-->
ಪದಗಳ ಆಟ ಭಾವಚಿತ್ರ ಪಾತ್ರ ಸಂಚಿಕೆ - 6

ಪದಗಳ ಆಟ ಭಾವಚಿತ್ರ ಪಾತ್ರ ಸಂಚಿಕೆ - 6

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 6

      ನಿರ್ವಿಕಾರವಾಗಿ ನೋವಿಗೆ ಬದ್ಧ ನಲಿವಿಗೆ ಸಿದ್ಧ
      ನೀವು ಪ್ರಶ್ನೆ ಕೇಳಿ.....
ನಾನೇ ಮಾತನಾಡುತ್ತಾ ಹೋಗಲಾರೆ ......
     ನಾವು ಯಾಕೆ ಶಿಕ್ಷಣ ಪಡೆಯಬೇಕು....? 
ಶಿಕ್ಷಣ ಅಂದರೆ ಯಾವುದಲ್ಲ. ಮೊದಲು ನೋಡೋಣ.  ನೇತಿ ಸಿದ್ಧಾಂತವಿದು. 
       ಶಿಕ್ಷಣ ತಂದೆ ತಾಯಿಯ ಅಥವಾ ಸಮಾಜದ ಇಚ್ಛೆಗಾಗಿ ಅಲ್ಲ. ಗಣಿತ ಭೂಗೋಳ ವಿಜ್ಞಾನಗಳಲ್ಲಿ ತಜ್ಞರಾಗುವುದು ಅಷ್ಟೇ ಅಲ್ಲ. ಸಾವಿರಾರು ವರ್ಷಗಳಿಂದ ಹರಿಯುತ್ತಿರುವ ಸಾಮಾಜಿಕ ಆರ್ಥಿಕ ಚಟುವಟಿಕೆಗಳ ಪ್ರವಾಹದಲ್ಲಿ ಸೇರುವುದಕ್ಕೆ ಅಲ್ಲ. 
ಪದವಿ ಪರೀಕ್ಷೆಗಲ್ಲ, ಉದ್ಯೋಗ ಗಳಿಸಿ ಮದುವೆ ಮಾಡಿ ಜೀವನ ನಿರ್ವಹಿಸಲಿಕ್ಕಷ್ಟೇ  ಅಲ್ಲ...! 
      ಶಿಕ್ಷಕರು , ಪಠ್ಯ ಪುಸ್ತಕದ  ತಿಳುವಳಿಕೆಗಿಂತ ಭಿನ್ನವಾದ ಮಾನಸಿಕ ಬದಲಾವಣೆ ತರಬಲ್ಲ ಅರ್ಥಪೂರ್ಣ ಶಿಕ್ಷಣ ಕೊಡುವುದು ಸಾಧ್ಯವೇ......? ಶಿಕ್ಷಕರು ಅನುಸರಿಸುವುದನ್ನು ನಿರಾಕರಿಸಿ ಹೊಸತನ್ನು ಕಲಿಯಬೇಕಾಗಿದೆ. ಶಿಕ್ಷಣ ಅಂದರೆ ಕಲಿಸುವುದಲ್ಲ.  ಅದು ಅನ್-ಲರ್ನಿಂಗ್. 
ಅದು ಕಷ್ಟವಲ್ಲವೇ.....? 
ಹೌದು.....  ಆದರೆ ಅಸಾಧ್ಯವೇನಲ್ಲ. ಸುಲಭದ ಬಾಳು ನಮಗೆ ಪ್ರಿಯ. ನಮಗೆ ರಿಸ್ಕ್ ಬೇಡ. ಕಂಫರ್ಟ್ ಜೋನ್ ಬೇಕು. ನಮಗೆ ಇನ್ನೊಬ್ಬರನ್ನು ಅನುಸರಿಸುವುದು ಸುಲಭ. ಅದು ಗೀಳು. ಸಂಪ್ರದಾಯಕ್ಕೆ ಹೊಂದಿ ನಡೆಯುವ ಸುಲಭದ ಹಾದಿಯದು. 
          ವಿರುದ್ಧವಾಗಿ ನಡೆಯುವುದೆಂದರೆ ಭಯ ಅನೇಕ ವಿಷಯಗಳ ಭಯ. ಹೆದರದೇ ಬಾಳುವುದು ಎಂದರೆ ಏನು...? ತಿಳಿಯಬೇಕಾಗಿದೆ. ನಿಮ್ಮ ಬಾಳು ನಿಮ್ಮದು ಸ್ವಂತದ್ದು. ಅದಕ್ಕೆ ಪುಸ್ತಕವೋ, ಒಬ್ಬ ಗುರುವೋ  ಬೆಳಕಾಗಬಾರದು. ನಿಮ್ಮನ್ನು ನೀವೇ ಅರಿತಾಗ ಜಾಣ್ಮೆ ಹುಟ್ಟುತ್ತದೆ. ಆಗ ಸಂತೋಷದ ಸುಂದರ ಬದುಕು ನಿಮ್ಮದು. 
          ನಮಗೆ ಅನೇಕ ಭಯಗಳಿವೆ. ತಂದೆ  ತಾಯಿಯ ಭಯ, ಶಿಕ್ಷಕರ ಭಯ , ಪರೀಕ್ಷೆಯ ಅಯಶಸ್ಸಿನ ಭಯ. ಭಯವನ್ನು ತಿಳಿದು ಅದರಿಂದ ಬಿಡುಗಡೆ ಹೊಂದಬೇಕು. ಭಯವನ್ನು ಕಳಚಿ ಒಗೆದಾಗ ಮಾತ್ರ ಜಗತ್ತಿನ ಅದ್ಭುತ ಕಾಣುತ್ತದೆ. ನಮಗಿರುವ ಸುಂದರ ಅವಕಾಶದ ಅರಿವಾಗುತ್ತದೆ. ಭಯ ಕಳೆದರೆ ಭಾವನೆಗಳು ಹುಟ್ಟುತ್ತವೆ. ಭಯವನ್ನೇ ನಿರ್ಭಯದಿಂದ ನೋಡಲು ಸಾಧ್ಯವಾದರೆ ಅದರಿಂದ ವಿಮುಖರಾಗದೇ ಅದರ ಚೆಲುವನ್ನು, ಗಣಿತವನ್ನು ಕಾಣಲು ಸಾಧ್ಯವಾದರೆ ಪ್ರೀತಿ ಹುಟ್ಟುತ್ತದೆ. ಹಾವನ್ನು ಕಂಡು ಹೆದರುವ ಬದಲು ಅದರ ನಾಲಿಗೆ, ಕಣ್ಣು,  ಚರ್ಮವನ್ನು ಕಂಡು ಮೆಚ್ಚಿಕೊಂಡರೆ ಅದರ ಬಗ್ಗೆ ಪ್ರೀತಿ ಹುಟ್ಟೀತು. ಬದುಕಿನ ಹೋರಾಟಗಳಲ್ಲೂ ಹಾಗೆ. 
       ಈ ಪ್ರಪಂಚದ ಕ್ರೂರ ಜನರನ್ನು ಬದಲಾಯಿಸುವುದು ಹೇಗೆ....? 
       ನೀವೇ ಬದಲಾದರೆ ಹೇಗೆ...? ಕ್ರೂರಿಗಳನ್ನು ನೋಡಿ  ನಿಮ್ಮಲ್ಲಿ ಸಂವೇದನೆ ಉಂಟಾಗಿದೆಯೇ? 
ಅದನ್ನು ನಿಮ್ಮ ವರ್ತನೆಯ ಮೂಸೆಯಲ್ಲಿ ಪರೀಕ್ಷಿಸಬೇಕು. ಒರೆಗಲ್ಲಿಗೆ ತೀಡಿ ನಿಷ್ಕರ್ಷೆ ಮಾಡಬೇಕು. ಹಾಗೆಯೇ ಉಳಿಯುವ ನಿಮ್ಮ ಉದಾಸೀನ ತೊಲಗಬೇಕು. 
ಹೇಗೆ ಬದಲಾಗಬೇಕು .......?  ಆಸೆ ಇಲ್ಲದಿರುವುದು ಬೇರೆ. ಆಸೆಯಿಂದ ಬಿಡುಗಡೆ ಬೇರೆ. ಜನ ಹುಟ್ಟುತ್ತಾರೆ ,  ಸಾಯುತ್ತಾರೆ. ಇಂಜಿನಿಯರೋ ಮನೆವಾರ್ತೆಯ ಮಹಿಳೆಯೋ ಆಗಿ ಜನ ಸಮುದ್ರದಲ್ಲಿ ಲೀನವಾಗುತ್ತಾರೆ. ಅವರು ಸಾಮಾನ್ಯ ಜನ. ಸಾಮಾನ್ಯ ಜನರಾಗಿರುವುದು ಬೇರೆ. ಅಸಾಮಾನ್ಯರಾಗುವುದು ಬೇರೆ. ಹಳೆಯದಕ್ಕೆ ಹೊಂದುವುದು ಸಾಮಾನ್ಯತೆ. ಕೆಲಸದಲ್ಲಿ ಸಿಲುಕಿಕೊಳ್ಳುವುದು ಸಾಮಾನ್ಯತೆ. ಕುತೂಹಲ ಶೋಧ, ತೀಕ್ಷ್ಣತೆ,  ಅನುರಾಗ ವಿರುವುದು ಅಸಾಮಾನ್ಯತೆ. 
ಅಸಾಮಾನ್ಯ ಆಗುವುದು ಹೇಗೆ ......? 
ಮತ್ತೆ ಹೇಗೆ.........
ಸಾಮಾನ್ಯತೆಯಿಂದ ಓಡಿ ಬಿಡು. 
ಯಾವಾಗ? 
ಇಂದೇ. ಈ ಕ್ಷಣವೇ.......
ನಿಮಗೆ ಏನೂ ಗೊತ್ತಿಲ್ಲ ಎಂದಾಗಬೇಕು. ಆಗ ಸರಿಯಾಗಿ ಕಲಿಯಬಹುದು. ಶೂನ್ಯ ವಾಗದೆ ಕಲಿಕೆ ಆರಂಭವಾಗುವುದಿಲ್ಲ. ಈ ಕಲಿಕೆಯೆಂದರೆ ಧ್ಯಾನ. ಅದಕ್ಕೆ ಬೇಕು ಗಮನ. ಇದು ಕನ್ನಡ ಇಂಗ್ಲಿಷ್ ಕಲಿತಂತಲ್ಲ. ನಿಮ್ಮ ವಿಚಾರವನ್ನು ಗಮನಿಸಿ. ಇಲ್ಲಿಂದ ಕಲಿಕೆ ಪ್ರಾರಂಭ. ಹೊರಗೆ ನೋಡುವುದಷ್ಟೇ ಅಲ್ಲ. ಒಳಗೆ ನೋಡಿಕೊಳ್ಳಬೇಕಲ್ಲ. 
ಪುಸ್ತಕದ ಜ್ಞಾನ ಬೇಡವೇ ........? 
ಅದು ಅಲ್ಲಿಗೆ ಕೊನೆಯಲ್ಲ. ವೈಜ್ಞಾನಿಕತೆ,  ಸಮಷ್ಟಿ, ವ್ಯಷ್ಟಿ  ಮೂರು ಸೇರಿ ಬುದ್ಧಿಯಾಗುತ್ತದೆ.. ಅದು ಬೇಕು. ಬುದ್ಧಿ ಜ್ಞಾನವನ್ನು ವಸ್ತುನಿಷ್ಠವಾಗಿ ಸ್ವಸ್ಥ ಯೋಚನೆಯಿಂದ ಬಳಸುತ್ತದೆ. ಬುದ್ಧಿ ಭಾವೋದ್ವೇಗವಿಲ್ಲದ ಸ್ಥಿತಿ. ಗತ ಅನುಭವ , ಜ್ಞಾನ ವಾಗುವಲ್ಲಿ ಬುದ್ಧಿ ಇದೆ. ಸಂವೇದನಾಶೀಲತೆಯಲ್ಲಿ ಜಾಗೃತ ಮನಸ್ಥಿತಿಯಲ್ಲಿ ಬುದ್ಧಿ ಇದೆ. 
ನೆಲದ ಚೆಲುವ ಬಗೆಗಿನ ಒಲವು ಬಲವಾಗದಿದ್ದರೆ.....? ಹಕ್ಕಿಪಕ್ಕಿಗಳ ಗುಂಜಾರವ, ದುಂಬಿಯ ಝೇಂಕಾರ, ಹರಿವ ತೊರೆಯ ನಾದ, ಹೂ ಅರಳುವ ನಿಶ್ಯಬ್ದ  ಗೊತ್ತೇ ಆಗದಿದ್ದರೆ..... ? ಈ ಎಲ್ಲಾ ಪ್ರಾಕೃತಿಕ ಸೂಕ್ಷ್ಮಗಳಿಗೆ ಮನಸ್ಸು ಆರ್ದ್ರವಾಗದಿದ್ದರೆ ....? ಅದೆಂತಹ ಬದುಕು..? ನೀರಸ, ನೀರವ, ನಿಬ್ಬರ. ಪುಸ್ತಕ ಜ್ಞಾನದ ಆಚೆಗಿನ ಬದುಕಿನ ಹರಹನ್ನು, ಹದವನ್ನು ಮುದವನ್ನು, ಅಂದವನ್ನು ಕುಂದನ್ನು ತೋರಿಸಬೇಕು. ಬರೀ ಹರ್ಷವಲ್ಲ. ಭಯ, ನೋವು ಮಜಾ, ಭೀಭತ್ಸ ಎಲ್ಲವನ್ನೂ ತೋರಿಸಬೇಕು. ಆಗ ವಿವೇಕದಿಂದ ಸ್ವಾಸ್ಥ್ಯದಿಂದ ಎಚ್ಚರದಿಂದ ಬಾಳುವುದು ಸಾಧ್ಯ. ನಿರ್ವಿಕಾರವಾಗಿ ನೋವಿಗೆ ಬದ್ಧ ನಲಿವಿಗೆ ಸಿದ್ಧ. 
       ನಮಗೆ ಎಷ್ಟು ನಿರ್ಬಂಧಗಳಿವೆಯಲ್ಲ ....? 
 ಯಾಕಿವೆ ....? ಅಜ್ಜಿ ತಂದೆಗೆ ಹೇಳ್ತಾರೆ. ಹೀಗೆ ಮಾಡು ಹಾಗೆ ಮಾಡು. ತಂದೆ-ತಾಯಿ ಮಗುವಿಗೆ ಅದನ್ನೇ ಹೇಳುತ್ತಾರೆ. ನಿರಾಳವಾಗಿ ಮಗು ಅದನ್ನೇ ಪಾಲಿಸುತ್ತದೆ. ಯಾಕೆಂದರೆ ಅದರ ಮನಸ್ಸು ನಿರವದ್ಯ, ನಿಷ್ಕಲ್ಮಶ,  ನಿರಂಜನ. ಆಲೋಚಿಸು..... ನಿನ್ನ ತೀರ್ಮಾನ ನೀನು ತಗೋ ಎಂದು ಹೇಳುತ್ತಾರೆಯೇ.....? ನಿರ್ಬಂಧಿತ ಮನಸ್ಸು ಬಂಧನ ಕಳಚಿ ಮುಕ್ತವಾಗುವುದು ಹೇಗೆ....? ಇದಕ್ಕೆ ಮತ್ತೆ ಯಾರನ್ನೂ  ಹಿಂಬಾಲಿಸ ಬೇಕಾಗಿಲ್ಲ. ಈ ಮುಕ್ತತೆಯನ್ನು ಸಾಧಿಸುವುದನ್ನು ನೀವೇ ಕಂಡುಹಿಡಿಯಬೇಕು......
ನಾವು ಹೇಗೆ ಮುಕ್ತರಾಗುವುದು .......? 
ಮೊದಲು ನೀವು ನಿರ್ಬಂಧಿತ ಎಂದು ತಿಳಿದಿದ್ದೀರಿ ಅದು ಹೇಗೆ .....? ನಿರ್ಬಂಧನೆಯ ಅರಿವಾದಾಗ ಬುದ್ಧಿವಂತಿಕೆ ಕ್ರಿಯಾಶೀಲವಾಗುತ್ತದೆ. 
ಪ್ರಶ್ನೆಗಳಿಂದಲೇ ಕಲಿಕೆ ಆರಂಭ, ಅಖಂಡವಾದ,  ಸಮಗ್ರವಾದ ಶಿಕ್ಷಣವು ಸ್ವಂತ ಆಲೋಚನೆ ಭಾವನೆ, ಕ್ರಿಯೆಗಳ ಬೆಳವಣಿಗೆಯನ್ನು ಸಾಧಿಸುವಂತಾಗಬೇಕು. ನಿಸರ್ಗ ಪರಿಸರ ಸಂವೇದನಾಶೀಲತೆಗಳು ಬೇಕು ಎಂದು ಕಾಣ್ಕೆಯ ಶಿಕ್ಷಣವನ್ನು ಪ್ರತಿಪಾದಿಸಿದ ಚಿಂತಕ ಯಾರು.... ಯಾರೊಬ್ಬರ ಹಿಂಬಾಲಕರಾಗಬಾರದು ಎಂದು ಹೇಳಿ ಅನನ್ಯತೆಯನ್ನು ಬಯಸಿದರು.
ಇವರು ನಿಮ್ಮೊಳಗಿಲ್ಲವೇ .........?
.....................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
********************************************


Ads on article

Advertise in articles 1

advertising articles 2

Advertise under the article