-->
ಆದಿ ಸ್ವರೂಪ ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್  ವಿಶ್ವದಾಖಲೆ ಗೌರವ

ಆದಿ ಸ್ವರೂಪ ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವಿಶ್ವದಾಖಲೆ ಗೌರವ

            ಚಿತ್ರದೊಳಗೆ ಪಠ್ಯವನ್ನು ಕಂಡ  
                      ಆದಿ ಸ್ವರೂಪ ಗೆ       
        ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್  
                   ವಿಶ್ವದಾಖಲೆ ಗೌರವ
**********************************************
        ವರ್ಷಪೂರ್ತಿ ಶಾಲೆಯ ತರಗತಿಯಲ್ಲಿ ಆರೂ ಪಠ್ಯಗಳನ್ನು ಅಭ್ಯಾಸಮಾಡಿ ಸಾವಿರಗಟ್ಟಲೆ ಪುಟ ನೋಟ್ಸ್ ಬರೆದು ಕಲಿತು ಒದ್ದಾಡುವ ಮಕ್ಕಳ ಪರಿಸ್ಥಿತಿ ಎಲ್ಲೆಲ್ಲೂ ಕಾಣುವಂತಹದ್ದು. ನೂರು ಪದಗಳಲ್ಲಿ ವಿವರಿಸುವುದನ್ನು ಒಂದು ಚಿತ್ರದ ಮೂಲಕ ತಿಳಿಸಬಹುದೆನ್ನುವ ಮಾತು ರೂಢಿಯಲ್ಲಿದೆ. ಈ ಮಾತಿಗೆ ಅಕ್ಷರಶ: ರೂಪ ಕೊಟ್ಟವರು ಸ್ವರೂಪ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ಆದಿ ಸ್ವರೂಪ.
         ಹೌದು ಆದಿ ಸ್ವರೂಪ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ 10ನೇ ತರಗತಿಯ ಎಲ್ಲಾ ಪುಸ್ತಕಗಳ ಪಠ್ಯವನ್ನು ಚಿತ್ರದ ಮೂಲಕ ವಿವರಿಸಿ ವಿಶ್ವದಾಖಲೆ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಆರು ವಿಷಯಕ್ಕೆ ಸಂಬಂಧಿಸಿದ 10 ಪಠ್ಯಪುಸ್ತಕಗಳನ್ನು ಎ-ಫೋರ್ ಅಳತೆಯ ಎಂಟು ಹಾಳೆಗಳಲ್ಲಿ ಚಿತ್ರ ಬಿಡಿಸಿದ್ದಾರೆ. ಎಲ್ಲಾ ಚಿತ್ರಗಳು ಮೇಲ್ನೋಟಕ್ಕೆ ಶೈಕ್ಷಣಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಚಿತ್ರಗಳಾಗಿ ಕಾಣುತ್ತದೆ. ಆ ಚಿತ್ರದೊಳಗೆ ಪಠ್ಯಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ. ಮಿನಿಯೇಚರ್ ಶೈಲಿಯ ಪ್ರಾಕಾರವನ್ನು ಬಳಸಿಕೊಂಡು ನೋಡುಗರಿಗೆ ಅದ್ಭುತ ಕಲಾಕೃತಿಯಾಗಿ ಮೂಡಿಬಂದಿದೆ. 
         ಕೆಲವು ತಿಂಗಳುಗಳ ಹಿಂದೆಯಷ್ಟೇ ಎರಡೂ ಕೈಗಳಲ್ಲಿ ಬರೆಯುವ ಮೂಲಕ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ತನ್ನದಾಗಿಸಿಕೊಂಡಿದ್ದ ಆದಿ ಇದೀಗ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದ್ದಾರೆ. ಮಕ್ಕಳ ಅನೌಪಚಾರಿಕ ಶಿಕ್ಷಣಕ್ಕೆ ಒತ್ತು ನೀಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಗುವ ಪರಿಯಲ್ಲಿ ಮಂಗಳೂರಿನ ಸ್ವರೂಪ ಅಧ್ಯಯನ ಸಂಸ್ಥೆ ಹಲವು ವರ್ಷಗಳಿಂದ ಸದ್ದಿಲ್ಲದೆ ಸುದ್ದಿಯಲ್ಲಿದೆ. ಇಲ್ಲಿನ ಹಲವಾರು ವಿದ್ಯಾರ್ಥಿಗಳು ಹಲವು ದಾಖಲೆಗಳನ್ನು ನಿರ್ಮಿಸಿದ್ದು ಮಾಧ್ಯಮಗಳಲ್ಲಿ ಕಂಡಿದ್ದೇವೆ. ಔಪಚಾರಿಕ ಶಿಕ್ಷಣ ಪದ್ಧತಿಯಿಂದ ಹೊರತಾಗಿ ಮಕ್ಕಳ ಭವಿಷ್ಯವನ್ನು ಅದ್ಭುತವಾಗಿ ರೂಪಿಸುವುದಕ್ಕಾಗಿ ಕಂಡು ಕೊಂಡ ಫಲವೇ ಈ ಸ್ವರೂಪ ಅಧ್ಯಯನ ಸಂಸ್ಥೆ. ಇದರ ನಿರ್ದೇಶಕ , ಕಲಾವಿದ , ಶಿಕ್ಷಣ ಚಿಂತಕ ಗೋಪಾಡ್ಕರ್ ಮತ್ತು ಪ್ರಾಂಶುಪಾಲರಾದ ಶ್ರೀಮತಿ ಸುಮಾಡ್ಕರ್ ಅವರ ಮಗಳೇ ಆದಿ ಸ್ವರೂಪ.

        ಸ್ವರೂಪ ಅಧ್ಯಯನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹತ್ತು ವಿಭಿನ್ನ ಪ್ರತಿಭೆಯನ್ನು ಪಠ್ಯದ ಜೊತೆ ಬೆಳೆಸಿಕೊಳ್ಳುವ ಸಾಮರ್ಥ್ಯ ನೀಡಲಾಗುತ್ತದೆ. 10 ಸಾಮರ್ಥ್ಯಗಳಲ್ಲಿ ಒಂದು ವಿಶುವಲ್ ಆರ್ಟ್ ಮೆಮೊರಿ ಸ್ಕಿಲ್. ಈ ಸಾಮರ್ಥ್ಯದ ಮೂಲಕ ಆದಿಯ ದಾಖಲೆ ನಿರ್ಮಾಣವಾಗಿದೆ. 2021 ನೇ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆಯನ್ನು ಆದಿ ಎರಡು ಕೈಗಳಲ್ಲಿ ಬರೆಯುವ ಮೂಲಕ ಹೊಸ ಸಾಧ್ಯತೆಯನ್ನು ತೋರ್ಪಡಿಸುವವರಿದ್ದರು. ಅತ್ಯಂತ ಸುಲಲಿತವಾಗಿ ಪರೀಕ್ಷೆಯನ್ನು ಎದುರಿಸಿ ಅತ್ಯಧಿಕ ಅಂಕಗಳೊಂದಿಗೆ ರ್ಯಾಂಕ್ ಗಳಿಸಬೇಕೆಂದು ಕನಸಾಗಿತ್ತು. ಆ ಮೂಲಕ ಯಾವುದೇ ಒತ್ತಡಕ್ಕೆ ಸಿಲುಕದೆ ಪರೀಕ್ಷೆಯನ್ನು ಎದುರಿಸಲು ಇರುವ ಸಾಧ್ಯತೆಯನ್ನು ತೋರಿಸುವುದು ಆದಿಯ ಗುರಿಯಾಗಿತ್ತು. ಆದರೆ ಸರಕಾರದ ಕೋವಿಡ್ ನಿಯಮದ ಕಾರಣದಿಂದ ಶೈಕ್ಷಣಿಕ ಸಾಲಿನಲ್ಲಿ ಬಹು ಆಯ್ಕೆಯ ಪರೀಕ್ಷಾ ಪದ್ಧತಿಯು ಅಳವಡಿಕೆಯಾಗಿದೆ. ಹಾಗಿದ್ದರೂ ತನ್ನ ಪ್ರಯತ್ನಕ್ಕೆ ಕಟಿಬದ್ಧಳಾಗಿ ಆದಿ ಸನ್ನದ್ಧರಾಗಿದ್ದಾರೆ. 
         ಆದಿ ಪಠ್ಯದ ಜೊತೆಗೆ ತನ್ನ ಹವ್ಯಾಸವನ್ನು ಮುಂದುವರಿಸುತ್ತಾ ಪುಸ್ತಕಗಳನ್ನು ಓದುವುದು , ಹಾಡು , ಮಿಮಿಕ್ರಿ , ನಾಟಕ , ಯಕ್ಷಗಾನ , ಸಾಹಿತ್ಯ ರಚನೆ , ಚಿತ್ರರಚನೆ , ಸಂಗೀತೋಪಕರಣ ನುಡಿಸುವುದು ಇತ್ಯಾದಿ ಬಹುಮುಖ ಪ್ರತಿಭಾ ವಿಕಸನಕ್ಕೆ ತೆರೆದುಕೊಳ್ಳುತ್ತಾ ತನ್ನ ಸಣ್ಣ ವಯಸ್ಸಿಗೆ ದೊಡ್ಡ ಸಾಧನೆಯ ಗೌರವಗಳಿಗೆ ಪಾತ್ರವಾಗಿರುವುದು ಹೆಮ್ಮೆಯ ಸಂಗತಿ. ಸ್ವರೂಪ ಸಂಸ್ಥೆಯ ಶೈಕ್ಷಣಿಕ ಜಾಥಾದಲ್ಲಿ ಎಳವೆಯಲ್ಲೇ ರಾಜ್ಯವ್ಯಾಪಿ ಸಂಚರಿಸಿ ಅದ್ಭುತ ಅನುಭವವನ್ನು ಪಡೆದವರು. ತಂದೆ-ತಾಯಿಯ ವಿಶೇಷ ಮಾರ್ಗದರ್ಶನದಲ್ಲಿ ಬೆಳೆದ ಇವರು ಲಾಕ್ಡೌನ್ ಕಾಲವಂತೂ ಇನ್ನೂ ಹೆಚ್ಚಿನ ಶ್ರದ್ಧೆ ಮತ್ತು ಕಲಿಕೆಗೆ ಸಹಕಾರಿಯಾಯಿತು. ಸ್ವ- ಕಲಿಕೆಗೆ ಕಿಚ್ಚು ಹತ್ತಿಸಿಕೊಂಡ ಆದಿ ನಿರಂತರ ಚಟುವಟಿಕೆಯಲ್ಲಿ ಸಮಯ ಕಳೆಯುತ್ತಾ ಶೈಕ್ಷಣಿಕವಾಗಿ ಹೊಸ ಸಾಧ್ಯತೆಗಳಿಗೆ ಸಾಕ್ಷಿಯಾಗುತ್ತಿದ್ದಾಳೆ. 
        ಸ್ವರೂಪ ಸಂಸ್ಥೆಯ ನಿರ್ದೇಶಕ ಗೋಪಾಡ್ಕರ್ ಮಾತಿನಲ್ಲಿ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬಗ್ಗೆ ಬೇಸರವಿದೆ. ಅಗಾಧ ಸಂಪತ್ತಿರುವ ಮಕ್ಕಳು ತಮ್ಮ ಅಮೂಲ್ಯ ಕಲಿಕಾ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ. ಆ ಮೂಲಕ ತಮ್ಮ ಬದುಕಿನಿಂದಲೂ ವಂಚಿತರಾಗುತ್ತಿದ್ದಾರೆ. ಜಗತ್ತಿಗೆ ಶ್ರೇಷ್ಠ ವಾಗಬೇಕಾದ ಮಗುವೊಂದು ನಾಲ್ಕು ಗೋಡೆಯ ಮಧ್ಯೆ ತನ್ನನ್ನು ತಾನು ಕಳೆದುಕೊಳ್ಳುತ್ತಿದ್ದಾನೆ. ಕನಸುಗಳನ್ನು ತುಂಬಿಸಿಕೊಳ್ಳಲಾಗದ... ಪ್ರಕೃತಿಯ ಜೊತೆ ನಂಟನ್ನು ಬೆಳೆಸದ.... ಸ್ವ ಕಲಿಕೆಗೆ ತೆರೆಯಲು ಪ್ರಚೋದಿಸದ ವ್ಯವಸ್ಥೆಯೊಳಗೆ ಬದಲಾವಣೆ ತುರ್ತಾಗಿ ಆಗಬೇಕಾದ ಅವಶ್ಯಕತೆಯನ್ನು ಅನೇಕ ವರ್ಷಗಳಿಂದ ಹೇಳುತ್ತಿದ್ದಾರೆ. 
         ಶಾಲೆಯೆಂದರೆ ಸರ್ಟಿಫಿಕೇಟ್ ನೀಡುವ ಕಾರ್ಖಾನೆಯೆಂಬುದಾಗಿ ಎಲ್ಲರಲ್ಲೂ ಅಚ್ಚೊತ್ತಿದೆ. ಶಿಕ್ಷಣವನ್ನು ಬದುಕಿಗಾಗಿ ಕಲಿಸದೆ ಪರೀಕ್ಷೆಗಾಗಿ ಕಲಿಸುವ ರೂಢಿಯಾಗಿದೆ. ಲಲಿತಕಲೆಗಳನ್ನು ಬಿಟ್ಟು ವಿಷಯ ಮಾಹಿತಿಗಳನ್ನು ಮಾತ್ರ ತುಂಬಿಸುವ ಜವಾಬ್ದಾರಿಯೆಂದೆನಿಸಿಬಿಟ್ಟಿದೆ. ತನ್ನ ಸ್ವ ಇಚ್ಛೆಯನ್ನು ಬಿಟ್ಟು ಉರು ಹೊಡೆದು ಕಕ್ಕಬೇಕಾದ ಅನಿವಾರ್ಯತೆ ಮಕ್ಕಳನ್ನು ಕಾಡುತ್ತಿದೆ. 

        ಲಲಿತಕಲೆಗಳಲ್ಲಿ ಏನೂ ಕಣ್ಣಾಡಿಸದೆ ಮೆರಿಟ್ ಗಳಿಸಿದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಹೊಸತನ್ನು ಹುಡುಕಲಾಗದ, ಹೊಸತನ್ನು ಕಾಣದಾತನ ಕೈಗೆ ಸಿಕ್ಕ ಮಗು ಹೊಸತನ್ನು ಹೇಗೆ ತಾನೇ ಕಂಡೀತು. ಹೊತ್ತ ಮೂಟೆಯನ್ನು ಹಸ್ತಾಂತರಿಸುವ ನೆಪದಲ್ಲಿ ಮಕ್ಕಳು ಬಡವಾಗುತ್ತಿದ್ದಾರೆ. ಕಾಲ ಬದಲಾಗುತ್ತಿದೆ. ಹೊಸ ಬೆಳಕೊಂದು ಕಾಣುತ್ತಿದೆ. ಹೊಸ ಶಿಕ್ಷಣ ನೀತಿ ಮಕ್ಕಳ ಭವಿಷ್ಯವನ್ನು ರೂಪಿಸುವ ಆಶಾಕಿರಣವಾಗಲಿ. ಸ್ವರೂಪ ಶಿಕ್ಷಣ ಪದ್ಧತಿ ಮಾದರಿಯಾಗಲಿ. 

        ಆದಿ ಮಕ್ಕಳ ಜಗಲಿಯಲ್ಲಿಯೂ ಆದಿಯ ಚಿತ್ರ ಪತ್ರದ ಮೂಲಕ ಪರಿಚಿತರಾಗಿದ್ದರು. ಆದಿಯಂತಹ ಸಹಸ್ರ ಸಹಸ್ರ ಮಕ್ಕಳು ಸ್ಪೂರ್ತಿಯಾಗಿ ಮೇಲೆದ್ದು ಬರಲಿ. ಕಲಾ ಪ್ರಜ್ಞೆಯುಳ್ಳ , ಸೃಜನಶೀಲ ವ್ಯಕ್ತಿಗಳೇ ನಾಳಿನ ಸಮಾಜವನ್ನು ಕಟ್ಟುವವರಾಗಲಿ ಎನ್ನುವುದೇ ಮಕ್ಕಳ ಜಗಲಿಯ ಹಾರೈಕೆ.....
........................................ಕೈರಂಗಳ್

Ads on article

Advertise in articles 1

advertising articles 2

Advertise under the article