರಿಚಿತವಾಗುತ್ತದೆ. ನಮ್ಮ ಜೀವನವು ಇತರರಿಗೆ ಪರಿಚಯ ಮಾಡವುದರಲ್ಲೇ ಮುಗಿಯಬಾರದು. ಸಾಧನೆಯ ಹಾದಿಯಲ್ಲಿ ಮುನ್ನಡೆದಾಗ ತನ್ನಿಂದ ತಾನೆ ಎಲ್ಲರಿಗೂ ಪರಿಚಯವಾಗುತ್ತದೆ. ಆದರೆ ತಾಳ್ಮೆ ತುಂಬಾ ಮುಖ್ಯ.
           ಹಣತೆ ಹಚ್ಚುತ್ತೇನೆ ನಾನು ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಭ್ರಮೆಯಿಂದಲ್ಲ. ನಾನು ಹಚ್ಚುವ ಹಣತೆ ಶಾಶ್ವತ ಎನ್ನುವ ಭ್ರಾಂತಿ ನನಗಿಲ್ಲ. ಆದರೂ ಹಣತೆ ಹಚ್ಚುತ್ತೇನೆ. ಇರುವಷ್ಟು
 ಹೊತ್ತು ನನ್ನ ಮುಖ ನೀನು ನಿನ್ನ ಮುಖ ನಾನು ನೋಡುತ್ತೇನೆಂಬ ಒಂದೇ ಒಂದು ಆಸೆಯಿಂದ...... ಎನ್ನುವ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಕವಿವಾಣಿಯಲ್ಲೂ ದೀಪದ ಮಹತ್ವ ತಿಳಿಯಬಹುದು.                                                          ದೀಪ ಹಾಗೂ ಬೆಳಕನ್ನು ಅರ್ಥೈಸಿಕೊಂಡು ದೀಪದಂತೆ ಧನಾತ್ಮಕ ಬೆಳಕಿಗಾಗಿ ಬದಲಾಗಬೇಕಾಗಿದೆ. ಈ ಧನಾತ್ಮಕ ಬದಲಾವಣೆಗೆ ಯಾರನ್ನು ಕಾಯದೇ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್...... ಏನಂತೀರಿ.....?

 ...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************


Ads on article

Advertise in articles 1

advertising articles 2

Advertise under the article