-->
ಆದಿಯ ಚಿತ್ರ ಪತ್ರ - 37

ಆದಿಯ ಚಿತ್ರ ಪತ್ರ - 37

    ಆದಿ ಸ್ವರೂಪ
    ಸ್ವರೂಪ ಅಧ್ಯಯನ ಸಂಸ್ಥೆ
    ಮಂಗಳೂರು

                     ಆದಿಯ ಚಿತ್ರ ಪತ್ರ - 37


  ಆದಿಯ ಚಿತ್ರ ಪತ್ರ - 37


        ಶ್... ಹಾಗೆ ಹೇಳಬೇಡಿ.

 ಮಗಾ.. ಅವರಿಗೆ ನಮಸ್ತೆ ಹೇಳು. ಮಗಳೆ ನಮಸ್ತೆ ಹೇಳು. ಸಣ್ಣ ಮಕ್ಕಳಿಗೆ ಹಾಗೆ ಹೇಳಬೇಡಿ.. ಎಂದೂ ಹೇಳಬೇಡಿ ಪ್ಲೀಸ್. ನಾವು ಮಾಡೋದನ್ನ ನೋಡುತ್ತಿರಲಿ. ನಾವು ಹೇಳುವುದು ಹೆಚ್ಚಾದಂತೆ ಬಹುತೇಕ ನಮಸ್ತೆ ಎಷ್ಟು ಒತ್ತಾಯಿಸಿದರೂ ಮಾಡಲ್ಲ. ಅಪ್ಪನ ಮುಂದೆ ಯಾರೇ ಮಗುವಿಗೆ -ಮಕ್ಕಳಿಗೆ ಹಾಗೆ ಹೇಳಿದ್ರೆ..ತಕ್ಷಣ ನಿಲ್ಲಿಸುತ್ತಾರೆ. ಹೇಳಲು ಬಿಡಲ್ಲ.

ನಾನು ಮೂರು ವರ್ಷದವಳಾಗಿದ್ದಾಗ ಅಮ್ಮನಿಗೂ ಸೂಚನೆ ಕೊಟ್ಟ ಕತೆ ಅಪ್ಪ ಹೇಳಿದ್ರು. "ಯಾಕೋ ಮಗಳು ವೇದಿಕೆಗೆ ಹೋಗ್ತಾ ಇಲ್ಲಾರೀ..
." ಶ್!!! ಹಾಗೆ ಹೇಳ್ಬೇಡ. ಅವಳಿಗಿನ್ನೂ ಮೂರು ವರ್ಷ ತುಂಬಿಲ್ಲ...ಅಂತ ಅಪ್ಪ-ಅಮ್ಮನಿಗೆ ಮೆಲ್ಲ ಕಿವಿಯಲ್ಲಿ ಹೇಳಿದ್ರಂತೆ. ಸುಮ್ಮನೆ ತಪ್ಪಿಯೂ ಯಾರಮುಂದೆಯೂ ಮಗಳು ಗುಂಪಲ್ಲಿ ಸೇರುವುದಿಲ್ಲ..ಅಂತ ಹೇಳಬೇಡ. ಅಂತಹ ವಿಷಯ ನೀನು ಮರೆತುಬಿಡು. ಎಲ್ಲಾ ತಪ್ಪನ್ನು ನಾವು ಕಾಣುವುದರಿಂದ ಅದು ತಪ್ಪು ಅಂತ ಅನಿಸಿದ್ದು..ಸರಿಯಲ್ಲ ಅಂತ ಅನಿಸಿದ್ದು..ತಪ್ಪು ಇನ್ನಷ್ಟು ಗಟ್ಟಿಯಾಗುತ್ತದೆ. ಅವಳು ಸುಮ್ಮನೆ ನೋಡುತ್ತಾ ಇರ್ಲಿ. ಅವಳೇನು ಮಾಡಬೇಕು ನಾವು ಅದನ್ನೇ ಮಾಡುವ.

ಎಷ್ಟು ಕಾಲಾರಿ.. ಯಾವಾಗ ವೇದಿಕೆಗೆ ಬರ್ತಾಳೋ..ಅಲ್ಲಿಯವರೆಗೆ.ಒಂದೆರಡು ತಿಂಗಳಲ್ಲಿ ಆದ ಬದಲಾವಣೆ ನೋಡಿದ ಅಪ್ಪ ಅಮ್ಮನಿಗೆ ಸುಸ್ತೋ ಸುಸ್ತು. ಕುಂಜತ್ತಬೈಲಿನ ಸ್ವರೂಪ ವಠಾರದಲ್ಲಿ,ನೂರಾರು ಮಕ್ಕಳು ನಿತ್ಯ ಸೇರಿ ಕಲಿಕೆಯ ಹಬ್ಬ ಆಚರಿಸುತ್ತಿದ್ದರು. ೭ ಮಕ್ಕಳು ಅಲ್ಲೇ ವಾಸ್ತವ್ಯ ಇದ್ದು, ಅವರೆಲ್ಲ ಒಂದು ವಿಷಯದ ಕುರಿತು ನಿತ್ಯ ಮಾತನಾಡಬೇಕು. ಅದನ್ನು ನಾನು ನೋಡುತ್ತಾ ಇದ್ದು, ಒಂದು ದಿನ ನಾನೂ ಆರಂಭಿಸಿದ್ದು..ಹೇಗೆಂದು ಅಮ್ಮ ಚೆನ್ನಾಗಿ ಡೈರಿ ಬರೆದಿದ್ದಾರೆ.
ಎಲ್ಲರೂ ಪತ್ರಿಕೆ ಮಾಡುತ್ತಿದ್ದರು. ನನ್ನ ಪತ್ರಿಕೆ ಹೆಸರು "ಮೈ ಬಿಗ್ ಡೇ. "ಎಲ್ಲರಿಗೂ ಆಶ್ಚರ್ಯ ಆ ಟೈಟಲ್ ನಾನೇ ಹಾಕಿಕೊಂಡದ್ದು ನೋಡಿ. ಆದರೆ ಒಂದು ಪುಟದಷ್ಟು ಚಿಕ್ಕದು. ಎರಡೂವರೆ ವರ್ಷದಲ್ಲೇ ನಾನು ದಿನಕ್ಕೆ 30 ಪುಟ ಬರೆಯುತ್ತಿದ್ದನಂತೆ. ಆದರೆ ಸ್ಪೆಲ್ಲಿಂಗ್ ಮಿಸ್ಟೇಕ್ ಬಹಳ ಇತ್ತಂತೆ. ಅದು ಏನಿಲ್ಲ ನನ್ನ ಜೊತೆಗಿದ್ದ ದೊಡ್ಡ ಮಕ್ಕಳು ಅಷ್ಟೇ ಬರೆಯುತ್ತಿದ್ದರಂತೆ.".ಅಮ್ಮ ಇವತ್ತು ನಾನು ಭಾಷಣ ಮಾಡುತ್ತೇನೆ'" ಅಂತ ಕೇಳಿಕೊಂಡು...ಅವರಿಗೆಲ್ಲ ಚಪ್ಪಾಳೆ ಕೊಡ್ತೀರಲ್ಲ... ಹಾಗೆ ನನಗೂ ಚಪ್ಪಾಳೆ ತುಂಬಾ ಕೊಡ್ತೀರಾ..? ಅಂತ ಕೇಳಿದ್ದಂತೆ.
 ಆ ದಿನ ಎಲ್ಲರೂ ಮಾತನಾಡುವ ಮೊದಲು ನನ್ನ ಭಾಷಣ. ನಾನು ರೆಡಿ ಮಾಡಿದ *ಮೈ ಬಿಗ್ ಡೇ* ಪತ್ರಿಕೆ ಬಗ್ಗೇನೆ ಒಂದು ಪುಟದ ಪತ್ರಿಕೆ ಯಾಗಿದ್ದರೂ.. ನಾನು ಮಾತನಾಡಿದ್ದು 9 ನಿಮಿಷ. ಅಪ್ಪ ಅಮ್ಮನಿಂದ.. ಪ್ರೇಕ್ಷಕರಿಂದ ರಾಶಿರಾಶಿ ಚಪ್ಪಾಳೆ ಸಿಕ್ಕಾಗ ನಾನು ಕುಣಿದದ್ದು..ನಾನು ಈಗ ಆ ವಿಡಿಯೋ ನೋಡಿದಾಗ ನನಗೆ ನಾಚಿಕೆ ಮತ್ತು ಖುಷಿಯಾಗುತ್ತದೆ. ಮರುದಿನದಿಂದಲೇ ಅಪ್ಪ-ಅಮ್ಮನಿಗೆ ನನ್ನಿಂದ ಕೀಟಲೆ ಆರಂಭವಾಯಿತು. ಶಿವಣ್ಣ, ಮಣಿಯಣ್ಣ... ನಾನು ಮೊದಲು ಮಾತನಾಡುತ್ತೇನೆ ಎಂದು..ಬೆಳಗ್ಗೆ ೬ ಗಂಟೆಗೇ... ಎಲ್ಲರನ್ನು ಕರೆದು ಭಾಷಣ. ವಿಷಯ *ಅಮ್ಮನ ದೋಸೆ* . ಮತ್ತೆ ರಾಶಿ ಚಪ್ಪಾಳೆ. ಮತ್ತೆ ಅದೇ ಕೆಲಸ. ಚಪ್ಪಾಳೆಗಾಗಿ ಯಾವ ಸಮಯ ಅಂತಲೂ ನೋಡದೆ, ಎಲ್ಲರನ್ನೂ ಎಳೆದುಕೊಂಡು ಬಂದು..ಕುಳಿತುಕೊಳ್ಳಿಸಿ..ಸ್ಟೇಜ್ ಮೇಲೆ ಹತ್ತಿ ಭಾಷಣ ಮಾಡುವುದು. ಮತ್ತೆ ಮತ್ತೆ ಯಾರನ್ನೂ,..ಯಾವ ಕೆಲಸವನ್ನೂ ಮಾಡಲು ಬಿಡದೆ...
ನನ್ನ ಭಾಷಣದಿಂದ ತಪ್ಪಿಸಿಕೊಳ್ಳಲು ಅಪ್ಪ-ಅಮ್ಮ ದಾರಿ ಹುಡುಕಿದ್ದಕ್ಕೆ...ಕೊನೆಗೆ ನಾನು ಭಾಷಣ ನಿಲ್ಲಿಸಿದ್ದೆನಂತೆ.. ಇಲ್ಲೇ ಅಪ್ಪ-ಅಮ್ಮನ ಅಧ್ಯಯನ ತಪ್ಪಾದದ್ದು. ಈಗ ಅಪ್ಪ-ಅಮ್ಮ ನಮ್ಮಿಂದ ತಪ್ಪಾಗಿದೆ ಅಂತ ಒಪ್ಪಿಕೊಳ್ಳುತ್ತಿದ್ದಾರೆ- ಹೌದಲ್ವಾ ...! ಅದು ಹಾಗೆ ಮುಂದುವರಿತಿದ್ದರೆ..ನಾನು ಈಗ ಎಲ್ಲಿಗೆ ತಲುಪುತ್ತಿದ್ದೆ..

ಈಗ ನಾನು ಅವೆಲ್ಲ ಮೇಕಪ್ ಮಾಡಿ ಹೊರಡುತ್ತಿದ್ದೇನೆ.
 ವೇದಿಕೆಗೆ ಮಕ್ಕಳು ತಾವಾಗಿಯೇ ಬರುವಂತೆ...ವೇದಿಕೆ ಮಾತ್ರ ಅಲ್ಲ.. ಎಲ್ಲ ಕಲಿಕೆಗೂ ಬರುವಂತೆ ಮಾಡಿದ ಕಥೆಗಳು ಅಪ್ಪನ ಜೋಳಿಗೆಯಲ್ಲಿ ಬಹಳ ಇದೆ. ಮೊನ್ನೆ ೩ನೇ ತಾರೀಖಿನಂದು ಸೆಮಿನಾರಿನಲ್ಲಿ ಹೇಳಿದ ತಮಾಷೆ ಸಣ್ಣದಾದರೂ ಗಂಭೀರವಾಗಿದೆ. ಒಂದು ಸಮಾರಂಭದಲ್ಲಿ ಪೋಷಕರು ನೂರಾರು ಮಂದಿ ಮಕ್ಕಳ ಸಮಸ್ಯೆ ಕುರಿತು ಪ್ರಶ್ನೆ ಕೇಳ್ತಾ ಇದ್ರಂತೆ. ಹಿಂದೆ ಕುಳಿತಿದ್ದ ಟೀಚರ್... ಇವಳು ನನ್ನ ಮಗಳು ಮೂರನೇ ತರಗತಿ..ಮುಂದೆ ಹೋಗುವುದಿಲ್ಲ ಎಷ್ಟು ಹೇಳಿದರು ವೇದಿಕೆಗೆ ಹೋಗುವುದಿಲ್ಲ. ಏನು ಮಾಡುವುದು.. ಹೇಳಿ ಸಾರ್ ಅಂದ್ರಂತೆ.. ಅಪ್ಪ ಅವರಿಗೆ ಪರಿಹಾರ ಏನು ಕೊಟ್ಟಿಲ್ಲವಂತೆ. ಮೇಡಂ ಅದೇನು ಇಲ್ಲ. ಮುಂದೆ ಮೂರು ಸಾಲು ಕುರ್ಚಿ ಖಾಲಿ ಇದೆ... ಆ ಮಗಳು ಮತ್ತು ನೀವು ಮುಂದೆ ಬಂದು ಕುಳಿತುಕೊಳ್ಳಿ..
 ಯಾಕೆ ಕರೆದದ್ದು ಅಂತ ಅವರಿಗೆ ಅರ್ಥ ಆಯ್ತೋ ಇಲ್ಲವೋ.. ಆದರೆ ಅಲ್ಲೇ ಇದ್ದ ಬಹಳ ಮಂದಿಗೆ ಅರ್ಥ ಆಗಿ ಮುಸಿ ಮುಸಿ ನಗುತ್ತಾ..ನಿಧಾನವಾಗಿ ಮುಂದಿನ ಖಾಲಿ ಕುರ್ಚಿ ಗಳಿಗೆಲ್ಲ ತಾಯಿ-ತಂದೆ ಮಕ್ಕಳೊಂದಿಗೆ ಭರ್ತಿ ಮಾಡಿದರಂತೆ.
ಆ ಮಕ್ಕಳು ಮುಂದೆ... ಮುಂದೆ ಮುಂದೆ ಹೋಗಿರಬಹುದು.
ಅಪ್ಪ ನನ್ನನ್ನು ಸೆಮಿನಾರಿಗೆ ೬-೭ ವರ್ಷ ಪ್ರಾಯದಿಂದಲೇ ನೂರಾರು ಕಡೆ ಕರೆದುಕೊಂಡು ಹೋಗಿದ್ದಾರೆ. ನಾನಲ್ಲಿ ಮಿಮಿಕ್ರಿ,ಹಾಡು ಹೇಳಿ ನೆನಪಿನ ಪ್ರದರ್ಶನ ಮಾಡಿ ರಂಜಿಸ್ತಿದ್ದೆ. ಅಲ್ಲಿ ಚಿತ್ರ ಮಾಡ್ತಾ ಕುಳಿತುಕೊಳ್ಳುತ್ತಿದ್ದೆ. ಅಪ್ಪನ ಮಾತು ಕೇಳುತ್ತಿತ್ತು.. ಆದರೆ ತೆಗೆದುಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ಸೆಮಿನಾರ್ ಸಂಖ್ಯೆ ಕಡಿಮೆ ಇದೆ. ಆದರೂ ಒಂದೆರಡು ಸೆಮಿನಾರ್ ಪೂರ್ತಿ ಕೇಳಿದೆ. ನನ್ನನ್ನೇ ನಾನು ಆ ಕ್ಷಣ ಮರೆತು ಬಿಡುತ್ತೇನೆ. ಅಪ್ಪ ಅಲ್ಲಿ ನಗಿಸುತ್ತಾರೆ,ಅಳಿಸುತ್ತಾರೆ, ಕೆರಳಿಸುತ್ತಾರೆ. ನಾನೀಗ ಪ್ರೇಕ್ಷಕರನ್ನು ಗಮನಿಸುತ್ತಾ ನನ್ನನ್ನೂ ಕಾಣಲಾರಂಭಿಸಿದೆ. ಕಳಕೊಂಡದ್ದನ್ನು ಮತ್ತೆ ಪಡ ಕೊಳ್ಳಲೇಬೇಕು.
 ಅಪ್ಪ ಎಂದೂ ಸೆಮಿನಾರ್ ಮಾತು ಕೇಳು ಅಂತ ಒತ್ತಾಯಿಸಿಲ್ಲ. ಇದೀಗ.. ಅಪ್ಪ ಬೇಗ ಇನ್ನೊಂದು ಸೆಮಿನಾರ್ ಮಾಡು ಅಂತ ನಾನೇ ಒತ್ತಾಯಿಸಿದ್ದೇನೆ. ಸೆಮಿನಾರು ಅದು ಅದ್ಭುತ. ಆದರೆ ಸೇರುವವರ ಸಂಖ್ಯೆ ಕಡಿಮೆ ಇದೆ.
ಇದು ಏನು ಅಂತ ಗೊತ್ತಾಗದೆ ಯಾರೂ ಬರುವುದಿಲ್ಲ... ಬಾರದೆ ಗೊತ್ತಾಗುವುದಿಲ್ಲ.

ಏನು ಮಾಡುವುದು ಮಗಳೇ...!! ಅಂತ ಅಪ್ಪ ಕೇಳ್ತಾರೆ.. ಎಲ್ಲರನ್ನೂ ಕಿಡ್ನಾಪ್ ಮಾಡಿ, ಸೆಮಿನಾರ್ ಮಾಡಿ.. ಚೆನ್ನಾಗಿ ಊಟ ಕೊಟ್ಟು ಬಂದದ್ದಕ್ಕೆ ಬಾರಿ ಸಂಬಳವೂ ಕೊಟ್ಟುಬಿಡು... ಅಂತ ನಾನು ಹೇಳಿದೆ... ನಗ್ತಾರೆ.. ನಗ್ತಾನೇ ಇದ್ದಾರೆ...

 ಒಮ್ಮೆ ನಿಮ್ಮನ್ನೇ ನೀವು ಕಾಣಲು ಬನ್ನಿ. ನಿಮ್ಮ ಕಾಣಲು ಕಾದಿರುವೆ..ನನ್ನ ನಾ ಕಾಣಲು...ನಾ ..ಆದಿ.

ಈ ಪತ್ರ ನನ್ನ ಅಕ್ಕಾ..
ಕಲಾವಿದೆ, ಸಾಹಿತಿ, ಕವಯಿತ್ರಿ.
ಡಾ. ಶಿಲ್ಪಾ ರಿಗೆ.

ಆದಿ ಸ್ವರೂಪ
ಮಂಗಳೂರು

Ads on article

Advertise in articles 1

advertising articles 2

Advertise under the article