
ಓ ಮುದ್ದು ಮನಸೇ ...…...! - 10
Thursday, September 30, 2021
Edit
ಪಡೆದುಕೊಂಡದ್ದು ಹೆಚ್ಚು,
ಕೊಟ್ಟಿರುವುದು ಅಲ್ಪ,
ಕೊಡಬೇಕಾದ್ದು ಅಪಾರ...!
--------------------------------------------
ಅಪ್ಪನ ಫೋನ್ ಕಾಲ್ ಬಂತು…........
ಊರಲ್ಲಿ ತುಂಬಾ ಬಿಸಿಲು, ಬೇಸಿಗೆಯ ಧಗೆಗೆ ಕೆರೆ-ಹೊಂಡಗಳು ಬತ್ತಿ ಹೋಗಿವೆ. ಪಾಪದ ಪ್ರಾಣಿಗಳು ಏನು ಕುಡಿದಾವು? ಎಲ್ಲಿದೆ ನೀರು? ಮನೆಯ ಬಾವಿಯಲ್ಲಿ ನೀರು ಪಾತಾಳಕ್ಕೆ ಇಳಿದಿದೆ, ಮೀನು ಹಿಡಿಯುವ ಧಾವಂತದಲ್ಲಿ ಹಳ್ಳ-ಕೊಳ್ಳದಲ್ಲಿ ಅಳಿದುಳಿದಿದ್ದ ನೀರನ್ನು ಬತ್ತಿಸಿದ್ದಾಗಿದೆ.
ಯೂನಿವರ್ಸಿಟಿಯೊಂದರ ಆಫೀಸ್ನಲ್ಲಿ ಕುಳಿತು ಮನಶಾಸ್ತ್ರದ ರಿಸರ್ಚಿನಲ್ಲಿ ಬಿಜಿಯಾಗಿದ್ದ ನಾನು ಕಂಪ್ಯೂಟರ್ ಬಿಟ್ಟು ಮೇಲೆದ್ದೆ. ಏನ್ ಹೇಳ್ತಿದ್ದೀರಿ ಅಪ್ಪ...?
ಏನಿಲ್ಲ...! ಮೇಯೋಕೆ ಬಿಟ್ಟ ಪ್ರಾಣಿಗಳಿಗೆ ಕುಡಿಯೋಕೆ ನೀರಿಲ್ಲ. ಊರ ಮಧ್ಯೆ ಒಂದು ಸಣ್ಣ ನೀರಿನ ಟ್ಯಾಂಕ್ ಮಾಡಿಸೋಣ ಅಂದುಕೊಂಡೆ. ಹೆಚ್ಚೇನು ಖರ್ಚಿಲ್ಲ, ಮೇಸ್ತ್ರಿಯಲ್ಲಿ ಕೇಳಿದ್ದೇನೆ ಎರೆಡ್ಮೂರು ಸಾವಿರ ಆಗಬಹುದು ಅಷ್ಟೇ, ಅಂದರು.
ನಾ ಜಯಿಸಿದ್ದ ಪದಕಗಳು, ನನ್ನ ಪದವಿಗಳು ನನ್ನಪ್ಪನ ಭಾವನೆಗಳ ಅಡಿಯಲ್ಲಿ ಹುಡಿಯಾದವು. ಹೌದು! ನನಗವರೇ ಸ್ಪೂರ್ತಿ. ಹಾಗಂತ ನನ್ನಪ್ಪನೇನು ವಿಶೇಷನಲ್ಲ, ಸಹಜ ಮಾನವ ಧರ್ಮದ ಸಾಮಾನ್ಯನಷ್ಟೇ. ಅವರ ಬದುಕಿನ ಮಜಲುಗಳು, ಸರಿದ ದಿನಗಳು ಯಾವತ್ತೂ ಅವರನ್ನೊಬ್ಬ ನಿಜವಾದ ಮಾನವನನ್ನಾಗಿ ರೂಪಿಸಿಬಿಟ್ಟಿವೆ. ಪ್ರಕೃತಿಯೊಂದಿಗಿನ ಅವರ ಒಡನಾಟವೇ ಅಂತದ್ದು, ಅದೆಂದೂ ಬಿಡಿಸಲಾಗದ ಸಂಬಂಧ. ಹಾಗಾಗಿಯೇ ಅವರಲ್ಲಿ ಅವುಡುಗಟ್ಟಿದ ಭಾವನೆಗಳು ಪರಿಸರ ಪೂರಕವಾಗೇ ರೂಪುಗೊಳ್ಳುತ್ತವೆ. ಆದುದರಿಂದಲೇ ಮೂಕ ಪ್ರಾಣಿಗಳ ರೋಧನೆ ನನ್ನಪ್ಪನ ಮನಸ್ಸು ತಟ್ಟಿದ್ದು. ಪ್ರಾಣಿಗಳಿಗೆ ನೀರುಣಿಸುವ ಅವರ ಯೋಚನೆ ಅವರಿಗೊಂದು ಸಾಮಾನ್ಯ ವಿಷಯವಾಗಿದ್ದರೂ, ನನಗದು ರೋಚಕವೇ.......! ಸದಾ ಕಾಲ ಕಂಪ್ಯೂಟರ್ ಮೇಲೆ ಬೆರಳಿಟ್ಟು ಮಾಡರ್ನ್ ಯುಗದ ಮನ್ಮಥರಂತೆ ವರ್ತಿಸುವ ನಮಗೆಲ್ಲಿ ಬರಬೇಕು ಇಂತಹ ಯೋಚನೆ.......? ನನ್ನಪ್ಪನ ವಿಚಾರ ಸಣ್ಣದಿದ್ದರೂ ನನ್ನನ್ನು ಮತ್ತೊಮ್ಮೆ ಮನುಷ್ಯನನ್ನಾಗಿಸಿದ್ದು, ನನ್ನೊಳಗೊಂದು ಸ್ಪೂರ್ತಿಯ ಚಿಲುಮೆಯಾದದ್ದೂ ಅದೆ.....! ನಾನು ನನ್ನದೆನ್ನುವ, ಸ್ವಾರ್ಥಬದುಕಿನ ಅರಮನೆಯಲ್ಲಿ ಬದುಕುತ್ತಿರುವ ಸಮಾಜದ ಅದೆಷ್ಟೋ ಮನಸ್ಸುಗಳ ನಡುವೆ ನನ್ನಪ್ಪನ ವಿಚಾರಗಳು ಮರಳುಗಾಡಿನಲ್ಲಿ ಮೊಳಕೆಯೊಡೆಯಲು ಸಿದ್ಧವಾದ ಬೀಜದೆಂತೆನಿಸಿತು ನನಗೆ.
ಪ್ರತಿಬಾರಿ ನಾನು ಊರಿಗೆ ಹೋದಾಗ ನನ್ನನ್ನು ಸೆಳೆಯುವ ಒಂದು ವಿಶೇಷ ಈ ಟ್ಯಾಂಕ್. ಅದೆಷ್ಟೋ ಪ್ರಾಣಿಗಳ ದಾಹ ತಣಿಸಿದ ಈ ಟ್ಯಾಂಕ್ ಇವತ್ತಿಗೂ ನನ್ನ ಸ್ಪೂರ್ತಿ. ನನ್ನಪ್ಪನ ಮುಗ್ಧ ಮನಸ್ಸಿನಲ್ಲಿ ಚಿಗುರಿದ ಸಣ್ಣ ವಿಚಾರದಿಂದ ನಾವೂ ಕಲಿಯಬೇಕಾದ್ದು ಅಪಾರ. ಒಂದಿಡೀ ಜಗತ್ತೇ ನಮ್ಮದೆನ್ನುವಂತೆ ವರ್ತಿಸುತ್ತಾ ಇಡುತ್ತಿರುವ ಹೆಜ್ಜೆಯನ್ನೇ ಮರೆತಿದ್ದೇವೆ ನಾವು, ಪ್ರಕೃತಿಯ ಮುಂದೆ ಹುಲುಮಾನವರು. ಪಡೆದುಕೊಂಡದ್ದು ಹೆಚ್ಚು, ಕೊಟ್ಟಿರುವುದು ಅಲ್ಪ, ಕೊಡಬೇಕಾದ್ದು ಅಪಾರ.
ಸಿನೇಮಾ ಹೀರೋಗಳನ್ನೇ ಗಾಡ್ ಫಾದರ್ ಗಳಂತೆ ನೋಡುವ ಇವತ್ತಿನ ಯುವ ಪೀಳಿಗೆಯ ಅದೆಷ್ಟು ಜನರಿಗೆ ತಮ್ಮ ಮನೆಯಲ್ಲೇ ಇರುವ ಬದುಕಿನ ಸವಾಲುಗಳಿಗೆ ಎದೆಯೊಡ್ಡಿ, ಸಮಾಜದಲ್ಲಿ ಗೌರವ-ಮರ್ಯಾದೆಗಳನ್ನು ಕಾಪಿಟ್ಟು, ಕಷ್ಟ-ಸುಖಗಳನ್ನ ಸಮನಾಗಿ ಸ್ವೀಕರಿಸಿ, ಸಹಬಾಳ್ವೆಯ ಬದುಕಿನೊಂದಿಗೆ ಮಕ್ಕಳ ಭವಿಷ್ಯತ್ತನ್ನು ಕಟ್ಟಲು ಜೀವನವಿಡೀ ತುಡಿಯುವ-ದುಡಿಯುವ ಅಪ್ಪ ಅಮ್ಮನನ್ನೇ ರೋಲ್ ಮಾಡೆಲ್ ಮಾಡಿಕೊಳ್ಳುವ ಧೈರ್ಯವಿದೆ..? ಅವರ ದಿನನಿತ್ಯದ ಬದುಕಿನ ಪ್ರತಿ ಪುಟದಲ್ಲೂ ಬೆವರ ಹನಿಗಳ ಬರಹಗಳಿಲ್ಲವೇ....? ಆ ಬರಹಗಳು ಕೇವಲ ಅನುಭವಗಳಾಗಿರಲಿಕ್ಕೆ ಸಾಧ್ಯವೇ ಇಲ್ಲ. ಜಗತ್ತಿನ ಯಾವ ಯೂನಿವರ್ಸಿಟಿಯೂ ಕಲಿಸಿಕೊಡಲಾಗದ ಬದುಕಿನ ಪಾಠಗಳವು. ಈ ಪಾಠಗಳು ಅಂತಿಂತಹ ಪಾಠಗಳಲ್ಲ....! ಮನುಷ್ಯನ ಭಾವನೆಗಳನ್ನು ಬಡಿದೇಳಿಸುವ ಭವಣೆಗಳವು. ನನ್ನ ಅಪ್ಪ ಅಮ್ಮನನ್ನು ಆಳವಾಗಿ ಅರಿಯುವ ಕುತೂಹಲ ನನ್ನಲ್ಲಿ ಯಾವತ್ತೋ ಮೂಡಿದೆ, ಅದನ್ನು ತಣಿಸಿಕೊಳ್ಳಲು ಇವತ್ತಿಗೂ ನಾನು ಶ್ರಮಿಸುತ್ತಿದ್ದೇನೆ. ನಿಮ್ಮಲ್ಲೂ ಇಂತಹ ಕುತೂಹಲ ಮೂಡಿದರೆ ಕೆಳಗಿನ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ, ಉತ್ತರ ಸಿಕ್ಕಿಲ್ಲವಾದರೆ ಹುಡುಕಿ.
ನಿಮ್ಮ ಅಪ್ಪ ಅಮ್ಮನಿಗೆ ಜನ್ಮವಿತ್ತವರ ಹಿನ್ನೆಲೆಯೇನು.....? ನಿಮ್ಮ ಅಪ್ಪ ಅಮ್ಮನ ಬಾಲ್ಯ, ಓದಿದ ಶಾಲೆ, ಬೆಳೆದ ಊರು, ಕಳೆದ ಕ್ಷಣಗಳನ್ನು ತಿಳಿಯಿರಿ, ಸಾಧ್ಯವಾದರೆ ಭೇಟಿಕೊಡಿ. ಅವರ ವಿದ್ಯಾಭ್ಯಾಸ ಮತ್ತು ಮಾಡುವ ಉದ್ಯೋಗದ ಕುರಿತು ಕೇಳಿ, ನೋಡಿ. ಅಪ್ಪ ಅಮ್ಮನ, ಕನಸು, ಇಷ್ಟ-ಕಷ್ಟಗಳನ್ನು ಅರಿಯಿರಿ. ನಿಮ್ಮ ಬಟ್ಟೆ-ಬರೆ, ಓದು, ಆರೋಗ್ಯ, ಹಬ್ಬ-ಹರಿದಿನ, ಮದುವೆ-ಮುಂಜಿ, ಟೀವಿ, ಫ್ಯಾನ್, ಗ್ಯಾಸ್ ಇತ್ಯಾದಿಗಳಿಗೆ ತಗುಲುವ ವೆಚ್ಚವೆಷ್ಟು, ಅದರ ಮೂಲವೇನು?
...........................................ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ ಸಮಾಲೋಚಕರು
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
*********************************************