-->
ಬಾಲ ಚಿತ್ರಕಲಾವಿದ - ಅಖಿಲ್ ಶರ್ಮ

ಬಾಲ ಚಿತ್ರಕಲಾವಿದ - ಅಖಿಲ್ ಶರ್ಮ

            ಬಾಲ ಚಿತ್ರಕಲಾವಿದ - ಅಖಿಲ್ ಶರ್ಮ

        ಚಿತ್ರಕಲೆಗೆ ತನ್ನದೇ ಆದ ವೈಶಿಷ್ಟ್ಯವಿದೆ. ಈ ಕ್ಷೇತ್ರ ಚಿತ್ರಕಲಾ ಸ್ವಾದನೆ ಬಯಸುವ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ. ಆದರೆ ತನ್ನೊಳಗೆ ಮಿಳಿತವಾಗುವ ಕೆಲವೇ ಕೆಲವರನ್ನು ಆಯ್ದುಕೊಳ್ಳುತ್ತದೆ. ಇದು ಅಕ್ಷರಶಃ ಸತ್ಯ. ವೃತ್ತಿಯಲ್ಲಿ ಉಪನ್ಯಾಸಕಿಯಾಗಿ ಪ್ರವೃತ್ತಿಯಲ್ಲಿ ಚಿತ್ರಕಲೆಯನ್ನು ಆಯ್ದುಕೊಂಡಿರುವ ಮಂಗಳೂರಿನ ಜಯಶ್ರೀ ಶರ್ಮಾ ಅವರ ಕರುಳಬಳ್ಳಿಯ ಕಥೆಯಿದು. 
      ಅಖಿಲ್ ಶರ್ಮ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕ. ತಂದೆ ಮನೋಹರ ಶರ್ಮ, ತಾಯಿ ಚಿತ್ರಕಲಾವಿದೆ ಜಯಶ್ರೀ ಶರ್ಮ. ಜಯಶ್ರೀ ಶರ್ಮಾ ಅವರ ಪ್ರಭಾವದಲ್ಲಿ ಅಖಿಲ್ ಶರ್ಮ ಚಿತ್ರಕಲಾ ಲೋಕಕ್ಕೆ ಕಾಲಿರಿಸಿದ್ದಾನೆ. ಅಖಿಲ ಶರ್ಮನಿಗೆ ಬಾಲ್ಯದಿಂದಲೇ ಚಿತ್ರಕಲೆ ಎಂದರೆ ಪಂಚಪ್ರಾಣ. ಅಪ್ಪ ತಂದುಕೊಡುತ್ತಿದ್ದ ಕ್ರೆಯಾನ್ಸ್ ಕಲರ್ ನಲ್ಲಿ ಪುಸ್ತಕ ತುಂಬಾ ಗೀಚುತ್ತಿದ್ದ. ಊಟವನ್ನು ಬದಿಗೊತ್ತಿ ಬಣ್ಣಗಳಲ್ಲೇ ಕಾಲ ಕಳೆಯುತ್ತಿದ್ದ. ಅಪ್ಪ ಅಮ್ಮನ ಮುದ್ದಿನ ಪ್ರೋತ್ಸಾಹದಿಂದ ಚಿತ್ರಕಲೆ ತಾನಾಗಿಯೇ ಅಖಿಲನ ಕೈಗಂಟಿ ಕೊಂಡಿತು. 
        ಯು.ಕೆ.ಜಿ. ಯಲ್ಲಿ ಕಲಿಯುತ್ತಿರುವ ಸಂದರ್ಭದಲ್ಲಿ ಅದೇಕೋ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವ ಇಂಗಿತವನ್ನು ಮುಂದಿಟ್ಟ. ಗಣೇಶೋತ್ಸವ ಹಬ್ಬದ ಸಮಯ ಮಂಗಳೂರಲ್ಲಿ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಅಖಿಲ್ ಶರ್ಮ ಭಾಗವಹಿಸಿಯೇ ಬಿಟ್ಟ. ಫಲಿತಾಂಶ ಘೋಷಣೆಯಾದಾಗ ಪ್ರಥಮ ಬಹುಮಾನ; ಖುಷಿಯೋ ಖುಷಿ. ಅಂದು ಮುಂದಡಿಯಿಟ್ಟ ಅಖಿಲ್ ಶರ್ಮ ಹಿಂತಿರುಗಿ ನೋಡಲೇ ಇಲ್ಲ. ಪ್ರತಿಯೊಂದು ಸ್ಪರ್ಧೆಗಳಲ್ಲಿ ಭಾಗವಹಿಸುವುದು, ಬಹುಮಾನ ಗಳಿಸುವುದು ರೂಢಿಯಾಯಿತು.
          ತನ್ನ ಸಣ್ಣ ಹರೆಯದಲ್ಲೇ ರಾಜ್ಯಮಟ್ಟದ ಕಲಾಜ್ಯೋತಿ ಪ್ರಶಸ್ತಿ ಮತ್ತು ಕಲಾ ರತ್ನ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ. ಈಗಾಗಲೇ ಸುಮಾರು 250 ಸ್ಪರ್ಧೆಗಳಲ್ಲಿ ಭಾಗವಹಿಸಿ ಇನ್ನೂರರಷ್ಟು ಬಹುಮಾನಗಳನ್ನು ಪಡೆದು ಅದ್ಭುತ ಸಾಧಕನಾಗಿದ್ದಾನೆ.
          2020ರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಇದರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನಿಗನಾಗಿದ್ದಾನೆ. ಕೊರೋನಾದ ಸಂಧಿಗ್ಧತೆಯಲ್ಲಿ ನಡೆಸಲಾದ ರಾಷ್ಟ್ರಮಟ್ಟದ  ನಡೆಸಲಾದ ರಾಷ್ಟ್ರಮಟ್ಟದ ಅಂತರ್ಜಾಲ ಚಿತ್ರಕಲಾ ಸ್ಪರ್ಧೆಗಳಲ್ಲಿಯು ಅಖಿಲ್ ದೊಡ್ಡ ಸಾಧನೆಯನ್ನೇ ಮಾಡಿದ. ಕಲರ್ ಪೆನ್ಸಿಲ್ ನಲ್ಲಿ ರಚಿಸಿದ ಕಲ್ಲಂಗಡಿ ಹಣ್ಣಿನ ಸುಂದರ ಚಿತ್ರಕ್ಕೆ ಮತ್ತು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವ  ಜಲವರ್ಣ ಭಾವಚಿತ್ರಕ್ಕೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವುದು ಕರಾವಳಿಯ ನಾಡಿಗೆ ಹೆಮ್ಮೆಯ ಸಂಗತಿ. ಇತ್ತೀಚೆಗೆ ಚಿತ್ರಕಲಾ ಶಿಕ್ಷಕರ ಸಂಘದಿಂದ ಏರ್ಪಡಿಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಈತನ ನಿರಂತರ ಪರಿಶ್ರಮ , ಶ್ರದ್ಧೆ , ಆಸಕ್ತಿಗೆ ಸಂದ ವಿಜಯ ಎಂದರೆ ತಪ್ಪಾಗಲಾರದು. 
       ಮಂಗಳೂರಿನ ಕೆನರಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಏಳನೆಯ ತರಗತಿಯಲ್ಲಿ ಕಲಿಯುತ್ತಿರುವ ಅಖಿಲ್ ಕಲಿಕೆಯಲ್ಲೂ ಮುಂದಿದ್ದಾನೆ. ಕ್ರಾಫ್ಟ್ , ಕಾರ್ಡ್ ಮ್ಯಾಜಿಕ್ , ಸಂಗೀತ ಉಪಕರಣಗಳನ್ನು ನುಡಿಸುವುದರಲ್ಲೂ ತನ್ನ ಪ್ರತಿಭೆಯನ್ನು ತೋರುತ್ತಿದ್ದಾನೆ. 
        ಅಖಿಲ್ ನನ್ನು ಗುರುತಿಸುವ ಕಣ್ಣುಗಳು , ಚಪ್ಪಾಳೆ ತಟ್ಟುವ ಕೈಗಳು ಹೆಚ್ಚಾದಾಗ ಮುಂದೊಂದು ದಿನ ನಮ್ಮ ನಾಡಿಗೆ ಗುರುತಿಸುವ ಕಲಾವಿದನಾಗಿ ಹೊರಹೊಮ್ಮುವ ಎಲ್ಲಾ ಶಕ್ತಿ ಅಖಿಲ್ ನಲ್ಲಿದೆ. ಅಖಿಲ್ ಶರ್ಮ ಇದೇ ಹಾದಿಯನ್ನು ಮುಂದುವರಿಸಿ ಸಾಗಲಿ ; ಸಾಗುವ ದಾರಿಗೆ ಶುಭಹಾರೈಸುವ ಮಕ್ಕಳ ಜಗಲಿ...

Ads on article

Advertise in articles 1

advertising articles 2

Advertise under the article