-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 2

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 2

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 2

ಜಗಲಿಯ ಮುದ್ದು ಮನಸ್ಸುಗಳಿಗೆ ಪ್ರೀತಿಯ ವಂದನೆಗಳು..
              ಆರೋಗ್ಯ ಜೋಪಾನ...! ಶಾಲೆಗೆ ತೆರಳದಿದ್ದರೂ ಕಲಿಕೆ ಸಾಗ್ತಾ ಇದೆ ಅಲ್ವಾ....? ಜೊತೆಗೆ ಜಗಲಿಯ ಗೆಳೆಯರ ಬಳಗನೂ ದೊಡ್ಡದಾಗ್ತಿದೆ. ಮೊದಲ ಪತ್ರಕ್ಕೆ ನಿಮ್ಮ ಉತ್ತರ ನಮ್ಮೆಲ್ಲರ ಮನ ಮುಟ್ಟಿತು.. ನಿಮ್ಮಂತಹ ತಿಳಿವಳಿಕೆ , ಕಾಳಜಿ ಇರುವ ಮಕ್ಕಳೇ ನಮ್ಮ ಆಸ್ತಿ..
         ಮೊನ್ನೆ ಏನಾಯ್ತು ಗೊತ್ತಾ....? ಪಕ್ಕದ ಮನೆಯಲ್ಲಿ ಏನೋ ಗಲಾಟೆ... ಪುಟಾಣಿ ಸ್ವರವೊಂದು ಬಹಳ ಜೋರಾಗಿಯೇ ಕೇಳ್ತಿತ್ತು.. ಇನ್ನೊಂದು ದನಿ ತುಂಬಾ ಬೇಸರವೇ ತುಂಬಿತ್ತು..! ಸ್ವಲ್ಪ ಸಮಯದ ಬಳಿಕ ವಾತಾವರಣ ತಿಳಿಯಾಯಿತು... ಯಾರ ಸದ್ದೂ ಇಲ್ಲ...!ಸಮಾಧಾನವಾಯಿತು.
         ‌‌‌‌ ಆದ್ರೆ ಮನೆಯ ಸಣ್ಣ ಜಗಲಿಯಲ್ಲಿ ಕುಳಿತಿದ್ದ ಅಜ್ಜಿ ಮಾತ್ರ ಒಂದೇ ಕಡೆ ದೃಷ್ಟಿ ನೆಟ್ಟಿದ್ದರು.. ಮೊದಲೇ ಸುಕ್ಕುಗಟ್ಟಿದ ಚರ್ಮ.. ಕಣ್ಣೀರು ಮುಖದ ನೆರಿಗೆಗಳ ತುಂಬೆಲ್ಲಾ ಹರಡಿಕೊಂಡಿತ್ತು... ಅಜ್ಜಿಯ ವೇದನೆ ಇತ್ತೀಚೆಗೆ ಮಾತ್ರ ನಿಯಂತ್ರಣ ತಪ್ಪಿತ್ತು..
     ...ನಿಮ್ಮ ಹಾಗೆಯೇ ಮಕ್ಕಳಿರುವ ಮನೆಯದು.!.. ಅಜ್ಜಿ ತನಗೆ ತಿಳಿದ ವಿಚಾರಗಳನ್ನು ವರ್ಣಿಸುತ್ತಿರುವಾಗ ಕುತೂಹಲದ ಕಿವಿಗಳಾಗುತ್ತಿದ್ದ ಮಕ್ಕಳು ...! ಇದ್ದಕ್ಕಿದ್ದ ಹಾಗೆ ಆ ಹಿರಿಯ ಜೀವವನ್ನು ಕಡೆಗಣಿಸುತ್ತಿದ್ದಾರೆ.....!ಬಾಗಿದ ಸೊಂಟದ ಮೇಲೆ ಕೈಯನ್ನಿಟ್ಟುಕೊಂಡೇ ಬಟ್ಟೆಯನ್ನು ತೊಳೆಯುತ್ತಿದ್ದರು.....!!
     ಅದೆಷ್ಟು ನೋವುಗಳು..!! ಪ್ರತಿಯೊಂದು ನಿಟ್ಟುಸಿರೂ ಒಂದೊಂದು ವೇದನೆಯ ಕಥೆಗಳೇ.... ಅಮ್ಮ ಕೂಡಾ ಮಕ್ಕಳನ್ನು ಕರೆದು ಸಾಕಾಗಿ ಕೊನೆಗೆ ಗೊಣಗಿಕೊಂಡೇ ಕಸವನ್ನು ಗುಡಿಸಿ ಮೂಲೆಗೆ ಸರಿಸಿದರು..!
       ಮಕ್ಕಳು ಯಾಕೆ ಹೀಗೆ ಹಿರಿಯರಿಂದ ದೂರವಾಗುತ್ತಿದ್ದಾರೆ.....?... ಆಲೋಚನೆಯಲ್ಲಿಯೇ ಕಳೆದುಹೋಗುತ್ತಿದ್ದೇನೆ....! ನಮ್ಮನ್ನು ಅದೆಷ್ಟು ಕಾಳಜಿಯಿಂದ ಕಾಪಾಡಿದ ಹಿರಿಯರವರು..!!. ಸಣ್ಣ ಪುಟ್ಟ ಸಹಾಯದ ಮೂಲಕ ಜವಾಬ್ದಾರಿಯನ್ನು ಅವರ ಜೊತೆ ಹಂಚಿಕೊಂಡಾಗ ಮುಂದಿನ ದಿನಗಳಲ್ಲಿ ನಮ್ಮ ಜೊತೆಗೆ ಇರುವಷ್ಟು ದಿನ ಆರೋಗ್ಯವಾಗಿದ್ದು ಮಾನಸಿಕ ಧೈರ್ಯವನ್ನು ತುಂಬುವರವರು..
      ನಾವು ಕರೆದಾಗಲೆಲ್ಲಾ ಸ್ಪಂದಿಸಲು ಪ್ರಯತ್ನಿಸುತ್ತಾರೆ.. ನಮಗೆ ಬೇಕಾದ ವಸ್ತುಗಳನ್ನೆಲ್ಲಾ ತಂದುಕೊಡ್ತಾರೆ... ನಾವು ಒಳ್ಳೆಯ ಕೆಲಸ ಮಾಡಿದಾಗಲೆಲ್ಲಾ ಪ್ರೀತಿಯಿಂದ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ.. ಮೆಚ್ಚುತ್ತಾರೆ...! ಎಷ್ಟು ಖುಷಿಯಾಗ್ತದೆ ಅಲ್ವಾ..!! ಆದರೆ ನಾವು ಹೆಚ್ಚಿನವರು ಯಾವಾಗಲಾದರೂ ಅಪ್ಪ -ಅಮ್ಮ ನಿಗೆ ಥ್ಯಾಂಕ್ ಯೂ ಅಂತಾ ಪ್ರೀತಿ ತುಂಬಿ ಹೇಳ್ತೇವಾ....?? ಅಮ್ಮಾ .. ನೀನು ಮಾಡಿದ ಅಡುಗೆ ತುಂಬಾ ರುಚಿಯಾಗಿದೆ...! ಅಪ್ಪಾ...ನೀನಂದ್ರೆ ನನ್ಗೆ ತುಂಬಾ‌ ಇಷ್ಟ ...ಅಂತಾ ಹೇಳೋದು ಕಡಿಮೆ... ಸಣ್ಣವರಿರುವಾಗ ಹೇಳ್ತೇವೆ...ದೊಡ್ಡವರಾಗ್ತಾ ಬಂದ ಹಾಗೆ.....? ದಿನವಿಡೀ ಕೆಲಸ ಮಾಡುವ ಅಪ್ಪ ಅಮ್ಮ ನಮ್ಮ ಸಣ್ಣ ಮೆಚ್ಚುಗೆಯನ್ನು ‌ನೆನಪಾದಾಗಲೆಲ್ಲಾ ಸಂಭ್ರಮಿಸಬಹುದು.......!
       ಅವಳು‌ ಅಳ್ತಾನೇ ಇದ್ದಳು..! ಬೆಳೆದಂತೆಲ್ಲಾ ಅಮ್ಮ‌ ಅಪ್ಪನ ಮಾತಿಗೆ ಎದುರು ಮಾತನಾಡಿ ಮನಸ್ಸನ್ನು ನೋಯಿಸಿದವಳು..! ಈಗ ಕ್ಷಮೆ‌ ಕೇಳಲು ಅಮ್ಮನೇ ಇಲ್ಲ.....!
      ಯಾವುದಾದರೂ ಅಷ್ಟೇ... ನಮ್ಮ ಹತ್ತಿರವಿರುವಾಗ ಅದರ ಬೆಲೆ ತಿಳಿಯೋದಿಲ್ಲ.... ಆಡಿದ ಒಂದು ಮಾತನ್ನೇ ಬಹಳ ದೊಡ್ಡದು ಮಾಡಿ ಸಿಟ್ಟಿನಿಂದ ಸಂಬಂಧಗಳನ್ನು ಹಾಳು ಮಾಡುತ್ತೇವೆ..ಮಾತು ಬಿಡುತ್ತೇವೆ...!! ಆದರೆ ಅಮ್ಮ‌, ಅಪ್ಪ , ಅಜ್ಜಿ, ಅಜ್ಜ.. ಹೀಗೆ ಮನೆಯಲ್ಲಿರುವ ಹಿರಿಯರೆಲ್ಲರೂ ಮತ್ತೆ ಅಷ್ಟೇ ಪ್ರೀತಿಯಿಂದ ನಮ್ಮೊಂದಿಗೆ ಬೆರೆಯುತ್ತಾರೆ..!
          ದೊಡ್ಡವರಿಗೆ ಗೌರವ, ಪ್ರೀತಿಯನ್ನು ಕೊಟ್ಟಷ್ಟೂ ನಾವೂ ಗೌರವಿಸಲ್ಪಡುತ್ತೇವೆ... ನಿಮಗೆ ಏನನ್ನಿಸ್ತದೆ......
            ಎಲೆ ಅಡಿಕೆಯನ್ನು ಬಾಯಿ ತುಂಬಾ ತುಂಬಿಸಿಕೊಂಡು ಅವರ ಕಥೆಯನ್ನೇ ಹೇಳಹೊರಟ ಅಜ್ಜಿ ಎಲ್ಲಿ ಹೋದ್ರು.....? ಜಡೆ ಹಾಕ್ತೇನೆ ಬಾ ಅಂತಾ ಕರೆದ ಅಮ್ಮನಿಗೆ ತಮಾಷೆ ಮಾಡಿದ್ದೆ..... ಅವರೂ ಕಾಣಿಸ್ತಿಲ್ಲ..!
          ಛೇ...!    ನಾನೂ ಮೊನ್ನೆ ಅಮ್ಮನಿಗೆ ಹಾಗೆ ಹೇಳಬಾರದಿತ್ತು..! ಅಪ್ಪ ಬೈದಾಗ ಅವರನ್ನೇ ಸಿಟ್ಟಿನಿಂದ ನೋಡಿದೆ...!   ಅಜ್ಜಿ ಕರೆದ್ರೂ ಕೇಳದ ಹಾಗೆ ಮಾಡಿದೆ.....! ಅವರ ಪ್ರೀತಿಯನ್ನು ಅರ್ಥವೇ ಮಾಡಿಕೊಳ್ಳಲಿಲ್ಲ..... ನಾನೀಗಲೇ ಅವರ ಬಳಿ ಹೋಗಬೇಕು...
        ನೀವೂ ಹೋಗಿ... ನಿಮ್ಮ ಅಪ್ಪ ಮತ್ತು‌ ಅಮ್ಮನನ್ನು ಅಪ್ಪಿ ಹಿಡಿದು ಸಿಹಿಮುತ್ತನ್ನು ನೀಡಿ...! ಅಜ್ಜಿಯ ಮಡಿಲಿನಲ್ಲಿ ತಲೆ ಇಟ್ಟು ಮಲಗಿ... ! ಅವರೂ ನಮ್ಮ ಪ್ರೀತಿಗೆ ಕಾಯ್ತಾ ಇದ್ದಾರೆ...! ಏನಾದರೂ ತಪ್ಪು ಮಾಡಿದ್ರೆ ಕ್ಷಮೆ ಕೇಳಿ...! ನಿಮ್ಮ ಗೆಳೆಯ ಗೆಳತಿಯರಿಗೂ ಈ ಪತ್ರವನ್ನು ತಲುಪಿಸಿ..! ನಿಮಗಾದ ಅನುಭವವನ್ನು ಜಗಲಿ ಬಳಗದಲ್ಲಿ ಹಂಚಿಕೊಳ್ಳಿ...
      ಅಲ್ಲಿಯವರೆಗೆ ಅಕ್ಕನ ನಮನಗಳು..
      ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ... ನಮ್ಮದೇ ಜಗಲಿಯಲ್ಲಿ....

........................................ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ, ಗೋಳಿತ್ತಟ್ಟು, 
ಪುತ್ತೂರು ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ

*************************************************

Ads on article

Advertise in articles 1

advertising articles 2

Advertise under the article