ರಕ್ಷಿತಾ : ಮೌನ ಹುಡುಗಿಯ ಚಿತ್ರದ ಮಾತುಗಳು
Saturday, February 27, 2021
Edit
ರಕ್ಷಿತಾ 6 ನೇ ತರಗತಿ
ಬಳ್ನಾಡು , ಕುರುಡಕಟ್ಟೆ
ಪುತ್ತೂರು ತಾಲೂಕು
ರಕ್ಷಿತಾ : ಮೌನ ಹುಡುಗಿಯ ಚಿತ್ರದ ಮಾತುಗಳು
ಸೃಷ್ಟಿಯಲ್ಲಿ ಅಸಮಾನತೆಗಳು ಸಹಜ. ಕಷ್ಟಕಾರ್ಪಣ್ಯಗಳನ್ನು ಮೆಟ್ಟಿಲುಗಳಾಗಿ ಪರಿವರ್ತಿಸಿ ತುತ್ತತುದಿಯನ್ನು ತಲುಪುವುದು ಅದು ಸಾಧನೆ. ವ್ಯಕ್ತಿಗತವಾದ ದೋಷಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಛಲದಿಂದ ಯಶಸ್ಸನ್ನು ಗಳಿಸುವುದು ಪರಿಶ್ರಮದ ಫಲ. ವೈಕಲ್ಯತೆ ಗಳ ನಡುವೆ ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ತನ್ನ ಪ್ರತಿಭೆಯನ್ನು ಬೆಳೆಸುವುದು ಸಾಹಸ ಮನೋಭಾವದಿಂದ ಮಾತ್ರ ಸಾಧ್ಯ. ಬೆಳೆಯುವ ಹಂತದಲ್ಲಿ ನ್ಯೂನ್ಯತೆಗಳನ್ನು ಬದಿಗೆ ಸರಿಸಿ ಗುರಿಯತ್ತ ಹೆಜ್ಜೆ ಹಾಕಿದರೆ ಬೆಳಗುತ್ತಾರೆನ್ನುವುದಕ್ಕೆ ಅನೇಕ ಸಾಹಸಿಗರ ಉದಾಹರಣೆಗಳು ದೊರಕುತ್ತವೆ. ಅಂತಹ ವಿಶಿಷ್ಟ ಅರಳುವ ಪ್ರತಿಭೆ ಪುತ್ತೂರಿನ ಗ್ರಾಮೀಣ ಭಾಗವಾದ ಕುರುಡ ಕಟ್ಟೆ , ಬಳ್ನಾಡುವಿನಲ್ಲಿದ್ದಾರೆ.
ರಕ್ಷಿತಾ ಇನ್ನೂ ಪುಟ್ಟ ಹುಡುಗಿ. ಆರನೇ ತರಗತಿ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ , ಬಂಟ್ವಾಳ ತಾಲೂಕಿನ ಕೃಷ್ಣಗಿರಿಯಲ್ಲಿ ಕಲಿಯುತ್ತಿದ್ದಾರೆ. ತಂದೆ ರಮೇಶ್ ಆಚಾರ್ಯ ತಾಯಿ ಪದ್ಮಜಾ ಆಚಾರ್ಯ. ಹುಟ್ಟಿನಿಂದಲೇ ಮಾತು ಆಡದೆ ಶ್ರವಣದ ತೊಂದರೆಯೊಂದಿಗೆ ಬೆಳೆದ ರಕ್ಷಿತಾ ಕಾಣುವಾಗ ಎಲ್ಲರಂತೆ ನಗುಮೊಗದ ಸುಂದರ ಹುಡುಗಿ. ಮಾತು ಮತ್ತು ಶ್ರವಣದ ದೋಷ ದೈಹಿಕವಾಗಿ ಅಂತರ್ಗತವಾಗಿದ್ದರೂ ಎಂದಿಗೂ ತನ್ನ ಸಾಧನೆಯ ಹಾದಿಯಲ್ಲಿ ತೊಡಕಾಗಲಿಲ್ಲ...!!
ತಾಯಿ ಪದ್ಮಜಾ ರಕ್ಷಿತಾಳ ಸಂಪೂರ್ಣ ಜವಾಬ್ದಾರಿ ಹೊತ್ತ ಮಾತೆ. ಮಗಳಿಗೆ ಮಾತು ಬರಬೇಕೆನ್ನುವ ದೃಷ್ಟಿಯಿಂದ ಪುತ್ತೂರಿನ ಮನಿಷಾ ರೋಟರಿ ಪೂರ್ವದಲ್ಲಿ ಸ್ಪೀಚ್ ಕ್ಲಾಸಿಗೆ ಸೇರಿಸಿದರು. ಆಗ ಮಗುವಿಗೆ ಎರಡು ವರ್ಷ ಎರಡು ತಿಂಗಳು . ಅಲ್ಲಿ ಶಶಿಕಲಾ ಟೀಚರ್ ಚಿತ್ರಕಲೆ ಮೂಲಕ ಪಾಠ ಹೇಳಿಕೊಡುವುದು ಈ ತರಗತಿಯ ವಿಶೇಷತೆ. ಕೇವಲ ಮಗುವಿಗೆ ಮಾತ್ರ ಅಲ್ಲ ತಾಯಿಯ ಮೂಲಕ ಶಿಕ್ಷಣ ನೀಡುವುದಾಗಿತ್ತು. ಶ್ರೀಮತಿ ಪದ್ಮಜಾ ತಮ್ಮ ಅಮೂಲ್ಯವಾದ ಸಮಯಗಳನ್ನು ಮಗಳಿಗಾಗಿ ಮೀಸಲಿಟ್ಟರು. ರಕ್ಷಿತಾಳ ಜೊತೆ ಹೆಗಲಾಗಿ ತಮ್ಮ ಕೈಲಾದ ಸೇವೆ ಮಾಡತೊಡಗಿದರು. ರಕ್ಷಿತಾಳ ಪ್ರತಿ ನಡೆಯಲ್ಲೂ ತಾನಿದ್ದು ಮಗಳ ಪ್ರತಿಭಾ ವಿಕಸನಕ್ಕೆ ಪ್ರಯತ್ನ ಪಟ್ಟರು.
ಚುರುಕು ಬುದ್ಧಿಯ ರಕ್ಷಿತಾಳಿಗೆ ಚಿತ್ರಕಲೆಯೆಂದರೆ ಪಂಚಪ್ರಾಣ. ಸ್ಪೀಚ್ ಕ್ಲಾಸಿನಿಂದ ಗೀಚುತ್ತಾ , ಬರೆಯುತ್ತಾ ಬೆಳೆದ ರಕ್ಷಿತಾಳಿಗೆ ಚಿತ್ರಕಲೆ ಬಹಳ ಪ್ರಿಯವೆನಿಸಿತು. ತಂದೆಯು ತಂದುಕೊಡುವ ಬಣ್ಣಗಳಿಂದ ಚಿತ್ರಕಲೆಯ ಅಭಿರುಚಿಯನ್ನು ಬೆಳೆಸಿಕೊಂಡ ಈಕೆ ಪುಸ್ತಕದಲ್ಲಿ, ಗೋಡೆಯಲ್ಲಿ ಚಿತ್ರ ರಚಿಸುತ್ತಿದ್ದಳು. ತಾಯಿಯ ಪ್ರೋತ್ಸಾಹವೂ ಸದಾ ಇರುತ್ತಿತ್ತು. ದೈಹಿಕ ದೋಷವನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮನೋಸಾಮರ್ಥ್ಯವನ್ನು ಬೆಳೆಸುವ ಕಾಯಕಕ್ಕೆ ಮುಂದಾದರು....!!
ರಕ್ಷಿತಾಳಿಗೆ..... ತನ್ನ ಪ್ರತಿಭೆಯ ಅನಾವರಣಕ್ಕೆ ತಾನು ಕಲಿಯುತ್ತಿರುವ ಸರಕಾರಿ ಶಾಲೆಯೂ ಪರೋಕ್ಷವಾಗಿ ಕಾರಣವಾಯಿತು. ಪುತ್ತೂರಿನ ಪರ್ಲಡ್ಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿತ್ಯ ಸಂತಸದ ಕಲಿಕೆ. ಒತ್ತಡಗಳಿಲ್ಲದೇ ನಿರಾಳವಾಗಿ ಸಂಭ್ರಮಿಸಬಹುದಾದ ಕಲಿಕೆಯ ಜೊತೆ ಚಿತ್ರಕಲೆಯ ಅಭಿವೃದ್ಧಿಗೆ ಪ್ರೋತ್ಸಾಹ ಸಿಕ್ಕಿತು. ಶಿಕ್ಷಕರ ಪ್ರೋತ್ಸಾಹದ ಮಾತುಗಳು , ಹಿರಿಯರ ಸಹಕಾರ , ಸಹಧ್ಯಾಯಿಗಳ ಚಪ್ಪಾಳೆ..... ರಕ್ಷಿತಾಳ ಚಿತ್ರ ಪಯಣಕ್ಕೆ ನಾಂದಿಯಾಯಿತು.
ರಕ್ಷಿತಾ ವಿಶೇಷವಾದ ಚಿತ್ರಕಲಾ ತರಗತಿಯಲ್ಲಿ ತರಬೇತಿ ಪಡೆದವರಲ್ಲ. ಶಾಲೆಯಲ್ಲಿಯೂ ಚಿತ್ರಕಲಾ ಅಧ್ಯಾಪಕರೇನೂ ಇಲ್ಲ... ಮೊಬೈಲ್ ನಲ್ಲಿ ಬರುವ ಚಿತ್ರಗಳು , ಬೇರೆಯವರು ಮಾಡಿದ ಚಿತ್ರಗಳನ್ನು ಅನುಸರಿಸಿ ಚಿತ್ರ ರಚಿಸುತ್ತಾಳೆ. ಇವಳಿಗೆ ಮನೆಯ ಗೋಡೆಯೇ ಕ್ಯಾನ್ವಾಸ್. ತನ್ನ ಮನೆಯ ಗೋಡೆಯಲ್ಲಿ ಪ್ರಕೃತಿಯ ಚಿತ್ರ , ಪ್ರಾಣಿ-ಪಕ್ಷಿಗಳ ಚಿತ್ರ , ಮನುಷ್ಯರ - ದೇವರ ಚಿತ್ರಗಳನ್ನು ರಚಿಸಿದ್ದಾಳೆ. ಅಕ್ರ್ಯಾಲಿಕ್ ಬಣ್ಣವನ್ನು ಬಳಸಿಕೊಂಡು ರಚಿಸಿರುವ ಈಕೆ ತನ್ನ ವಯಸ್ಸಿಗೂ ಮೀರಿದ ಕಲ್ಪನೆಯಲ್ಲಿ ಗೋಡೆ ಚಿತ್ರಗಳು ಎದ್ದುಕಾಣುತ್ತವೆ. ಚಿತ್ರಗಳೆಲ್ಲಾ ಮಗುವಿನ ಕಲ್ಪನೆ ಮೀರಿ ಬೆಳೆದಿದೆ. ತನ್ನ ಆಲೋಚನೆ ಕ್ರಮದಲ್ಲಿ ರೇಖೆಗಳು , ವಿನ್ಯಾಸಗಳು ನೈಜತೆಯಲ್ಲಿದೆ.
ಕೊರೋನ ಅವಧಿಯ ತಮ್ಮ ಬಿಡುವಿನ ವೇಳೆಯನ್ನು ಗೋಡೆಗಳನ್ನು ಅಲಂಕರಿಸುವ ಮೂಲಕ ಸದುಪಯೋಗಪಡಿಸಿಕೊಂಡಿದ್ದಾಳೆ. ಶಾಲೆಯಲ್ಲಿ ಪಾಠಗಳು ನಡೆಯುವ ಸಂದರ್ಭದಲ್ಲಿ ರಕ್ಷಿತಾ ಮಾತ್ರ ಚಿತ್ರದಲ್ಲಿ ಮಗ್ನರಾಗಿರುತ್ತಿದ್ದರು. ಕಾರಣ ಶ್ರವಣ ದೋಷದಿಂದಾಗಿ ಶಿಕ್ಷಕರು ಮಾಡುವ ಪಾಠ ಅವಳಿಗೆ ಕೇಳಿಸುತ್ತಿರಲಿಲ್ಲ. ತನ್ನ ಸಮಯವನ್ನು ಚಿತ್ರದ ಮೂಲಕ ಕಳೆಯುತ್ತಿದ್ದಳು , ಪುಸ್ತಕದ ಅಂಚಿನಲ್ಲಿ ತನ್ನ ಭಾವನೆಗೆ ತಕ್ಕ ಚಿತ್ರಗಳನ್ನು ರಚಿಸುತ್ತಿದ್ದಳು.
ರಕ್ಷಿತಾಳಿಗೆ ಪುತ್ತೂರಿನ ಪರ್ಲಡ್ಕ ಶಾಲೆಯ ವಾಣಿ ಟೀಚರ್ ಅಂದರೆ ತುಂಬಾ ಇಷ್ಟ. ಪ್ರೀತಿಯ ವಾಣಿ ಟೀಚರ್ ಅವರನ್ನು ನಿತ್ಯ ನೆನೆಯುವ ಈಕೆಗೆ ಅವರ ಪ್ರೀತಿಯೇ ತನ್ನ ಬೆಳವಣಿಗೆಗೆ ಕಾರಣ ಎನ್ನುತ್ತಾಳೆ. ದೂರವಾಣಿಯಲ್ಲಿ ಚಿತ್ರದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾ ಪ್ರೋತ್ಸಾಹಿಸುವ ಶಿಕ್ಷಕಿಯ ಮನೋಭಾವ ಪ್ರಶಂಸನೀಯ. ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಇದು ಮಹತ್ತರವಾಗಿದೆ.
ವಿಶೇಷ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡಿ ಅನ್ನೋದು ಎಲ್ಲರ ಧ್ವನಿ. ಈ ಮುಗ್ಧ ಹುಡುಗಿಗೂ ಬೇಕಾದದ್ದು ಅವಕಾಶ. ಪುತ್ತೂರಿನ ಭಾಗದಲ್ಲಿ ಚಿತ್ರಕಲೆಯನ್ನು ಕಲಿಸುವ ಮತ್ತು ಪ್ರೋತ್ಸಾಹಿಸುವ ಅವಕಾಶವಾದರೆ ಅದ್ಭುತ ಕಲಾವಿದೆಯಾಗುವ ಎಲ್ಲಾ ಲಕ್ಷಣಗಳಿವೆ. ಇನ್ನು ಮುಂದಿನ ತರಗತಿಯಲ್ಲಿ ಈಕೆಗೆ ಪ್ರೋತ್ಸಾಹದ ಚಿಲುಮೆ ಲಭ್ಯವಾಗಬೇಕಾಗಿದೆ. ಹೊಸ ಶಾಲೆ ಹೊಸ ಪರಿಸರದಲ್ಲಿ ಒಗ್ಗಿಕೊಳ್ಳಬೇಕಾಗಿ ಬಂದಾಗ ಹಿರಿಯರಾದ ಶಿಕ್ಷಕರು ಮತ್ತು ಸಾರ್ವಜನಿಕರು ಇಂತಹ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಮತ್ತು ಪ್ರೀತಿಯನ್ನು ತೋರಿಸುವ ಮೂಲಕ ಅವರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಬೇಕಾದ ಅಗತ್ಯತೆ ತುಂಬಾ ಇದೆ.
ಬಡತನದ ಸಂಸಾರದಲ್ಲಿ ಸಾಗುವ ಇವರ ಜೀವನದ ಉಯ್ಯಾಲೆಯನ್ನು ಪ್ರೀತಿಯಿಂದ ತೂಗುವ ಸಹಾಯದ ಹಸ್ತಗಳು ಬೇಕಾಗಿದೆ. ಅಭಿಮಾನದ ಬದುಕಿನಲ್ಲಿ ಸಾಗಬೇಕಾದ ಇಂಥ ಮಕ್ಕಳ ಭವಿಷ್ಯ ಸಾರ್ವಜನಿಕರೆಲ್ಲರ ಕೈಯಲ್ಲಿದೆ. ವಿಶಿಷ್ಟ ಪ್ರತಿಭೆಗಳನ್ನು ನೀರೆರೆದು ಪೋಷಿಸುವ ಮೂಲಕ ಮುಂದಿನ ಸಮಾಜಕ್ಕೆ ಅಮೂಲ್ಯ ಸಂಪನ್ಮೂಲಗಳನ್ನು ಕೊಟ್ಟ ಕೊಡುಗೆ ನಮ್ಮೆಲ್ಲರ ಪಾಲಿಗೆ ಒದಗಲಿದೆ. ರಕ್ಷಿತಾಳ ಭವಿಷ್ಯ ಉಜ್ವಲವಾಗಲಿ ಎನ್ನುವ ಮಕ್ಕಳ ಜಗಲಿಯ ಹಾರೈಕೆ ನಿತ್ಯ ಸದಾ ಇರುತ್ತದೆ.
ವಿಳಾಸ :
ರಕ್ಷಿತಾ
D/o ರಮೇಶ್ ಆಚಾರ್ಯ
ಬಳ್ನಾಡು ಮನೆ , ಕುರುಡ ಕಟ್ಟೆ
ಪುತ್ತೂರು ತಾಲೂಕು
Ph : 9901174365