-->
ಪದಗಳ ಆಟ ಭಾವಚಿತ್ರ ಪಾತ್ರ ಸಂಚಿಕೆ-5

ಪದಗಳ ಆಟ ಭಾವಚಿತ್ರ ಪಾತ್ರ ಸಂಚಿಕೆ-5

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 5

                   ಸಿದ್ಧತೆಗೆ ಅರ್ಥವಿದೆ.
                   ಬುದ್ಧಿಗೆ ಶುದ್ಧತೆ ಇದೆ.
 -----------------------------------------------------                        ಚಿತ್ರ : ಸುಮಾಡ್ಕರ್
        ಜೀವನ ಎನ್ನುವ ನದಿ ಯಾವಾಗ ಹೇಗೆ ತನ್ನ ದಿಕ್ಕನ್ನು ಬದಲಿಸುತ್ತದೆ ಯೋಚಿಸಲಾಗದು,  ಕಲ್ಪಿಸಲಾಗದು. ಹರಿಯುವ ನದಿಗೆ ಯಾರ ಹಂಗೂ ಇಲ್ಲ. ಹರಿದದ್ದೇ ಹಾದಿ. ಆದರೆ ಮನುಜ ಜೀವನದಲ್ಲಿ ಮನಸ್ಸೆಂಬ ಮರ್ಕಟ ಸ್ವಲ್ಪ ನೋಟ ಬದಲಿಸಿದರೂ ಜೀವನವೇ ಬದಲಾಗಿಬಿಡುತ್ತದೆ. 
ನಾವು ವಾಹನವೇರಿ ದಾರಿಯಲ್ಲಿ ಹೋಗುತ್ತೇವೆ. ಎಷ್ಟು ಮನಮಿಡಿಯುವ ದೃಶ್ಯಗಳು ಕಾಣಸಿಗುತ್ತವೆ. ಆದರೆ ಆ ಅನುಭೂತಿ ಎಷ್ಟು ಕ್ಷಣ ಜೀವಂತವಾಗಿರುತ್ತದೆ..? ಸಹಾನುಭೂತಿಯೂ ಎಷ್ಟು ಕ್ಷಣಿಕ...? 
        ಆದರೆ ಅವನೊಬ್ಬನಿದ್ದ. ಜಗತ್ತಿನ ಕ್ರೌರ್ಯವನ್ನು ಸಹಿಸದಾದ. ವಾಸ್ತವವನ್ನು ಕಂಡು ನಿರ್-ವ್ಯಾಮೋಹ ಬೆಳೆಸಿಕೊಂಡ. ಅವನ ಚಕ್ಷುಗಳಿಗೆ ಗೋಚರಿಸಿದ ಸಂಗತಿಗಳು ದಿಗ್ಬ್ರಮೆ ಮೂಡಿಸಿದವು. ಜಾತಸ್ಯ ಮರಣಂ ಧ್ರುವಂ. ಹುಟ್ಟಿದವ ಸಾಯಲೇ ಬೇಕು. ಜನನ ಆಕಸ್ಮಿಕ, ಸಾವು ಅನಿವಾರ್ಯ. ಇವೆರಡರ ನಡುವಿನ ಬದುಕು ದುಃಖದ ಸಾಮ್ರಾಜ್ಯ ಎಂದು ತಿಳಿದ , ಅದನ್ನು ತಳ್ಳಿದ. ದುಃಖದ ಮೂಲ ಯಾವುದು ಅರಸಿದ ಶೋಧಿಸಿದ. ವ್ಯಾಮೋಹ....  ಅಧಿಕಾರ ಸಂಪತ್ತು ಸಂಬಂಧಗಳ ವ್ಯಾಮೋಹ.  ನನ್ನ ಬಗ್ಗೆ , ನನ್ನ ದೇಹದ ಬಗ್ಗೆ,  ವ್ಯಾಮೋಹ. ಇದನ್ನು ತ್ಯಜಿಸಲು ತನ್ನ ದೇಹವನ್ನು ದಂಡಿಸಲು ಆರಂಭಿಸಿದ. ಅವನೊಳಗಿನ *ನಾನು* ಇದನ್ನು ಕಿತ್ತೆಸೆದ. ಕೊನೆಗೆ ಎಲ್ಲರೂ ಬಯಸುವುದು ಏನನ್ನು..? ನೀವೇ ಯೋಚಿಸಿ. ಅದು...... ಮತ್ತು........... .!
             ಒಂದು ...... ಒಬ್ಬ ಹುಡುಗಿಯ ಹೆಸರು ಆಗಬಹುದು. ಇನ್ನೊಂದು ನಿಮಗೆ ಸಂಗೀತ ನೃತ್ಯದಿಂದ ಸಿಗುವುದೇನು ...... ಅದು.
 ಎಲ್ಲರೂ ಅದಕ್ಕಾಗಿಯೇ ಮನೆ ಕಟ್ಟುತ್ತಾರೆ. ಮನಸ್ಸು ಕಟ್ಟಲು ಮರೆಯುತ್ತಾರೆ.
 ಸರ್ವರು ವಾಹನ ಕೊಂಡುಕೊಳ್ಳುತ್ತಾರೆ. ಆದರೆ ತೃಪ್ತಿಯನ್ನು ತ್ಯಜಿಸುತ್ತಾರೆ. ಮಕ್ಕಳು ಮಾಡುತ್ತಾರೆ. ಆದರೆ ಮಕ್ಕಳಿಂದ ಅವರದೇ ಬದುಕು ಕಟ್ಟುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಾರೆ.  ಆರೋಗ್ಯ ಬೇಕೆಂದು ಹಾತೊರೆಯುತ್ತಾರೆ. ದೇಹದಂಡನೆ ವಿರೋಧಿಸುತ್ತಾರೆ.  ಎಲ್ಲ ಮಿಷಿನ್ ಗಳನ್ನು ತುಂಬಿಸುತ್ತಾರೆ. ಒಳಗಿನ ಸುಖವನ್ನು ಖಾಲಿ ಮಾಡುತ್ತಾರೆ. ತತ್ಪರಿಣಾಮ............ ಮತ್ತು.....
ಮೃಗ ತೃಷಾ, ಮರೀಚಿಕೆಯೇ ಆಗುತ್ತದೆ. ಹಾಗಾದರೆ ಅವು ಯಾವುವು ಹುಡುಕಿ.....
                ಸೇವೆ ಎಷ್ಟು ಸುಂದರ ಕಲ್ಪನೆ..! ಅನ್ನ ಆಹಾರ ಇಲ್ಲದೆ ಬಳಲುವವನಿಗೆ ಒಂದು ಹೊತ್ತಿನ ಗಂಜಿ ಕೊಡಿ. ಅವನ ಕಣ್ಣಿನ ಕಾಂತಿ ನಮಗೆ ಏನನ್ನು ಕೊಡುತ್ತದೆ..? ನೋವಿನಿಂದ ನರಳುವವನಿಗೆ ಔಷಧೋಪಚಾರ ಮಾಡಿ. ಅವನ ಉಪಶಮನತೆ ನಿಟ್ಟುಸಿರು ಏನನ್ನು ನೀಡುತ್ತದೆ..? ಸಾವಿನ ಪ್ರಪಾತದ ಅಂಚಿನಲ್ಲಿ ಇರುವವನಿಗೆ ಬದುಕಿನ ಆಧಾರ ಕೊಡಿ. ಈ ಸೇವೆಯ ಸೌಂದರ್ಯ ಅಳತೆಗೆ ನಿಲುಕದ್ದು ವರ್ಣನಾತೀತ ಮಾಪನಾತೀತ.  ಎಲ್ಲಾ ಅತೀತಗಳಿಗೂ ಮೀರಿದ ಪರಮ ತತ್ವ. ಆದರೆ ಸರಳ ಸರಳಾತಿ ಸರಳ. ಸರಳತೆಯೇ ನಿರ್ಮಲ,  ನಿರಂಜನ ನಿಸ್ಪ್ರಹ ಸೌಂದರ್ಯ ದೈವಿಕವಾದುದು.
          ಅದು ಆಭರಣಗಳಲ್ಲಿ ಇಲ್ಲ. ಧನಕನಕಗಳಲ್ಲಿಲ್ಲ . ಅದು ಶೋಭಿಸುವುದು ಅಂತರಂಗದ ಸರಳ ಸೌಂದರ್ಯದಿಂದ. ಮಾನವೀಯ ಗುಣಗಳ ಲೇಪದಿಂದ. ಸರ್ವೇ ಗುಣಾಃ ಕಾಂಚನಮಾಶ್ರಯಂತಿ. ಇದು ಶಾಶ್ವತವಲ್ಲ. ಹೇಮದ ಆಸೆಗಿಂತ ಹಿಮಮಣಿಯ ಚಂದ ಲೇಸು.
............. ಕಿಂತ  ಕುಂದದ ಜೀವನೋಲ್ಲಾಸ ಸೊಗಸು.
ಈ ಪದ ಮೂರಕ್ಷರದ ಪದ. ವಜ್ರದ ಸಮಾನಾರ್ಥಕ ಪದಕ್ಕೆ ಸನಿಹ.  ಮಣ್ಣಿನೊಳಗಿನ  ಮೌನ ಅರಳಿ ಹಣ್ಣಾದಾಗ ಸ್ವರ್ಗವೆ ಧರೆಗಿಳಿದಂತೆ. ಸ್ವರ್ಗ ಬೇರೆಲ್ಲೂ ಇಲ್ಲ. ಈ ಭೂಮಿಯಲ್ಲಿ ಇದೆ. ನಮ್ಮ ಕೈಯಲ್ಲೇ ಇದೆ. ಸಾಯುವುದು ಹೇಗೆ ಎಂದು ಕಲಿಯುವುದು ಇಡೀ ಜೀವನವಾಗುತ್ತದೆ. ತಾವು ಶತ್ರುವಲ್ಲ, ಆದರೆ ಸಾವು ಶತ್ರು,  ದೂರ ಇಡಬೇಕು ಎಂಬ ತಪ್ಪು ಕಲ್ಪನೆಯಿಂದ ಅವನ ತಂದೆ ಮಗನಿಗೆ ಸುಖ ಮಾತ್ರ ಕಾಣಿಸಿದರು. ಆದರೆ ಇದರಿಂದ ದುಃಖದೊಂದಿಗಿನ ಮುಖಾಮುಖಿ ತಪ್ಪಲಿಲ್ಲ. ಸಾವನ್ನು ಮೀರಲು ಹೋದರೆ ಅದೊಂದು ವ್ಯರ್ಥ ಹೋರಾಟ. ಅದು ನಮ್ಮೊಳಗೇ ಇದೆ. ಅದು ನಮ್ಮೊಂದಿಗೆ ಬೆಳೆಯುತ್ತಾ ಪ್ರತಿಕ್ಷಣವೂ ಘಟಿಸುತ್ತದೆ.
           ಈ ಜ್ಞಾನವಿಲ್ಲದೆ ಮಗನನ್ನು ಅಡಗಿಸಿಟ್ಟ. ಆದರೆ ಅಂತರಂಗದ ಶೋಧನೆಯಿಂದ ಆತನ ಪ್ರಚ್ಛನ್ನ ಜ್ಞಾನ ಅನಾವರಣಗೊಂಡಿತು. ಈ ಮಹಾನ್ ಜ್ಞಾನ ಪ್ರತ್ಯುತ್ಪನ್ನವಲ್ಲ. ಸುದೀರ್ಘಕಾಲದ ಹೋರಾಟದಿಂದ ಮುಪ್ಪುರಿಗೊಂಡಿರುವುದು. ತಮವನ್ನು ಸೀಳಿ ಬಂದ  ಪ್ರತ್ಯುಷವಿದು. ಇದುವೇ ಜಗತ್ತಿನ ಮಿಲಿಯಗಟ್ಟಲೆ ಜನರಿಗೆ ಪೀಯೂಷವಾಯಿತು. ಆತ ಸಾರಿದ ಪ್ರಪತ್ತಿಗೆ ಜನರು ಶರಣಾದರು. ಪ್ರಬುದ್ಧನಲ್ಲಿ ಅವನಿದ್ದಾನೆ, ಅವನಲ್ಲಿ ಜ್ಞಾನವಿದೆ. ಸಿದ್ಧಿ ಇದೆ.
    ಪ್ರಾಂಜಲ ವ್ಯಕ್ತಿಗೆ ಪ್ರಾಂಜಲಿ ಬದ್ಧಳಾಗಿರುವೆ.  
    ಸಾಯದಿಹ ಅವನೊಳು ಹುಟ್ಟಿದರು  ಹಲವರು
    ಹುಟ್ಟಿಸಿದ ತಂದೆ ಹೆದರಿ ಸತ್ತನಾದರೆ
    ಅವ ಸಮ್ಯಕ್ ನಿಂದ ಮತ್ತೆ ಬದುಕಿದ.
ಇವರು ನಿಮ್ಮೊಳಗಿಲ್ಲವೇ.........?
.....................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372

********************************************

Ads on article

Advertise in articles 1

advertising articles 2

Advertise under the article