-->
ಹಕ್ಕಿ ಕಥೆ - 6

ಹಕ್ಕಿ ಕಥೆ - 6

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ

                           ಹಕ್ಕಿ ಕಥೆ - 6
               ಈ ಹಕ್ಕಿಯನ್ನು ನೀವೂ ನಿಮ್ಮ ಮನೆಯ ಅಂಗಳದಲ್ಲಿ ನೋಡಿರಬಹುದು. ಹಾರುತ್ತಾ ಕುಪ್ಪಳಿಸುತ್ತಾ ಗುಂಪು ಗುಂಪಾಗಿ ಓಡಾಡುವ ಈ ಹಕ್ಕಿ ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಕಾಣಸಿಗುತ್ತದೆ. ಸದಾ ಕ್ಯಾ ಕ್ಯಾ ಕ್ಯಾ ಅಂತ ಶಬ್ದ ಮಾಡುತ್ತಲೇ ಇರುವುದರಿಂದ ಅತಿಯಾಗಿ ಮಾತನಾಡುತ್ತದೆ, ಬರೇ ಹರಟೆ ಹೊಡೆಯುತ್ತದೆ ಎಂಬ ಅರ್ಥದಲ್ಲೇ ಈ ಹಕ್ಕಿಯ ಹೆಸರು ಹರಟೆ ಮಲ್ಲ ಅಂತ ಆಗಿರಬೇಕು. ನಮ್ಮ ಕರಾವಳಿ ಭಾಗದಲ್ಲಿ ಚಳಿಗಾಲ ಮತ್ತು ಬೇಸಗೆಯಲ್ಲಿ ಗುಡ್ಡದಿಂದ ಸೊಪ್ಪು ಮತ್ತು ತರಗೆಲೆ ( ಬಜಕ್ರೆ ) ತರಲು ಹೋಗುತ್ತಿದ್ದ ಜನ ಅಲ್ಲೆಲ್ಲಾ ಕುಪ್ಪಳಿಸುತ್ತಾ ಶಬ್ದಮಾಡುತ್ತಾ ಓಡಾಡುವ ಈ ಹಕ್ಕಿಯನ್ನು ನೋಡಿ ಇದಕ್ಕೆ ಬಜಕ್ರೆ ಪಕ್ಕಿ ಎಂದು ಹೆಸರು ಇಟ್ಟಿರಬೇಕು. ಯಾವಾಗ್ಲೂ ಮಾತಾಡ್ತಾ ಇರುವವರನ್ನು "ಬಜಕ್ರೆ ಪಕ್ಕಿದಲೆಕ ಪಾತೆರೋಂದೆ ಉಪ್ಪುವೆ" ಎಂದು ತುಳು ಭಾಷೆಯಲ್ಲಿ ಹಿರಿಯರು ಬೈಯುವುದುಂಟು. ಸದಾ ಅರಚುತ್ತಾ ಗುಂಪು ಗುಂಪಾಗಿ ಓಡಾಡುವುದರಿಂದ ಈ ಹಕ್ಕಿಗಳಿಗೆ ಇಂಗ್ಲೀಷ್ ನಲ್ಲಿ SEVEN SISTERS ಎಂಬ ಹೆಸರೂ ಇದೆ.

          ನಿಮ್ಮ ಮನೆಯ ಹತ್ತಿರ ಓಡಾಡುವ ಈ ಹಕ್ಕಿಗಳ ಗುಂಪಿನಲ್ಲಿ ಎಷ್ಟು ಹಕ್ಕಿಗಳು ಇವೆ ಎಂದು ಗಮನಿಸಿ. ಇಡೀ ಹಕ್ಕಿಯನ್ನು ಗಮನಿಸಿ. ಇದರ ಕಣ್ಣಿನ ಮಧ್ಯಬಾಗದ ಕಪ್ಪು ಚುಕ್ಕೆ ಮತ್ತು ಅದರ ಸುತ್ತಲೂ ಇರುವ ತಿಳಿ ಹಳದಿ ವೃತ್ತ ಮತ್ತು ಕೊಕ್ಕಿನ ಹಳದಿ ಬಣ್ಣ ಇದರ ಪ್ರಮುಖ ಆಕರ್ಷಣೆ. ಸುಮಾರು ಮಾರ್ಚ್ ನಿಂದ ಜುಲೈ ತಿಂಗಳ ನಡುವೆ ಮರ ಅಥವಾ ಗೊಡ್ಡ ಪೊದೆಗಳ ಮಧ್ಯೆ ಗೂಡು ಕಟ್ಟಿ ಸುಮಾರು ಮೂರರಿಂದ ಏಳು ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತವೆ. ಅದೇನೇ ಇರಲಿ ಮನೆ ಅಂಗಳದಲ್ಲಿ, ಗುಡ್ಡದಲ್ಲಿ ಪೊದೆಗಳ ನಡುವೆ ಎಲ್ಲಂದರಲ್ಲಿ ಓಡಾಡುತ್ತಾ ಸಣ್ಣಪುಟ್ಟ ಕೀಟ, ಕಂಬಳಿಹುಳ, ಹೇನು, ಕಾಳುಗಳನ್ನು  ಹೆಕ್ಕುತ್ತಾ ತನ್ನ ಹೊಟ್ಟೆಯನ್ನೂ ತುಂಬಿಸುತ್ತಾ  ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಮನೆ ಹತ್ರ ಬರುವ ಹಕ್ಕಿಗಳನ್ನು ಗಮನಿಸ್ಲಿಕ್ಕೆ ಮರೀಬೇಡಿ. ಮತ್ತೆ ಸಿಗೋಣ

ಹಕ್ಕಿಯ ಹೆಸರು: ಬಜಕ್ರೆ ಪಕ್ಕಿ , ಹರಟೆ ಮಲ್ಲ
English name: Jungle Babler 
Scientific name: Turdoides striata

.......................................ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ
*********************************************


Ads on article

Advertise in articles 1

advertising articles 2

Advertise under the article