ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 147
Tuesday, November 3, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 147
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.. ಮನೆಯಲ್ಲಿ ಓದಿದ ನಂತರ ಕೆಲಸದ ಬದಲಾವಣೆಗಾಗಿ ಆಟ ಆಡಲು ಹೊರಡುತ್ತೀರಿ. ಹಾಗೆಯೇ ಹಾದಿ ಬದಿಯಲ್ಲಿರುವ ಗೂಡಂಗಡಿಯಲ್ಲಿ ಚಾಕಲೇಟನ್ನೋ ಪೆಪ್ಪರಮಿಂಟನ್ನು (sugar candy) ತೆಗೆದುಕೊಳ್ಳುತ್ತೀರಿ. ಅದರ ಇಂಗಾಲದ ಹೆಜ್ಜೆ ಗುರುತಿಗಾಗಿ ಹುಡುಕುತ್ತೀರಿ. ಒಂದು ಕಿಲೋಗ್ರಾಂ ಇಂತಹ ಚಾಕಲೇಟ್ ನ ತಯಾರಿಕೆಯಲ್ಲಿ 0.55 ರಿಂದ 1.8 kg ಇಂಗಾಲದ ಡೈಆಕ್ಸೈಡ್ ಗೆ ಸಮ. ಇಷ್ಟು ದೊಡ್ಡ ಪ್ರಮಾಣವನ್ನು ಎಲ್ಲಿಂದ ಲೆಕ್ಕ ಹಾಕಿದಿರಿ ಎಂದರೆ? ಕಬ್ಬು ಬೆಳೆಯಲು ಬಳಸಿದ ರಸಗೊಬ್ಬರ, ಕಬ್ಬಿಗೆ ನೀರು ಹಾಯಿಸಿದ್ದು, ಕಬ್ಬಿನ ಸಾಗಾಟ, ಅದನ್ನು ಅರೆಯುವುದು, ಕಾಯಿಸುವುದು, ಕ್ಯಾಂಡಿ ತಯಾರಿಕೆಗೆ ಕಾಯಿಸುವಿಕೆ, ಸಾಗಾಟ ಹೀಗೆ. ಈ ಪೆಪ್ಪರಮಿಂಟ್ ಬೇಡ ಚಾಕಲೇಟ್ ತಿನ್ನೋಣ ಅಂದುಕೊಂಡು ನೀವು ಕರಿ ಚಾಕಲೇಟ್ (dark chocolat ತಗೆದುಕೊಂಡರೆ ನಿಮ್ಮ ಮಿತ್ರರು ಹಾಲಿನ ಚಾಕಲೇಟ್ (milk chocolate) ತೆಗೆದುಕೊಂಡರು ಅಂದುಕೊಳ್ಳೋಣ. ಚಾಕಲೇಟ್ ನ ಇಂಗಾಲದ ಹೆಜ್ಜೆ ಗುರುತು ಸುಮಾರು 3.11 kg ಯಿಂದ 5.44 kg ಇಂಗಾಲದ ಡೈಆಕ್ಸೈಡ್ ಗೆ ಸಮ. ಅಂದರೆ ಪ್ರತಿ 100 gr ಚಾಕಲೇಟ್ ಗೆ 300 ರಿಂದ 540 gr ಇಂಗಾಲದ ಡೈಆಕ್ಸೈಡ್.
ಇಲ್ಲಿಯೂ ಇಂಗಾಲದ ಹೆಜ್ಜೆಗಳೇ ಅದು ಹೇಗೆ ಎಂದು ಕೇಳಿದರೆ? ಕೋಕೋ ಬೆಳೆಯಲು ನೀವು ನಿತ್ಯ ಹರಿದ್ವರ್ಣದ ಕಾಡನ್ನು ಕಡಿದಿದ್ದೀರಿ. ಆಗ ಭೂ ಪರಿವರ್ತನೆಯ ಬಳಕೆ ಲೆಕ್ಕ ಹಾಕಬೇಕು ಇದು 64%. ಕೋಕೋ ಕಾಯಿಗಳ ಹದಗೊಳಿಸುವಿಕೆ ಇದು 28%. ಹೈನು ಉತ್ಪನ್ನಗಳ ಬಳಕೆ ಇದು 7%. ಇನ್ನು ಸಾಗಾಟ 3%. ಸರಳವಾಗಿ ಹೇಳಿ ಎಂದರೆ ಹಾಲಿನ ಚಾಕೋಲೇಟ್ 200 gr ಬಾರ್ ತಿಂದರೆ ಒಂದು ಪ್ಯಾಸೆಂಜರ್ ಕಾರನ್ನು 2.75 ಕಿಮೀ ಓಡಿಸಿದ ಹಾಗೆ. ಕಾಡು ಕಡಿದು ಮಾಡಿದ 200gr ಚಾಕೊಲೇಟ್ ತಿಂದರೆ 3.7 ಕಿಮೀ ಓಡಿಸಿದ ಹಾಗೆ. ಕಾಡು ಕಡಿದು ಮಾಡಿದ ಕಪ್ಪು ಚಾಕಲೇಟ್ ನ 200 gr ತುಂಡನ್ನು ತಿಂದರೆ 12.3 km ಕಾರು ಓಡಿಸಿದ ಹಾಗೆ. ಅಂದರೆ ಬರಿಯ ಚಾಕ್ಲೇಟ್ ತಿಂದು ಎಷ್ಟು ದೂರ ಕಾರು ಓಡಿಸಿದ್ದೀರಿ ಎಂದು ಪುರುಸೊತ್ತಿದ್ದಾಗ ಲೆಕ್ಕ ಮಾಡಿ.
ಇನ್ನು ಇಂಗಾಲದ ಹೆಜ್ಜೆ ಗುರುತಿನ ರಕ್ಕಸರನ್ನು ನೋಡೋಣ. ಸ್ಪೇಸ್ ಎಕ್ಸ್ ನ ಒಂದು ರಾಕೆಟ್ 300 ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಹೊರ ಸೂಸುತ್ತದೆ. ಭಾರತದ MSLV MK II 100 ರಿಂದ 150 ಟನ್ ಇಂಗಾಲದ ಡೈಆಕ್ಸೈಡ್ ಹೊರ ಸೂಸುತ್ತದೆ. ಇದಲ್ಲದೆ ವಿಫುಲವಾಗಿ ನೈಟ್ರಸ್ ಆಕ್ಸೈಡ್ ಅನ್ನು ಹೊರ ಸೂಸುವುದು ಮಾತ್ರವಲ್ಲ ಎತ್ತರದ ಟ್ರೋಫೋಸ್ಪಿಯರ್ ನಲ್ಲ ಆಳವಾದ ಗಾಯವನ್ನು ಬಿಟ್ಟು ಹೋಗುತ್ತದೆ. ಇನ್ನು ಅಮೇರಿಕಾದ F 35 ಯುದ್ದ ವಿಮಾನ ತನ್ನ ಒಂದು ಹಾರಾಟದಲ್ಲಿ ಸುಮಾರು 5600 ಲೀಟರ್ ಇಂಧನವನ್ನು ಸುಟ್ಟು 10 ರಿಂದ 15 ಟನ್ ಇಂಗಾಲದ ಡೈಆಕ್ಸೈಡ್ ಹೊರ ಹಾಕುತ್ತದೆ. ಅದೇ ಒಂದು B 2 ಬಾಂಬರ್ ಒಂದು ಹಾರಾಟಕ್ಕೆ ಸುಮಾರು 91,000 ಲೀಟರ್ ಇಂಧನ ಉರಿಸಿ 250+ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತದೆ. ಅಂದರೆ ನೀವು ತೀರ್ಮಾನಕ್ಕೆ ಬಂದಿದ್ದೀರಿ ರಾಕೆಟ್ ಉಡ್ಡಯನಕ್ಕಿಂತ ಯುದ್ಧ ವಿಮಾನಗಳೇ ಮೇಲು ಎಂದು. ಆದರೆ ಹಾಗಲ್ಲ ನಾವು ವರ್ಷಕ್ಕೆ ಕೆಲವೇ ಕೆಲವು ರಾಕೆಟ್ ಉಡ್ಡಯನ ಮಾಡಿದರೆ ಪ್ರತಿ ನಿತ್ಯ ಯುದ್ದ ವಿಮಾನಗಳನ್ನು ಹಾರಿಸುತ್ತಲೇ ಇರುತ್ತೇವೆ. ಯುದ್ದ ಕಾಲದಲ್ಲಿ ಆಕ್ರಮಣಕ್ಕೆ ಇವುಗಳನ್ನು ಬಳಸಿದರೆ ಶಾಂತಿಯ ಕಾಲದಲ್ಲಿ ಇವುಗಳನ್ನು ಸುಸ್ಥಿತಿಯಲ್ಲಿರಿಸಲು ಹಾರಾಟ ನಡೆಸಲೇಬೇಕಾಗುತ್ತದೆ.
ನಮ್ಮ ಪ್ರಧಾನಿ ಯುದ್ದ ನಿಲ್ಲಿಸಲು ಪ್ರಯತ್ನಿಸುವುದು ಕೇವಲ ವಿನಾಶ ತಡೆಯಲು ಮಾತ್ರ ಎಂದುಕೊಂಡಿದ್ದೀರಾ ಅಲ್ಲ. ಜಾಗತಿಕ ತಾಪಮಾನ ಏರಿಕೆಯಾಗದಂತೆ ತಡೆಯಲು ತಕ್ಷಣ ಯುದ್ದಗಳು ನಿಲ್ಲಲೇಬೇಕು.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************