-->
ಚಿತ್ರಕಲಾಸಕ್ತಿಯ ಬಾಲಕಿ - ವರ್ಣಿತಾ ಕಾಮತ್

ಚಿತ್ರಕಲಾಸಕ್ತಿಯ ಬಾಲಕಿ - ವರ್ಣಿತಾ ಕಾಮತ್

   ವರ್ಣಿತಾ ಕಾಮತ್
    8ನೇ ತರಗತಿ
    ಪಲಿಮಾರು

ಚಿತ್ರಕಲಾಸಕ್ತಿಯ ಬಾಲಕಿ - ವರ್ಣಿತಾ ಕಾಮತ್
       
        ಅಂತರ್ಗತವಾಗಿರುವ ಪ್ರತಿಭೆಗಳು ಅವಕಾಶಗಳಿಗಾಗಿ ಹುಡುಕಾಟದಲ್ಲಿರುತ್ತದೆ. ಕೆಲವೊಂದು ಸನ್ನಿವೇಶಗಳು ಅಂತಹ ಅವಕಾಶಗಳಿಗೆ ಎಡೆಮಾಡಿಕೊಡುತ್ತದೆ. ಕೊರೋನ ಮಹಾಮಾರಿಯಾಗಿ ವಿಶ್ವದೆಲ್ಲೆಡೆ ಸಂದಿಗ್ಧತೆಯನ್ನು ನಿರ್ಮಿಸಿದರೂ ಸಾಧಕರಿಗೆ ಯಾವ ಬಾಧೆಯನ್ನೂ ನೀಡಿಲ್ಲ. ಸೃಜನಶೀಲರ ಪರ್ಯಾಯ ಶೋಧನೆಗೆ ವಿಶೇಷ ಕಾಲವನ್ನೇ ನಿರ್ಮಿಸಿಕೊಟ್ಟಿದೆ. ಶಾಲಾವಧಿಯಲ್ಲಿ ನಿತ್ಯ ಓದು ಬರಹದಲ್ಲಿ ಸಮಯ ಕಳೆಯುತ್ತಿದ್ದ ಅನೇಕ ಮಕ್ಕಳು ತಮ್ಮ ಅಭಿರುಚಿಯ ಕ್ಷೇತ್ರಗಳಲ್ಲಿ ಕಣ್ಣಾಡಿಸುವಂತೆ ಮಾಡಿದೆ. ಅಂತಹ ಮಕ್ಕಳಲ್ಲಿ ಪಲಿಮಾರಿನ ವರ್ಣಿತಾಳ ಕಥೆ ವಿಶಿಷ್ಟ ವೆನಿಸುತ್ತದೆ. 
       ವರ್ಣಿತಾ ಕಾಮತ್ ಉಡುಪಿಯ ಮುದರಂಗಡಿ ಸೈಂಟ್ ಫ್ರಾನ್ಸಿಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿನಿ.  ಖ್ಯಾತ ಕಲಾವಿದ ವೆಂಕಟ್ರಮಣ ಕಾಮತ್ (ವೆಂಕಿ ಪಲಿಮಾರು) ಮತ್ತು ವೈಷ್ಣವಿ ಕಾಮತ್ ಅವರ ಪುತ್ರಿ. ಬಾಲ್ಯದಿಂದಲೇ ಅಪ್ಪನ ಕಲಾ ಸಲುಗೆಯಲ್ಲಿಯೇ ಬೆಳೆದವಳು. ನೆಲ - ಗೋಡೆ ಸಿಕ್ಕಸಿಕ್ಕಲ್ಲಿ ಬಣ್ಣದ ಕಡ್ಡಿಯಲ್ಲಿ ಗೀಚಿ ಬಾಲ್ಯವನ್ನು ಕಳೆದವಳು. ಅಪ್ಪನ ಕಲಾಕೃತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ತನ್ನೊಳಗೆ ಆಸಕ್ತಿಯನ್ನು ಹೆಚ್ಚಿಸಿಕೊಂಡಿದ್ದಳು. ಆದರೆ ಶಾಲಾ ಪಠ್ಯ ಚಟುವಟಿಕೆಗಳ ಒತ್ತಡಗಳ ನಡುವೆ ವಿಶೇಷವಾಗಿ ಚಿತ್ರದತ್ತ ಗಮನ ಕೊಡಲಾಗದೆ ಸಮಯ ಸಿಕ್ಕಾಗ ಚಿತ್ರ ಮಾಡುವುದು ರೂಢಿಯಾಗಿತ್ತು. 
      ಕೊರೋನಾ ಮಹಾಮಾರಿಯಾಗಿ ದೇಶವ್ಯಾಪಿ ಯಾದಾಗ ಹೇರಿದ ಲಾಕ್ ಡೌನ್ ವರ್ಣಿತಾಳ ಪಾಲಿಗೆ ಕಲಾ ವಲಯದ ಲಾಕ್ ಡೌನ್ ತೆರೆದಂತಾಯಿತು. ಚಿತ್ರ ಬರೆಯಲು ಶುರುಮಾಡಿದ ಈಕೆ ಕೋವಿಡ್ ಸಂಬಂಧಿಸಿದ ಸರಣಿ ಚಿತ್ರಗಳನ್ನು ಆರಂಭಿಸಿದಳು. ತನ್ನ ಅಂತ: ಸತ್ವದಲ್ಲಿ ಅಡಗಿದ್ದ ಕಲಾ ತಂತ್ರಗಳು ಅನುಷ್ಠಾನಗೊಳ್ಳಲಾರಂಭಿಸಿತು. ನಿರಂತರ ಅಭ್ಯಾಸ ತನ್ನೊಳಗಿದ್ದ ಕಲಾವಿದನೊಬ್ಬನ ಎಚ್ಚರಿಸಿದ ಅನುಭವ ವರ್ಣಿತಾಳಿಗೆ ಸಿಕ್ಕಿತು.
        ತನ್ನ ಸೀಮಿತ ಅಭ್ಯಾಸದೊಳಗೆ ಅನೇಕ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ತಾಲೂಕು , ಜಿಲ್ಲೆ , ರಾಜ್ಯಮಟ್ಟದವರೆಗಿನ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಕೃತಿಗಳನ್ನು ರಚಿಸಿ ಪ್ರಶಂಸೆಗೆ ಪಾತ್ರವಾಗಿದ್ದಾಳೆ. ಕಲಾಕೃತಿಯಲ್ಲೂ ಅಭ್ಯಾಸ ಮಾಡುತ್ತಿರು ವರ್ಣಿತಾ ಪ್ರತಿಭಾಕಾರಂಜಿಯಲ್ಲಿ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಳು.
        ಇತ್ತೀಚೆಗೆ ಪರಿಸರ ಸ್ನೇಹಿ ಗಣಪನನ್ನು ರಚಿಸುವ ಮೂಲಕ ಸುದ್ದಿಯಾಗಿದ್ದಳು. ಶಾಲಾ ಕಲಿಕೆಯಲ್ಲೂ ಮುಂದಿರುವ ಈಕೆಗೆ ಕಾರ್ಯಕ್ರಮ ನಿರೂಪಣೆಯಲ್ಲಿ ತುಂಬಾ ಆಸಕ್ತಿ. ಕ್ರಾಫ್ಟ್ , ಬಾಟಲ್ ಪೈಂಟಿಂಗ್ , ಕಾರ್ಟೂನ್ , ಬೋನ್ಸಾಯಿ ಸಂಗೀತ , ನೃತ್ಯಗಳಲ್ಲೂ ಸೈ ಎನಿಸಿಕೊಂಡಿದ್ದಾಳೆ. 
       ಪಲಿಮಾರಿನ ತನ್ನ ಮನೆಯೇ ಈಕೆಗೆ ಸ್ಫೂರ್ತಿ. ತಂದೆ ಕಲಾವಿದ ವೆಂಕಿ ಪಲಿಮಾರ್ ನಿರ್ಮಿಸಿದ ಕಲಾಕೃತಿಗಳ ಚಿತ್ರಾಲಯ ನೋಡುಗರಿಗೂ ಆಕರ್ಷಣೀಯವಾಗಿದೆ. ಕಲಾರಸಿಕರು , ಪ್ರವಾಸಿಗರು ಬಂದು ನೋಡುವಷ್ಟರ ಮಟ್ಟಿಗೆ ಉಡುಪಿಯ ಅತ್ಯುತ್ತಮ ಗ್ಯಾಲರಿಯಾಗಿ ಗುರುತಿಸಿಕೊಂಡಿದೆ. ಕಲಾ ವಲಯ ಹೀಗೆ ಬೆಳೆಯುತ್ತಾ ಮಕ್ಕಳೂ ಬೆಳೆಯುವಂತಾಗಲಿ ಎಂಬುದೇ ಮಕ್ಕಳ ಜಗಲಿಯ ಹಾರೈಕೆಗಳು

Ads on article

Advertise in articles 1

advertising articles 2

Advertise under the article