-->
ಬದಲಾಗೋಣವೇ ಪ್ಲೀಸ್....! ಸಂಚಿಕೆ - 7

ಬದಲಾಗೋಣವೇ ಪ್ಲೀಸ್....! ಸಂಚಿಕೆ - 7

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು

       ಬದಲಾಗೋಣವೇ ಪ್ಲೀಸ್....! ಸಂಚಿಕೆ - 7

     ದೃಷ್ಟಿ ಬದಲಾದರೆ ದೃಶ್ಯವೂ ಬದಲಾದೀತು...!
----------------------------------------------------
               ಗುರುಗಳು ಆಶ್ರಮದಲ್ಲಿರುವ ಮರವೊಂದನ್ನು ಗಟ್ಟಿಯಾಗಿ ಅಪ್ಪಿಹಿಡಿದುಕೊಂಡು ಬಹಳ ಚಿಂತೆಯಿಂದ ಇದ್ದರು. ಆಗ ಅಲ್ಲಿಗೆ ಬಂದಿದ್ದ ಶಿಬಿರಾರ್ಥಿಗಳು "ಏನು ಮಾಡ್ತಾ ಇದ್ದೀರಾ ಗುರುಗಳೇ....?" ಎಂದು ಕೇಳಿದರು. ಆಗ ಗುರುಗಳು ...." ಮರವು ನನ್ನನ್ನು ಗಟ್ಟಿಯಾಗಿ ಅಪ್ಪಿ ಹಿಡಿದುಕೊಂಡಿದೆ. ಬಿಡುಗಡೆಗೆ ಕಾಯುತ್ತಿದ್ದೇನೆ, ಎಷ್ಟು ಪ್ರಯತ್ನಿಸಿದರೂ ಮರ ನನ್ನನ್ನು ಬಿಡುತ್ತಿಲ್ಲ. ನೀವೊಮ್ಮೆ ಮರದ ಹಿಡಿತದಿಂದ ನನ್ನನ್ನು ಬಿಡಿಸಬಲ್ಲಿರಾ.. ಮರವೊಮ್ಮೆ ನನ್ನನ್ನು ಬಿಟ್ಟರೆ ಸಾಕಾಗಿತ್ತು. ಆಶ್ರಮಕ್ಕೆ ಬಂದು ಹೊಸ ಜೀವನ ನಡೆಸಬಹುದಿತ್ತು." ಎಂದು  ಉತ್ತರಿಸಿದರು. 
             ಆಗ ಶಿಬಿರಾರ್ಥಿಗಳಲ್ಲಿ ಒಬ್ಬ "ಏನು ಹೇಳುತ್ತಿರುವಿರಿ ಗುರುಗಳೇ... ನೀವು ಜ್ಞಾನಿಗಳು... ನಿಮಗಷ್ಟೂ ಗೊತ್ತಾಗುವುದಿಲ್ಲವೇ...! ಮರವು ನಿಮ್ಮನ್ನು ಹಿಡಿದುಕೊಂಡಿಲ್ಲ.... ನೀವೇ ಮರವನ್ನು   ಅಪ್ಪಿಕೊಂಡಿದ್ದೀರಿ. ನೀವೇ ಅದನ್ನು ಬಿಡಬೇಕು. ಮರವು ನಿಮ್ಮನ್ನು ಬಿಡಲು ಎಂದಾದರೂ ಸಾಧ್ಯವೇ.... ? ನೀವು ಬಿಡುತ್ತದೆ ಎಂದು ಕಾಯುತ್ತಲೇ ಇದ್ದರೆ ಅದು ವ್ಯರ್ಥ ಕಾಲಹರಣ. ಅದು ಕೊನೆಯೇ ಆಗುವುದಿಲ್ಲ ಮತ್ತು  ನೀವು ಆಶ್ರಮಕ್ಕೆ ಬರಲಾಗುವುದಿಲ್ಲ." ಎಂದನು.
        ಗುರುಗಳು ನುಡಿದರು..... " ಇದನ್ನೇ ನಾನು ನಿಮಗೆ ಹೇಳಲು ಪ್ರಯತ್ನಿಸುತ್ತಿದ್ದೇನೆ. ಪ್ರತಿ ದಿನ ಸಮಸ್ಯೆಗಳೇ ಅಲ್ಲದ್ದನ್ನು  ಸಮಸ್ಯೆ ಎಂದು ಭಾವಿಸಿರುವ ಹಲವಾರು ಮಂದಿ ಬರುತ್ತಾರೆ..... ನಾನು ನನ್ನ ಚಟಗಳನ್ನೆಲ್ಲ ಬಿಡಲಾಗುತ್ತಿಲ್ಲ.. ಜೀವನದ ನೋವುಗಳು ಹಾಗೂ ಕಹಿ ಘಟನೆಗಳನ್ನೆಲ್ಲ ಮರೆಯಲಾಗುತ್ತಿಲ್ಲ. ಹೇಗಾದರೂ ಬಿಡುಗಡೆಗೊಳಿಸಿ ಗುರಗಳೇ ಎಂದು". ಹೇಗೆ ಮರ ನಮ್ಮನ್ನು ಹಿಡಿದಿಟ್ಟುಕೊಂಡಿರುವುದಿಲ್ಲವೋ.... ಅದೇ ರೀತಿ ಚಟಗಳು.. ಸಮಸ್ಯೆಗಳು.. ಎಂದೂ ನಮ್ಮನ್ನು ಅಂಟಿಕೊಂಡಿರುವುದಿಲ್ಲ. ನಾವೇ ಅದನ್ನು ಅಪ್ಪಿಕೊಂಡು ಮುದ್ದಾಡುತ್ತಿದ್ದೇವೆ... ದಿನದಿಂದ ದಿನಕ್ಕೆ ಬೆಳೆಸುತ್ತಿದ್ದೇವೆ. ನಾವು ಮುಷ್ಠಿ ಸಡಿಲುಗೊಳಿಸದೆ ಬಿಡುಗಡೆ ಅಸಾಧ್ಯ.  ಬಿಡುಗಡೆ ನಾವೇ ಮಾಡಬೇಕಲ್ಲದೆ ಬೇರೆಯವರು ಮಾಡಲು ಸಾಧ್ಯವಿಲ್ಲ." ಎಂದರು. ಬಿಡುಗಡೆಯ ಗೂಡಾರ್ಥವನ್ನು ಶಿಬಿರಾರ್ಥಿಗಳಿಗೆ ಕಲಿಸಿಕೊಟ್ಟರು.
         ಹೌದಲ್ಲವೇ... ನಾವು ಕೂಡಾ ನಮ್ಮ ಜೀವನದ ಹಾದಿಯಲ್ಲಿ ಕಂಡ ಅಥವಾ  ಕಲ್ಪಿಸಿಕೊಂಡ ಅನೇಕ ವಿಷಯಗಳನ್ನು ಚಟವನ್ನಾಗಿಸಿ ಮರವನ್ನು ಅಪ್ಪಿಕೊಂಡಂತೆ ಅಪ್ಪಿಕೊಂಡಿರುತ್ತೇವೆ.   ಕುಡಿತ, ಧೂಮಪಾನ ಮಾದಕ ದ್ರವ್ಯ ಸೇವನೆ , ಸಂಶಯ 
ಪ್ರವೃತ್ತಿ , ಅಹಂಕಾರ , ನನ್ನದೇ ನಡೆಯಬೇಕೆಂಬ ಹಟ , ದುರಾಸೆ , ಅತೃಪ್ತಿ , ಹಣ - ಅಧಿಕಾರ - ಆಸ್ತಿಗಳ ಅತಿಯಾದ ವ್ಯಾಮೋಹ ಇದೆಲ್ಲ ಚಟಗಳೇ ಆಗಿದೆ. ಈ ಚಟಗಳು ಅದಾಗಿಯೇ ಬಂದು ನಮ್ಮನ್ನು ಅಪ್ಪಿಕೊಂಡಿಲ್ಲ ... ನಾವೇ ಕರೆದು ಕರೆದು ಅಪ್ಪಿಕೊಂಡಿದ್ದೇವೆ. ಹಾಗಾಗಿ ಬಿಡುಗಡೆ ಕೂಡಾ ನಾವೇ ಹೊಂದಬೇಕು.
          ಮನೆ ಹೀಗೆಯೇ ಇರಬೇಕೆಂದು ಯಜಮಾನ... ಹೆಂಡತಿ ಹೀಗೆಯೇ ಇರಬೇಕೆಂದು ಗಂಡ.. ಗಂಡನು ಹೀಗೆಯೇ ಇರಬೇಕೆಂದು ಹೆಂಡತಿ ... ಮಕ್ಕಳು ಹೀಗೆಯೇ ಇರಬೇಕೆಂದು ಹೆತ್ತವರು... ವಿದ್ಯಾರ್ಥಿಗಳು ಹೀಗೆಯೇ ಇರಬೇಕೆಂದು ಶಿಕ್ಷಕರು ... ಕೆಲಸದವರು ಹೀಗೆಯೇ ಇರಬೇಕೆಂದು ಮಾಲೀಕರು... ಶಿಕ್ಷಕರು ಹೀಗೆಯೇ ಇರಬೇಕೆಂದು ಸಮಾಜ... ಹೀಗೆ .. ಹೀಗೆಯೇ... ಇರಬೇಕೆಂಬ ಪಟ್ಟಿ ಉದ್ದಕ್ಕೆ ಬೆಳೆಯುತ್ತದೆ. ಆದರೆ ನಾನು ಹೇಗಿದ್ದೇನೆ ಎಂಬುದನ್ನು ಯಾರು ಗಮನಿಸುತ್ತಿಲ್ಲ. ನಮ್ಮನ್ನು ನಾವು ಮೊದಲು ಬದಲಾಯಿಸಿದರೆ ಎಲ್ಲವೂ ಬದಲಾಗುತ್ತದೆ. ಮಕ್ಕಳ ಜತೆ ಮಕ್ಕಳಾಗಬೇಕು. ಇಲ್ಲದೇ ಹೋದರೆ ಮಕ್ಕಳು ಪ್ರೀತಿಸುವುದಾದರೂ ಹೇಗೆ ?.... ತನ್ನ ಗುರುಗಳನ್ನು ಗೌರವಿಸದವನು ತನ್ನ ಶಿಷ್ಯರಿಂದ ಗೌರವ ಬಯಸುವುದಾದರೂ ಹೇಗೆ....? ಮೋಸಗಾರ ವ್ಯಾಪರಸ್ಥರು ಪ್ರಾಮಾಣಿಕ ಆಳುಗಳನ್ನು ಬಯಸುವುದಾದರೂ ಹೇಗೆ.....? ಎಲ್ಲರಿಗೂ ತನ್ನ ದೃಷ್ಟಿಯಂತೆ ಸೃಷ್ಟಿ ಇರಬೇಕೆಂಬ ಹಟ.. ಅದಕ್ಕೆ ದೃಷ್ಟಿ ಬದಲಾದರೆ ದೃಶ್ಯವೂ ಬದಲಾಗುತ್ತದೆಯಲ್ಲವೇ......?
        ಗುರುಗಳಾಜ್ಞೆಯಂತೆ ನಗರವೆಲ್ಲ ಸುತ್ತಿದರೂ ಕೌರವನಿಗೆ ಒಳ್ಳೆಯವರಾರು ಸಿಗಲಿಲ್ಲವಂತೆ. ಆದರೆ ಅದೇ ನಗರ ಸುತ್ತಿದ ಧರ್ಮರಾಯನಿಗೆ ಕೆಟ್ಟವರಾರು ಸಿಗಲಿಲ್ಲವಂತೆ.... ಇದೇ ನಮ್ಮ ದೃಷ್ಟಿ.   ನಾವು ಒಳ್ಳೆಯತನವನ್ನೇ ಹುಡುಕುತ್ತಾ ಹೋದರೆ ಒಳ್ಳೆಯತನವೇ ದೊರಕುತ್ತದೆ. ನಾವು ತಪ್ಪುಗಳನ್ನೇ ಹುಡುಕಿದರೆ ತಪ್ಪುಗಳೇ ಸಿಗುತ್ತದೆ.
        ಒಂದೇ ಸನ್ನಿವೇಶ ಅಥವಾ ಘಟನೆಯು ಕೆಲವರಿಗೆ ಧನಾತ್ಮಕವಾಗಿ ಕಂಡರೆ ಕೆಲವರಿಗೆ ಖುಣಾತ್ಮಕವಾಗಿ ಕಾಣಬಹುದು. ಸೃಷ್ಟಿಯಲ್ಲಿ ಒತ್ತಡಗಳಿಲ್ಲ ಆದರೆ ನಾವು ಸೃಷ್ಟಿಯನ್ನು ನೋಡುವ ದೃಷ್ಟಿಯಿಂದ ಒತ್ತಡಗಳು ಉಂಟಾಗುತ್ತದೆ. ಸುಂದರವಾದ ಗುಲಾಬಿ ಗಿಡದಲ್ಲಿ ಹೂವಿನ ಜತೆ ಮುಳ್ಳುಗಳಿರುವುದು ಸಹಜ. ಮುಳ್ಳಿನ ಬಗ್ಗೆ ನಮ್ಮ ಗಮನ ಕೇಂದ್ರೀಕೃತವಾದರೆ ಹೂವಿನ ಸೌಂದರ್ಯ ಅನುಭವಿಸುವುದಾದರೂ ಹೇಗೆ....?  ಹಾಗಾಗಿ ನಾವು ಎಲ್ಲರಲ್ಲಿರುವ ಒಳ್ಳೆಯತನಕ್ಕೆ ಬೆಲೆ ಕೊಡೋಣ... ಜೀವನ ಹಾಗೂ ಸಂಬಂಧಗಳೆಂದರೆ ಒಮ್ಮೆಆರಂಭಿಸಿ ಒಂದು ನಿರ್ದಿಷ್ಟ ಅವಧಿಯಲ್ಲಿ ಮುಗಿಸುವ ಪದವಿ ಅಥವಾ ಡಿಪ್ಲೊಮಾಗಳಲ್ಲ.
ಅದು ಜೀವಮಾನದ ಶಿಕ್ಷಣ... ಕೇವಲ ಕಲಿಯುವುದಕ್ಕಾಗಿ ಇರುವುದಿಲ್ಲ.
ಅನುಭವಿಸಲು , ಜೀವಿಸಲು ಹಾಗೂ ಪ್ರೀತಿಸಲೂ ಇರುವುದು. ಬನ್ನಿ ನಮ್ಮ ಬದುಕಿನ ಜತೆಗೆ ನಮ್ಮವರ ಬದುಕಿನಲ್ಲೂ ಬದಲಾವಣೆ ತರೋಣ. ಲೈಫ್ ಇಸ್ ಬ್ಯುಟಿಫುಲ್... ಅದನ್ನು ಖುಷಿಯಿಂದ ಕಳೆಯೋಣ .... ದೃಷ್ಟಿ ಬದಲಾದರೆ ದೃಶ್ಯ ಬದಲಾಗುತ್ತದೆ. ಈ ಬದಲಾವಣೆಗಾಗಿ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾವಣೆ ನಮ್ಮ ದಿನನಿತ್ಯದ ಕಾರ್ಯವಾಗಲಿ. ಬದಲಾಗೋಣವೇ ಪ್ಲೀಸ್.... ಏನಂತೀರಿ...?
...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article