ಮಕ್ಕಳ ಕಥೆಗಳು ಸಂಚಿಕೆ -1
Wednesday, September 29, 2021
Edit
ಬರೆದ ಕಥೆಗಳು
ಸಂಚಿಕೆ - 1
ಸ್ವಾತಂತ್ರ್ಯ ದ 75 ನೇ ಅಮೃತ ಮಹೋತ್ಸವ. ಅದೆಷ್ಟು ಬದಲಾಗಿದೆ ನಮ್ಮ ದೇಶ!. ಈ ಬದಲಾವಣೆಯನ್ನು ನಾನು ಕಣ್ಣಾರೆ ಕಂಡಿದ್ದೆ. ನಾನು ಅಣ್ಣಯ್ಯ. ನನಗಿಂದು ಎಂಬತ್ತೈದು ವರ್ಷ ತುಂಬುತ್ತದೆ. ಈಗಲೂ ನೆನಪಿದೆ ಆ ದಿನ. ನನಗೆ ಆಗ ಹತ್ತು ವರ್ಷ. ಎಲ್ಲೆಡೆ ಸಂಭ್ರಮ ಹರಡಿತ್ತು. ಮರುಭೂಮಿಯಲ್ಲಿ ಮಳೆಯಾದಂತೆ, ಬರಡು ಭೂಮಿಯಲ್ಲಿ ವಸಂತ ಹುಟ್ಟಿ ಬಂದಂತೆ. ಆಗ ಸ್ವಾತಂತ್ರ್ಯದ ಅರ್ಥ ತಿಳಿದಿರಲಿಲ್ಲ. ಏನೋ ಬಹು ಮುಖ್ಯ ದಿನವೆಂದು ಮಾತ್ರ ತಿಳಿದಿತ್ತು. ಯಾಕೆ, ಏನು ಎಂದು ನಾವು ಪ್ರಶ್ನಿಸಲಿಲ್ಲ. ನಮಗೂ ಅಂದು ಸಂತೋಷವಾಗಿತ್ತು. ಶಾಲೆಯಲ್ಲಿ ಲಡ್ಡು ಪಾಯಸ ಕೊಟ್ಟಿದ್ದರು. ಅಂದು ನನ್ನ ಹುಟ್ಟಿದ ದಿನವಾದುದರಿಂದ , ನನ್ನ ಗೆಳೆಯರ ಬಳಿ "ನನ್ನ ಹುಟ್ಟು ಹಬ್ಬಕ್ಕೆ ಇಷ್ಟೆಲ್ಲ ಸಂಭ್ರಮ" ಎಂದು ಕೊಚ್ಚಿಕೊಂಡಿದ್ದೆ. ಅದನ್ನು ಅವರೂ ನಂಬಿದ್ದರು. ಆದರೆ ಅದಾದ ನಂತರ ಕೋಲಾಹಲ ನಡೆದಿತ್ತು. ರಸ್ತೆಗಳಲ್ಲಿ ಅದೆಷ್ಟೋ ಹೊಡೆದಾಟಗಳು ನಡೆದವು. ರಕ್ತ ನದಿಯಂತೆ ಹರಿದಿತ್ತು. ಅಕ್ಕ ಪಕ್ಕದ ಮನೆಯವರ ನಡುವೆ ದ್ವೇಷ ಹುಟ್ಟಿತ್ತು. ಇದೆಲ್ಲ ತಣ್ಣಗಾಗಲು ಅದೆಷ್ಟೋ ವರುಷಗಳು ಹಿಡಿದವು. ಸಮಯ ಉರುಳಿತು.
ನಂತರ ಅದೆಷ್ಟೋ ಬದಲಾವಣೆಗಳು ನಡೆದವು. ನಮ್ಮ ದೇಶವನ್ನು ಹಲವಾರು ಪ್ರಧಾನ ಮಂತ್ರಿಗಳು ಆಳಿದರು. ಅಭಿವೃದ್ಧಿಯಾಯಿತು ದೇಶ. ಮೆಲ್ಲಗೆ, ಕಾರು ಬೈಕು ಎಂದು ಕಾರ್ಖಾನೆಗಳು ಎದ್ದು ನಿಂತವು. ವಿದ್ಯೆ ಕಲಿಯುವಲ್ಲಿ ಹಲವು ಆಯ್ಕೆಗಳು ಬಂದವು. ಕ್ಷಿಪಣಿಗಳು ಗಗನ ಯಾನ ಕೈಗೊಂಡವು, ಚಂದ್ರನನ್ನೂ ಮುಟ್ಟಿದೆವು. ಮಂಗಳನ ಅಂಗಳಕೆ ಕಾಲಿಟ್ಟೆವು. ನಾಲ್ಕನೇ ಅತಿ ಬಲಿಷ್ಠ ದೇಶವಾಗಿ ಬೆಳೆದೆವು.
ಅದೆಷ್ಟು ದೊಡ್ಡ ಇತಿಹಾಸ ಭಾರತಾಂಬೆಗೆ!. ಯಾಕೋ ಇಂದು ಯೋಚಿಸುವಂತಾಗಿದೆ!. ಅದೆಷ್ಟೋ ಜನರು ಆಳಿದರೂ, ಲೂಟಿ ಮಾಡಿದರೂ ಈಕೆ ಮುನ್ನಡೆದಿದ್ದಳು. ವಿಶ್ವಕ್ಕೆ ಸವಾಲೆಸೆದು ಮುಂದೊಂದು ದಿನ ಪ್ರಥಮ ಸ್ಥಾನದಲ್ಲಿರುವೆ ಎಂದು ಛಲದಿಂದ ನಡೆಯುತ್ತಿದ್ದಾಳೆ'. ನನ್ನ ಈ ಯೋಚನೆಗಳ ನಡುವೆ ಮೊಮ್ಮಗಳ ದನಿ ಕೇಳಿತು. "ತಾತಾ ಬೇಗ ಬಾ ಹೊರಡೋಣ. ಶಾಲೆಯಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮಕ್ಕೆ ನೀನೂ ಬರಬೇಕು" ಎಂದು.
................................................. ಮೋಕ್ಷ .ಡಿ.
ಹತ್ತನೇ ತರಗತಿ
ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ.
ಸುಳ್ಯ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ಒಂದೂರಿನಲ್ಲಿ ಒಂದು ಅರಮನೆ ಇತ್ತು. ಅಲ್ಲಿಯ ರಾಜ ತುಂಬಾ ಕೋಪಿಷ್ಟ ಮತ್ತು ದುರಾಸೆಯ ಮನುಷ್ಯ. ಅದೇ ರಾಜನ ಅರಮನೆ ಹತ್ತಿರ ಒಂದು ಬಡ ರೈತನ ಮನೆ ಇತ್ತು. ಒಂದು ದಿನ ರೈತನ ಹೆಂಡತಿಗೆ ಹುಷಾರಿರಲಿಲ್ಲ. ಆಗ ಆ ಬಡ ರೈತ ರಾಜನ ಅರಮನೆಗೆ ಹೋದನು. ಅಲ್ಲಿ ರಾಜನ ಮುಂದೆ ಸಹಾಯ
ಕೇಳಿದಾಗ , ರಾಜನು ರೈತನಿಗೆ ಬೈದು ಕಳುಹಿಸಿದನು. ಆಗ ರೈತ ಅಳುತ್ತಾ ಕಾಡಿಗೆ ಹೋದನು. ರೈತನು ಕಾಡಿನಲ್ಲಿ ಒಂದು ಬಂಡೆಕಲ್ಲಿನ ಮೇಲೆ ಕುಳಿತುಕೊಂಡು ಅಳುತ್ತಾ ಇರುವಾಗ ಒಂದು ಧ್ವನಿ ಕೇಳಿಸಿತು. ಆಗ ಅವನು ಹಿಂದಕ್ಕೆ ತಿರುಗಿ ನೋಡುವಾಗ ಒಂದು ಮರ ಅವನನ್ನು ಕರೆದು , " ಏನು ಆಯಿತು " ಎಂದು ವಿಚಾರಿಸಿತು. ಆಗ ರೈತ ಎಲ್ಲಾ ವಿಷಯವನ್ನು ಹೇಳಿದಾಗ ಮರಕ್ಕೆ ಬೇಸರವಾಗಿ ಒಂದು ಮಾಯಾ ಪೆನ್ನನ್ನು ಕೊಟ್ಟಿತು. ಆಗ ರೈತ ಇದನ್ನು ನಾನು ತೆಗೆದುಕೊಂಡು ಏನು ಮಾಡಲಿ ಎಂದು ಹೇಳಿದಾಗ , ಮರ ಹೇಳಿತು , " ಇದು ಮಾಯದ ಪೆನ್ನು.... ಇದನ್ನು ನೀನು ಒಳ್ಳೆಯತನದಿಂದ ಬಳಸಬೇಕು. ಕೆಟ್ಟತನಕ್ಕೆ ಬಳಸಿದರೆ ಅದರ ಪರಿಣಾಮ ಕೆಟ್ಟದಾಗುತ್ತದೆ. ಇದನ್ನು ಒಳ್ಳೆಯ ಮನಸ್ಸಿನಿಂದ ಉಪಯೋಗಿಸಬೇಕು." ರೈತನು ಖುಷಿಯಿಂದ ಮನೆಗೆ ಹೋದನು. ಆಮೇಲೆ ಅವನ ಹೆಂಡತಿಗೆ ಔಷಧಿ ಕೊಡಿಸಿದನು. ನಂತರ ಅವನು ಬಡ ಜನರಿಗೆ ದಾನ ಮಾಡಿಕೊಂಡು ಇದ್ದನು. ಸ್ವಲ್ಪ ದಿನದ ನಂತರ ಈ ವಿಚಾರ ರಾಜನಿಗೆ ತಿಳಿಯಿತು. ರಾಜನು ರೈತನ ಮಾಯದ ಪೆನ್ನು ಕದ್ದು ತನಗೆ ತುಂಬಾ ಹಣ, ದೊಡ್ಡ ಅರಮನೆ ಬೇಕು ಅಂದಾಗ ರಾಜನ ಅರಮನೆ ಮಾಯಾವಾಗಿ ಬಡವನಾದನು. ರಾಜನಿಗೆ ತನ್ನ ತಪ್ಪಿನ ಅರಿವಾಗಿ ರೈತನ ಹತ್ತಿರ ಹೋಗಿ ತನ್ನ ಮನ್ನಿಸಬೇಕೆಂದು ಕೇಳಿದಾಗ , ರೈತನು ಮನ್ನಿಸಿದನು ಆಗ ರಾಜನಿಗೆ ತನ್ನ ಹಿಂದಿನ ಅರಮನೆ, ಸಂಪತ್ತು ಪುನಃ ಸಿಕ್ಕಿತು.
..................................... ಸಾನಿಕ ಭಟ್ ಕೆ.ಆರ್
ಐದನೇ ತರಗತಿ,
ರೋಟರಿ ಶಾಲೆ ಸುಳ್ಯ, ಸುಳ್ಯ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ .
*******************************************
ಒಂದು ಊರಿನಲ್ಲಿ ಒಬ್ಬ ಕೋಳಿ ಮಾಂಸ ಮಾರುವವನ್ನಿದ್ದ. ಅವನ ಹೆಸರು ಸುಮನ್. ಅವನು ದುಡ್ಡಿನ ದುರಾಸೆಯಿಂದ ಕೋಳಿ ಅಂಗಡಿ ನಡೆಸುತಿದ್ದ. ಒಂದು ದಿನ ಬೆಳಗ್ಗೆ ಅವನು ಮನೆಯಿಂದ ಹೊರಟನು. ಆಗ ಅವನ ಗೆಳೆಯ ಅರುಣ ಒಂದು ಕೋಳಿಯನ್ನು ಕೋಳಿಫಾರ್ಮ್ ನಿಂದ ತರುತ್ತಿದ್ದ. ಅದನ್ನು ಸುಮನ್ ನ ಅಂಗಡಿಗೆ ತಂದು ಕೊಟ್ಟ. ಆಗ ಸುಮನ್ ಆಲೋಚಿಸಿದ ನಾನೂ ಆ ಕೋಳಿ ಫಾರ್ಮ್ ನಿಂದ ಕೋಳಿಗಳನ್ನು ಕದ್ದು ತಂದು ಮಾರಿದರೆ ತುಂಬಾ ಹಣಗಳಿಸಬಹುದು ಎಂದು ಯೋಚಿಸಿದ. ನಂತರ ಅವನು ಒಂದು ಉಪಾಯ ಯೋಚಿಸಿದ. ರಾತ್ರಿ ಹೊತ್ತು ಕೋಳಿ ಕದಿಯುವ ಯೋಜನೆ ರೂಪಿಸಿದ. ನಂತರ 'ಎಲ್ಲರೂ ಮಲಗಿದ ಮೇಲೆ ಅವನು ಕೋಳಿ ಫಾರ್ಮ್ ಗೆ ಹೊರಟನು. ಅಲ್ಲಿಂದ ಕೋಳಿ ಕದ್ದುಮುಚ್ಚಿ ತರಲು ಶುರುಮಾಡಿದ. ಸ್ವಲ್ಪ ದಿನ ಹಾಗೇ ನಡೆಯಿತು. ಒಂದು ದಿನ ಕೋಳಿ ಫಾರ್ಮ್ ಮಾಲೀಕನಿಗೆ ದಿನೇ ದಿನೇ ಕೋಳಿ ಸಂಖ್ಯೆ ಕಡಿಮೆ ಆಗುವುದು ಕಾಣಿಸಿತು. ರಾತ್ರಿ ವೇಳೆ ಕಾದುಕುಳಿತ. ಆಗ ಅವನ ಕಣ್ಣಿಗೆ ಸುಮನ್ ಕೋಳಿ ಕದ್ದು ಕೊಂಡೊಯ್ಯುವುದು ಕಾಣಿಸಿತು. ನಂತರ ಅವನು ಪೊಲೀಸರಿಗೆ ಫೋನ್ ಮಾಡಿ , ಕೋಳಿ ಕದ್ದುಕೊಂಡೊಯ್ಯುವ ವಿಷಯ ತಿಳಿಸಿದನು. ಪೊಲೀಸರು ಬಂದು ಸುಮನ್ ನನ್ನು ಅರೆಸ್ಟ್ ಮಾಡಿದರು.
….............................. ಮಾನ್ವಿ ಎಚ್. ಕುಲಾಲ್
3 ನೇ ತರಗತಿ
ಸೈಂಟ್ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೊಂದೆಲ್ , ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
*******************************************
ಒಂದು ಊರು. ಬಹಳ ಹಚ್ಚಹಸಿರಾಗಿತ್ತು. ಸುತ್ತ ಮನೆಗಳು, ಹಸಿರು ಗಿಡಮರಗಳು, ನದಿ, ಜಲಪಾತ, ಇವುಗಳಿಂದ ಬಹಳ ಸುಂದರವಾಗಿತ್ತು. ಊರಿನಲ್ಲಿ ಮೂರು ಮನೆಗಳು ಅಕ್ಕ-ಪಕ್ಕ ಇದ್ದವು. ಮನೆಯವರು ಬಹಳ ಅನ್ಯೋನ್ಯತೆಯಿಂದ ಇದ್ದರು. ಮೊದಲನೆಯವ ರಾಮ, ಎರಡನೆಯವ ಶಾಮ, ಮೂರನೆಯವ ಕೃಷ್ಣ. ಮನೆಯ ಮುಂದೆ ಮೂವರಿಗೆ ಸೇರಿದ ಮೂರು ಹೊಲವಿತ್ತು.
ರಾಮನ ಹೊಲದಲ್ಲಿ ಏನು ಮಾಡಿದರೂ ಉತ್ತಮ ಫಸಲು ಸಿಗುತ್ತಿರಲಿಲ್ಲ. ಆದರೆ ಶಾಮ ಮತ್ತು ಕೃಷ್ಣನ ಹೊಲದಲ್ಲಿ ಬಹಳ ಚೆನ್ನಾಗಿ ಫಸಲು ಸಿಗುತ್ತಿತ್ತು. ರಾಮ ಬಹಳ ಬೇಸರಗೊಂಡಿದ್ದ. ಹೀಗಿದ್ದಾಗ ಶಾಮ ಮತ್ತು ಕೃಷ್ಣ ಸೇರಿ ರಾಮನ ಹೊಲದಲ್ಲಿ ಬಹಳ ಚೆನ್ನಾಗಿ ಗೊಬ್ಬರ ಇತ್ಯಾದಿಗಳನ್ನು ಹಾಕಿ ನಾಟಿಮಾಡಿದರು. ಪೈರು ಬೆಳೆದು ಫಸಲು ಬಹಳ ಉತ್ತಮವಾಗಿ ಬಂತು. ಆದರೆ ಈ ಬಾರಿ ಕೃಷ್ಣ ಮತ್ತು ಶಾಮನ ಹೊಲದಲ್ಲಿ ಫಸಲು ದೊರೆಯಲಿಲ್ಲ. ಕೃಷ್ಣ ಮತ್ತು ಶಾಮ ಬಹಳಷ್ಟು ಬೇಸರಗೊಂಡಿದ್ದರು. ಜೀವನಾಧಾರವಾಗಿದ್ದ ಹೊಲದಲ್ಲಿ ಬೆಳೆ ಬೆಳೆಯಲಿಲ್ಲ ಮುಂದೆ ಹೊಟ್ಟೆಪಾಡಿಗೆ ಏನು ಮಾಡುವುದು ಎಂದು ಯೋಚಿಸುತ್ತಿದ್ದರು. ಆದರೆ ರಾಮ ಈ ಸಲ ತನ್ನ ಹೊಲದಲ್ಲಿ ಬೆಳೆದ ಬೆಳೆಯನ್ನು ಕೃಷ್ಣ ಮತ್ತು ಶಾಮನಿಗೆ ಹಂಚಿದ. ಮೂವರಿಗೂ ಸಂತೋಷವಾಯಿತು. ಈ ಘಟನೆಯ ನಂತರ ಇವರ ಸಂಬಂಧ ಇನ್ನೂ ಗಟ್ಟಿಯಾಯಿತು. ಹೀಗೆ ಒಬ್ಬರಿಗೊಬ್ಬರು ಸಹಾಯ ಮಾಡಿದರೆ ಕೆಲಸವೂ ಆಗುತ್ತದೆ. ಕಷ್ಟಕ್ಕೆ ಇನ್ನೊಬ್ಬರು ಸಹಾಯವೂ ಮಾಡುತ್ತಾರೆ.
.......................................... ನಂದನ್ ಕೆ ಹೆಚ್
ಏಳನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕುದ್ಮಾರು ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************