
ಆದಿಯ ಚಿತ್ರ ಪತ್ರ - 45
Tuesday, January 19, 2021
Edit
ಆದಿ ಸ್ವರೂಪ
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು
ಆದಿಯ ಚಿತ್ರ ಪತ್ರ - 45
ಆದಿಯ ಚಿತ್ರ ಪತ್ರ - 45
ಕತೆ -1
"ಅಪ್ಪನನ್ನು ಕರಕೊಂಡು ಬಾ "
ಎಷ್ಟು ಸಲ ಹೇಳಿದ್ರೂ ನಿನಗೆ ಭಾಷೆಯೇ ಇಲ್ಲ. ಬೇರೆ ಮಕ್ಕಳಿಗೆ ಬೈಬಾರ್ದು.. ಹೊಡೆಯಬಾರದು, ಸಿಟ್ಟು ಮಾಡಿಕೊಳ್ಳಬಾರದು, ಜಗಳ ಆಡ ಬಾರದು ಅಂತ ಹೇಳಿದ್ದೆ. ಮಕ್ಕಳಿಗೆ ಹೊಡಿಯಲೇ ಬಾರದೆಂದು ನಿನಗೆ ಬಹಳ ಸಲ ಬುದ್ದಿ ಹೇಳಿದ್ದೆ . ಮಕ್ಕಳ ಜತೆ ಹೇಗೆ ಇರಬೇಕೆಂದು ನಿನಗಿನ್ನೂ ಬುದ್ದಿ ಬಂದಿಲ್ಲ. ಇನ್ನು ನನ್ನಿಂದಾಗಲ್ಲ. ಹೋಗು. ನೀನು ಮನೆಗೆ ಹೋಗಿ.. ಅಪ್ಪನನ್ನು ಕರಕೊಂಡು ಬಾ. ಈ ಅಪ್ಪಂದಿರು ಸರಿ ಇದ್ರೆ ಮಕ್ಕಳೂ ಸರಿ ಇರ್ತಾರೆ. ಬೇಗ ಹೋಗು.
ಈ ಶಿಕ್ಷಕರ ಸಮಸ್ಯೆ ಅರ್ಥ ಮಾಡಿಕೊಂಡ ಪ್ರಾಮಾಣಿಕ ಹುಡುಗ. ಮನೆಗೆ ಹೋಗಿ ಅಪ್ಪನನ್ನು ಕರಕೊಂಡೇ ಬಂದ. ಅಪ್ಪ ಬಂದ ಕೂಡಲೇ..!! ಗುರುಗಳು ಕುರ್ಚಿಯಿಂದ ಎದ್ದುಕುಳಿತು, ಗಡ ಗಡ ನಡುಗಿದರು. ವಿಷಯ ತಿಳಿದು ಸಿಟ್ಟುಗೊಂಡ ಅಪ್ಪ ಗುರುಗಳ ಕೆನ್ನೆಗೆ ಎರಡು ಬಾರಿಸಿದರು. ಪಾಪ... ಗುರುಗಳು ಅಪ್ಪನಲ್ಲಿ ಕ್ಷಮೆ ಕೇಳಿದರು. ಅಲ್ಲಿದ್ದ ಮಕ್ಕಳಿಗೆ ಇದು ಯಾಕಾಯ್ತು..... ಈ ಶಿಕ್ಷೆಯ ಮೂಲ ಸಮಸ್ಯೆ ಯಾರಿಂದ ಆಯಿತೆಂದು ಅರ್ಥ ಆಗದಿದ್ದರೂ ಭಯದೊಂದಿಗೆ ನಕ್ಕರು.ಅಪ್ಪ ಮನೆಗೆ ಹೊರಟು ಹೋದರು. ಅಯ್ಯೋ ಬೇಕೂಫಾ.. ನನ್ನ ಅಪ್ಪನನ್ನು ಕರಕೊಂಡು ಬರಲು ಹೇಳಿದ್ದಲ್ಲೋ ಮಾರಾಯಾ..!!!.
ಕತೆ -2
"ನಿನ್ನ ಅಪ್ಪನಿಗೆ ಹೇಳು. "
ಅಪ್ಪ ಮಗ ಇಬ್ಬರೂ ಜತೆಯಲ್ಲೇ ಕುಡಿದು ಟೈಟ್. ನೀನು ನನಗೆ ಹೊಡೆಯೋದು, ಬೈಯೋದು ಮಾಡಬಾರ್ದು.. ನೀನು ಅಯೋಗ್ಯ.. ನೀನು ಮೂರ್ಖ ಅಂತ ಅಪ್ಪನಿಗೆ ಬೈದ. ಅಪ್ಪನಿಗೆ ಸಿಟ್ಟು ಬಂತು.. ಮೂರ್ಖ ಅಯೋಗ್ಯ ಅಂತ ನನಗೆ ಹೇಳ್ತೀಯಾ...ನಿನ್ನ ಅಪ್ಪನಿಗೆ ಹೇಳು ಅಂದ.
ಕ್ಷಮಿಸಿ..... ಅಪ್ಪನ ಜೋಳಿಗೆಯ ಡೈರಿ ಯಿಂದ ಇಂತಹ ಚಿಕ್ಕ ಚಿಕ್ಕ ಕತೆಗಳು ರಾಶಿ ಇದೆ. ನಾನು ಅದನ್ನು ಹೆಕ್ಕಿ ಜಗಲಿಗೆ ಹಾಕಿದೆ. ಸ್ವಲ್ಪ ದಿನ ಮಧ್ಯೆ ಮಧ್ಯೆ ಇಂತಹದ್ದೇ ಕೊಡ್ತೇನೆ.
ಬೈಯದೆ, ಹೊಡೆಯದೆ, ಸ್ವಲ್ಪವೂ ನೋವು ಮಾಡದೆ ಇರುವ , ಮಕ್ಕಳನ್ನು ಬೆಳೆಸಲೆಂದೆ ಕನಸು ಕಾಣುತ್ತಿರುವ, ಸಂತ ಅಲೋಸಿಸ್ ಕಾಲೇಜಿನ ವಿಶ್ರಾಂತ ಉಪನ್ಯಾಸಕಿ... ಸ್ವರೂಪಕ್ಕೆ ಅಭಿಮಾನಿ - ವಿನ್ನಿ ಮೇಡಂ (ಫ್ಲೋರಿನಾ ) ರಿಗೆ ಈ ಪತ್ರ ಅರ್ಪಣೆ.
ಶುಭ್ರ ಮನಸ್ಸಿನ, ನಿಮ್ಮ ಮುಗ್ದ ನಗುವಿನ ಆ ಪ್ರೀತಿ ನನಗೂ ಹಂಚಲು ಕೊಡಿ.. ನಾ ಆ ಟೀಚರಾಗುವೆ.. ನಾನಿನ್ನೂ... ಆದಿ
ಆದಿ ಸ್ವರೂಪ
ಮಂಗಳೂರು