-->
ಬದಲಾಗೋಣವೇ ಪ್ಲೀಸ್....! ಸಂಚಿಕೆ - 8

ಬದಲಾಗೋಣವೇ ಪ್ಲೀಸ್....! ಸಂಚಿಕೆ - 8

ಗೋಪಾಲಕೃಷ್ಣ ನೇರಳಕಟ್ಟೆ                              ಶಿಕ್ಷಕರು ಹಾಗೂ ತರಬೇತುದಾರರು

       ಬದಲಾಗೋಣವೇ ಪ್ಲೀಸ್....! ಸಂಚಿಕೆ - 8 

        ಬಗೆಹರಿಸಲಾಗದ ಒಗಟಿನ ಸಮಸ್ಯೆ ಎಂದು ಭಾವಿಸಿ ತಲೆಯ ಮೇಲೆ ಕೈಹೊತ್ತು ಕೂತ ವ್ಯಕ್ತಿಗಳನ್ನು ಕಂಡಾಗ ಬೇಸರವಾಗುತ್ತದೆ. ನಾವು ದಿನನಿತ್ಯ ನಮ್ಮ ಸಂಸಾರ, ಕುಟುಂಬ, ಗೆಳೆಯರ ಬಳಗ ,  ಸುತ್ತಲ ಸಮಾಜದಲ್ಲಿ ಬಗೆಹರಿಸಲಾಗದ ಸಮಸ್ಯೆ ಎಂದು ಭಾವಿಸಿ ಗೊಂದಲಮಯ ಪರಿಸ್ಥಿತಿಯಲ್ಲಿ ಜೀವಿಸುತ್ತಿರುವ, ಪರಿಹಾರಕ್ಕಾಗಿ ಕಾಯುತ್ತಿರುವ ಮತ್ತು ಬಿಡುಗಡೆ ಇಲ್ಲವೆಂದು ಭ್ರಮನಿರಸನಗೊಂಡಿರುವ ಹಲವಾರು ನಿಸ್ತೇಜ ಮನಸ್ಸುಗಳನ್ನು  ಕಾಣುತ್ತೇವೆ. ಆಗ ನನಗೆ ಬಿಡಿಸಲಾಗದ ಸಮಸ್ಯೆಯೊಂದನ್ನು ಪರಿಹರಿಸಿದ ಹಳೆಯ ವಿಶ್ವವಿಖ್ಯಾತ ಒಂಟೆಯ ಕಥೆಯ ನೆನಪಾಗುತ್ತದೆ.

      ಮೂರು ಮಕ್ಕಳಿರುವ ಒಂಟೆಗಳ  ಮಾಲೀಕನೊಬ್ಬ ಗುಪ್ತವಾಗಿ ವೀಲುನಾಮೆಯನ್ನು ಬರೆದು ಸಾಯುತ್ತಾನೆ. ಆತನ ಮರಣದ ನಂತರ ಮಕ್ಕಳು ವೀಲುನಾಮೆ ತೆರೆದು ನೋಡಿದಾಗ ಅದರಲ್ಲಿ "ನನ್ನ ಬಳಿ ಇರುವ ಆಸ್ತಿ ಎಂದರೆ ಹದಿನೇಳು ಒಂಟೆಗಳು ಮಾತ್ರ. ಅದರಲ್ಲಿ ಹಿರಿಯ ಮಗನಿಗೆ 1/2 ಭಾಗ, ಮಧ್ಯಮನಿಗೆ  1/3 ಭಾಗ ಮತ್ತು ಕಿರಿಯವನಿಗೆ 1/9ನೇ ಭಾಗ ಬರುವಂತೆ ಹದಿನೇಳು ಒಂಟೆಗಳನ್ನು ಹಂಚಿಕೊಂಡು ಸುಖವಾಗಿ ಬಾಳಿರಿ" ಎಂದು ಬರೆದಿತ್ತು. ಅಪ್ಪನ ವಿಚಿತ್ರ ವೀಲುನಾಮೆ ನೋಡಿ ಮಕ್ಕಳಿಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಾಂತಾಯಿತು. ಹದಿನೇಳು ಒಂಟೆಗಳನ್ನು ಸಮನಾಗಿ ಹಂಚುವುದಾದರೂ ಹೇಗೆ ? ಎಂಬ ಪ್ರಶ್ನೆ ಉದ್ಭವಿಸಿತು. ಮೂರು ಜನರೊಳಗೆ ವಾದ ವಿವಾದಗಳು ಹುಟ್ಟಿಕೊಂಡಿತು. ವೈಮನಸ್ಸು ಹೆಚ್ಚಾಯಿತು. ಸಮಸ್ಯೆಯ ಬಗ್ಗೆಯೇ ಚಿಂತಿಸಿದ ಕಾರಣ ಪರಿಹಾರ ಮರೀಚಿಕೆಯಾಯಿತು. ಒಂದು ವೇಳೆ ಈ ಪರಿಸ್ಥಿತಿಯಲ್ಲಿ ನೀವು ಇರುತ್ತಿದ್ದರೆ ಈ  ಸಮಸ್ಯೆಯನ್ನು ಹೇಗೆ ಪರಿಹರಿಸುವಿರಿ .....?
        ಸ್ವಲ್ಪ ಸಮಯ ಕಳೆದ ಬಳಿಕ ಆ ಊರಿಗೆ ಜ್ಞಾನಿಯೊಬ್ಬರು ಬಂದರು. ಈ ಸುದ್ದಿ ಕೇಳಿ 3 ಜನ ಅಣ್ಣ ತಮ್ಮಂದಿರು ಅವರ ಬಳಿ ಬಂದು ವೀಲುನಾಮೆ ತೋರಿಸಿ ಸಮಸ್ಯೆ ಪರಿಹರಿಸಲು ಹೇಳಿದರು. ಒಗಟಾದ ಸಮಸ್ಯೆಯನ್ನು ನೋಡಿ ಜ್ಞಾನಿಗಳು" ನಾನು ಹೇಳಿದಂತೆ ಕೇಳಿದರೆ ಸಮಸ್ಯೆ ಪರಿಹರಿಸುವೆ" ಎಂದರು. ಅದಕ್ಕೆ ಅಣ್ಣ ತಮ್ಮಂದಿರು ಒಪ್ಪಿದರು. ಜ್ಞಾನಿಗಳು ಹದಿನೇಳು ಒಂಟೆಗಳ ಜತೆ ತನ್ನಲ್ಲಿರುವ ಒಂದು ಒಂಟೆಯನ್ನು ಸೇರಿಸಿ ಒಟ್ಟು ಹದಿನೆಂಟು ಒಂಟೆಗಳನ್ನು ಕಲ್ಪಿಸಿದರು. ಅದರ ಅರ್ಧಭಾಗ ಅಂದರೆ ಒಂಭತ್ತನ್ನು ಹಿರಿಯ ಮಗನಿಗೆ, ಮೂರನೇ ಒಂದು ಭಾಗ ಅಂದರೆ ಆರನ್ನು  ಮಧ್ಯಮನಿಗೆ ಮತ್ತು ಒಂಭತ್ತನೇಯ ಒಂದು ಭಾಗ ಅಂದರೆ ಎರಡನ್ನು ಕಿರಿಯ ಮಗನಿಗೆ ಹಂಚಿದರು. ಒಟ್ಟಾರೆ 9+6+2=17 ಒಂಟೆಗಳನ್ನು ಹಂಚಿ ಅಸಾಧ್ಯವೆನಿಸಿದ ಒಗಟಿನ ಸಮಸ್ಯೆಯನ್ನು ಪರಿಹರಿಸಿದರು. ಸಮಸ್ಯೆಯೊಂದಿಗೆ ಒದ್ದಾಡುತ್ತಿದ್ದ ಅಣ್ಣ ತಮ್ಮಂದಿರು ಆಶ್ಚರ್ಯಚಕಿತರಾದರು. ಸಮಸ್ಯೆಯ ಸುಳಿಯಿಂದ ಹೊರಬಂದು ಸತ್ತ್ವಯುತ ಬದುಕ ಬದುಕಿದರು. ಅಸಾಧ್ಯಕ್ಕೆ ಸಾಧ್ಯತೆ ಒದಗಿಸಿದ್ದು , ಪರಿಹಾರಕ್ಕೆ ಕಾರಣವಾದದ್ದು, ಸಮಸ್ಯೆಯ ಬದಲು ಪರಿಹಾರದ ಬಗ್ಗೆಯೇ ಚಿಂತಿಸಿ ಕಲ್ಪಿಸಿದ 18ನೇ ಒಂಟೆ .
         ಒಮ್ಮೊಮ್ಮೆ ಕಲ್ಪಿತ ಭಾವಗಳು ಪರಿಹಾರದ ಭಾಗವಾಗುವುದುಂಟು. ಪ್ರತಿಯೊಂದು ಬೀಗಕ್ಕೂ ಕೀಲಿ ಕೈ ಇದ್ದೇ ಇರುತ್ತದೆ. ಆದರೆ  ಯಾವ ಬೀಗಕ್ಕೆ ಯಾವ ಕೀಲಿ ಕೈ ಎಂದು ನಿರ್ಧರಿಸುವುದು ನಮ್ಮ ನಿರ್ಧಾರ... ನಮ್ಮ ಆಯ್ಕೆಯಾಗಿದೆ . ಆದರೆ ಸರಿಯಾದ ಕೀಲಿಕೈಯನ್ನು ಉಪಯೋಗಿಸುವವನೇ ನಿಜವಾದ ಜ್ಞಾನಿ. ಆ ಜ್ಞಾನಿಗಳು ನಾವಾಗಬೇಕಾಗಿದೆ.
        ಕ್ರಿಕೆಟ್ ಅಂಗಣದ ಹೊರಗಡೆ ಸಿಕ್ಸರ್, ಬೌಂಡರಿ, ವಿಕೆಟ್ , ಕ್ಯಾಚ್ , ನಾಲಾಯಕ್ ಆಟಗಾರ ಎಂದೆಲ್ಲ ಪ್ರೇಕ್ಷಕರು ಕಿರುಚಾಡುವರು.   ಇವರಲ್ಲಿ  ಕ್ರಿಕೆಟ್ ಆಡಿಗೊತ್ತಿಲ್ಲದವರೂ  ಇರಬಹುದು. ಟೈಂಪಾಸ್ ಗೆ ಬಂದವರು ಇರಬಹುದು. ಮನರಂಜನೆಗೆ ಬಂದವರು ಇರಬಹುದು. ಇನ್ನೂ ಬೇರೆ ಬೇರೆ ಕಾರಣಗಳಿಂದ ಬಂದವರೂ ಇರಬಹುದು. ಪ್ರೇಕ್ಷಕರ ಕಿರುಚಾಟಕ್ಕೆ ಅಂಗಣದೊಳಗೆ ಇರುವ ಆಟಗಾರನು ಏಕಾಗ್ರತೆ ಕಳೆದುಕೊಂಡರೆ ನೈಜ ಆಟ ಖತಂ. ಹಾಗಾಗಿ ಪ್ರೇಕ್ಷಕರ ಕಿರುಚಾಟವನ್ನು ಸಮಚಿತ್ತದಿಂದ ನೋಡಿ ಗೆಲುವಿನ ಗುರಿಯತ್ತ ಗಮನವನ್ನು ಕೇಂದ್ರೀಕರಿಸಿದರೆ ಮಾತ್ರ ಆಟಗಾರ ಗೆಲುವು ಸಾಧಿಸಬಹುದು.
        ನಮ್ಮ ಜೀವನವೆಂಬ ಕ್ರಿಕೆಟ್  ಆಟದಲ್ಲೂ  ನಮಗೆ ಸಂಬಂಧವೇ ಇಲ್ಲದ , ಅರ್ಥವಿಲ್ಲದ , ನಮ್ಮ ಸೋಲನ್ನೆ ಬಯಸುವ ಋಣಾತ್ಮಕ ಟೀಕೆ , ನಿಂದನೆ ಅಥವಾ ಕಿರುಚಾಟಗಳಿಗೆ ಪ್ರತಿಕ್ರಿಯೆ ನೀಡದೆ ಧನಾತ್ಮಕ ಗುರಿಯೆಡೆಗೆ ಗಮನ ಕೇಂದ್ರೀಕೃತವಾದರೆ ಗೆಲುವು ಖಂಡಿತಾ ಬಂದೇ ಬರುತ್ತದೆ. ಹೊರಗಿನ ಬಡಿತಗಿಂತಲೂ ಆಂತರ್ಯದ ತುಡಿತದಿಂದಾಗಿ ಮಾತ್ರ ಮೊಟ್ಟೆಯೊಡೆದು ಮರಿಯು ಹೊರಬಂದು ಹೊಸ ಜಗತ್ತನ್ನು ನೋಡಿದಂತೆ  ನಾವು ಕೂಡಾ ಬಾಹ್ಯ ಒತ್ತಡಗಳಿಂದ ಮುಕ್ತರಾಗಿ  ಅಂತರಂಗದ ಪ್ರೇರಣೆಗಳಿಂದ ಪ್ರೇರಿತರಾಗಿ ಜಗತ್ತನ್ನು ನೋಡಿದರೆ ಸಮಸ್ಯೆ ರಹಿತರಾಗಿ ಬದುಕಬಹುದಾಗಿದೆ. ಸಮಸ್ಯೆಗಳ ಬಗ್ಗೆ ಚಿಂತಿಸದೆ ಪರಿಹಾರದ ಬಗ್ಗೆಯೇ ಚಿಂತಿಸಿದರೆ ನಿಶ್ಚಿತ ಪರಿಹಾರ ಸಿಗುವುದರಲ್ಲಿ ಸಂಶಯವಿಲ್ಲ. ಬನ್ನಿ ಅಂತರಂಗದಲ್ಲಿ ಗಟ್ಟಿಯಾಗೋಣ. ಈ ಬದಲಾವಣೆಗೆ ಯಾರನ್ನು ಕಾಯದೆ ನಾವೇ ಬದಲಾಗೋಣ. ಧನಾತ್ಮಕ ಬದಲಾವಣೆ ನಮ್ಮೆಲ್ಲರ ದಿನನಿತ್ಯದ ದಿನಚರಿಯಾಗಲಿ. ಬದಲಾಗೋಣವೇ ಪ್ಲೀಸ್... ಏನಂತೀರಿ....?

...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************

Ads on article

Advertise in articles 1

advertising articles 2

Advertise under the article