ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 91 : ಲೇಖಕರು : ಭವ್ಯಶ್ರೀ ಸಹಶಿಕ್ಷಕಿ
Sunday, September 20, 2026
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 91
ಲೇಖಕರು : ಭವ್ಯಶ್ರೀ
ಸಹಶಿಕ್ಷಕಿ
ನಾಗರಕಟ್ಟೆ, ಕಾಸರಗೋಡು ಜಿಲ್ಲೆ
ಅಧ್ಯಾಪಕರು ಅಂದಮೇಲೆ ಶಿಸ್ತಿಗಾಗಿ ಗದರುವುದು ಸಹಜ. ಆದರೆ ಆ ಗದರುವಿಕೆ ಮಗುವಿನ ಮನಸ್ಸಿನ ಮೇಲೆ ಅಷ್ಟೊಂದು ಪರಿಣಾಮ ಬೀರುತ್ತದೆ ಎಂದು ನನಗೆ ತಿಳಿದಿರಲಿಲ್ಲ.
ನನ್ನ ತರಗತಿಯಲ್ಲೊಬ್ಬ ಪುಟ್ಟ ಬಾಲಕನಿದ್ದಾನೆ. ಇವನ ಕುರಿತು ಒಂದೇ ವಾಕ್ಯದಲ್ಲಿ ಹೇಳುವುದಾದರೆ "ನಾಚಿಕೆ ಮುಳ್ಳು" ಎಂದು ವ್ಯಾಖ್ಯಾನಿಸಬಹುದು. ಅತಿಯಾದ ಕೋಪ, ಶಿಸ್ತುಬದ್ಧತೆ ಹಾಗೂ ಗಂಭೀರತೆ ಎಲ್ಲವೂ ಇವನಲ್ಲಿದ್ದರೂ, ಅವನಲ್ಲಿ ಅಳುವ ಅಸ್ತ್ರ ಮಾತ್ರ ಸದಾ ಸಿದ್ಧ! "ಅತಿಯಾಗಿ ಮುದ್ದು ಮಾಡಿದರೆ ಮಕ್ಕಳು ತಲೆಮೇಲೆ ಹತ್ತುತ್ತಾರೆ" ಎನ್ನುವ ಹಿರಿಯರ ಮಾತಿಗೆ ಇವನೇ ಸಾಕ್ಷಿಯಾಗಿದ್ದ. ತರಗತಿಯಲ್ಲಿ ನಾನು ಕೊಂಚ ಧ್ವನಿ ಎತ್ತಿ ಮಾತನಾಡಿದರೆ ಅಥವಾ "ನಿನ್ನದು ತಪ್ಪು" ಎಂದು ಗದರಿದರೆ ಸಾಕು; ಅವನ ಮುಖ ಕೆಂಪಾಗಿ ಬಾಡಿದ ಟೊಮೆಟೊ ಹಣ್ಣಿನಂತಾಗುತ್ತಿತ್ತು. ಕಣ್ಣಿನಲ್ಲಂತೂ ಸದಾ ಗಂಗೆಯಂತೆ ಕಣ್ಣೀರು ಸಿದ್ಧ. ಇದನ್ನು ತಿಳಿದ ನಾನು ಅವನ ಮನಸ್ಸು ತುಂಬಾ ಮೃದು ಎಂದು ಭಾವಿಸಿ, ಸ್ವಲ್ಪ ಜಾಗೃತಿ ವಹಿಸಿ ಸಂಭಾಷಿಸುತ್ತಿದ್ದೆ. ಅದುವೇ ಅವನಿಗೆ ಸಲುಗೆಯಾಗಿ ತುಂಟಾಟ ಹೆಚ್ಚಾಯಿತು. ಕಲಿಕೆಯಲ್ಲಿ ಅವನು ಮುಂದಿದ್ದ ಕಾರಣ ನಾನು ಕೂಡ ಅವನ ತುಂಟಾಟವನ್ನು ತಮಾಷೆಯಾಗಿ ನಿಭಾಯಿಸುತ್ತಿದ್ದೆ. ನಮ್ಮ ಬಾಂಧವ್ಯ ತುಂಬಾ ಮುದ್ದಾಗಿ, ಖುಷಿಯಿಂದ ಸಾಗುತ್ತಿತ್ತು. ಆದರೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ನಮ್ಮ ಸಂಬಂಧದಲ್ಲಿ ಬಿರುಕು ಮೂಡಿತು.
ಅವನ ತುಂಟಾಟ ಹೆಚ್ಚಾಗಿ ಕಲಿಕೆಯಲ್ಲಿ ಹಿನ್ನೆಡೆಯಾಗತೊಡಗಿತು. ಕಲಿಕೆಯಲ್ಲಿ ಆಸಕ್ತಿ ಇಲ್ಲದೆ, ಕಾರಣವಿಲ್ಲದೆ ಅಳುವುದು ಹೆಚ್ಚಾಯಿತು. ಹೀಗಿರಲು ಒಂದು ದಿನ ನೀಡಿದ್ದ ಮನೆಗೆಲಸವನ್ನು ಮಾಡದೆ ತರಗತಿಗೆ ಬಂದಿದ್ದ. ಎರಡು-ಮೂರು ಬಾರಿ "ವಿಚಾರಿಸಿ, ನಾಳೆ ಮಾಡಿ ಬಾ" ಎಂದು ಸುಮ್ಮನಿದ್ದೆ. ಆದರೆ ಅಂದು ನಾನು ಸುಮ್ಮನಿರದೆ, "ಇನ್ನೂ ಮನೆಗೆಲಸ ಮಾಡಿ ಬರದಿದ್ದರೆ ಶಿಕ್ಷೆ ಕೊಡುವೆ" ಎಂದು ಚೆನ್ನಾಗಿ ಗದರಿದೆ. ಅವನು ಸ್ವಲ್ಪ ಹೊತ್ತು ಅತ್ತು ಸುಮ್ಮನಾದ. ಆದರೆ ಇದರ ಪರಿಣಾಮ ನಾಳೆಗೆ ಕಾದಿದೆ ಎಂದು ನನಗೆ ತಿಳಿದಿರಲಿಲ್ಲ.
ಮರುದಿನ ಬೆಳಿಗ್ಗೆಯೇ ಅಲಾರಾಂನಂತೆ ಅವನ ಅಮ್ಮನ ಕರೆ ಬಂದಿತು. "ಇವತ್ತು ನನ್ನ ಮಗ ನಿಮ್ಮ ತರಗತಿಗೆ ಬರುವುದಿಲ್ಲವಂತೆ, ನೀವು ಅವನಿಗೆ ಬೈದಿದ್ದೀರಿ" ಎಂದರು. "ಅವನು ಅತ್ತರೂ ಪರವಾಗಿಲ್ಲ, ಇಂದು ಶಾಲೆಗೆ ಕಳುಹಿಸಿ, ಸ್ವಲ್ಪ ಹೊತ್ತಿನಲ್ಲಿ ಸರಿಯಾಗುತ್ತಾನೆ" ಎಂದು ಹೇಳಿ ಫೋನ್ ಇಟ್ಟೆ. ಏನೇ ಆಗಲಿ ಎಂದು ತರಗತಿಗೆ ಹೊರಟೆನು.
ಶಾಲೆಗೆ ಹೋದಾಗ ಅಳುತ್ತಾ ನಿಂತಿದ್ದ ಅವನನ್ನು ಕರೆದೆ. ಆದರೆ ಅವನು ನಾನು ಕರೆದರೂ ಓ ನೀಡದೆ ತಕ್ಷಣ ಮುಖ್ಯೋಪಾಧ್ಯಾಯರ ಬಳಿ ಓಡಿದನು. ಮುಖ್ಯೋಪಾಧ್ಯಾಯರು ವಿಚಾರಿಸಿದಾಗ ನಾನು ನಡೆದ ವಿಷಯವನ್ನು ವಿವರಿಸಿದೆ. ಅವರು, "ಈಗಿನ ಕಾಲದ ಮಕ್ಕಳಿಗೆ ಯಾವುದು ತಪ್ಪು-ಸರಿ ಎಂಬ ಅರಿವಿರುವುದಿಲ್ಲ. ಹೆತ್ತವರೂ ಒಂದೇ ಮಗುವೆಂದು ಹೊಡೆಯದೇ-ಬೈಯದೇ ಮುದ್ದಾಗಿ ಬೆಳೆಸುತ್ತಾರೆ. ಆದ್ದರಿಂದ ನಾವು ಅವರನ್ನು ತುಂಬಾ ಸೂಕ್ಷ್ಮವಾಗಿ ನೋಡಿಕೊಳ್ಳಬೇಕು" ಎಂದರು.
ನಂತರ ನೇರವಾಗಿ ಮಗುವಿನ ಬಳಿ ಹೋಗಿ ಮಾತನಾಡಿಸಿದೆನು. ನಾನು ಏನೇ ಹೇಳಿದರೂ, "ನನಗೆ ನೀವು ಇಷ್ಟವಿಲ್ಲ, ತರಗತಿಗೆ ಬರುವುದಿಲ್ಲ" ಎಂದೇ ಉತ್ತರಿಸುತ್ತಿದ್ದ. ಈ ಉತ್ತರ ಕೇಳಿ ಒಂದೆಡೆ ಬೇಸರ, ಇನ್ನೊಂದೆಡೆ ಕೋಪ ಬಂತು. ಕೊನೆಗೆ ಐಸ್‌ಕ್ರೀಮ್, ಮಿಠಾಯಿ ಕೊಡಿಸುವೆ ಎಂದು ಬಾಹ್ಯ ಪ್ರೇರಣೆ ನೀಡಿದರೂ ಅವನು ಬರಲು ಒಪ್ಪಲಿಲ್ಲ. ಅವನನ್ನು ಆಫೀಸ್‌ನಲ್ಲಿ ಕುಳ್ಳಿರಿಸಿ ತರಗತಿಗೆ ಹೋದೆನು. ಅವನ ಅಮ್ಮ ಕರೆ ಮಾಡಿದಾಗ "ಎಲ್ಲ ಸರಿಯಾಗಿದೆ" ಎಂದು ಫೋನ್ ಇಟ್ಟೆ.
ಮತ್ತೆ ಅವನ ಬಳಿ ಹೋಗಿ ಹಲವು ರೀತಿಯಲ್ಲಿ ಮಾತನಾಡಿಸಿದರೂ ಪ್ರಯೋಜನವಾಗಲಿಲ್ಲ. ಅವನ ಕೈಯಲ್ಲಿದ್ದ ತಿಂಡಿಯನ್ನು ನಾನು ಕೇಳಿದಾಗ ನೀಡಲಿಲ್ಲ, ಆದರೆ ಬೇರೆ ಶಿಕ್ಷಕರು ಕೇಳಿದ ತಕ್ಷಣ ಕೊಟ್ಟನು. ಇದನ್ನು ನೋಡಿ ನನಗೆ ಅಳು ಬರುವಂತಾಯಿತು. "ಹೇಗಾದರೂ ಮಾಡಿ ಇವನನ್ನು ಸರಿಮಾಡಬೇಕು" ಎಂದು ತೀರ್ಮಾನಿಸಿದೆನು. ನಮಗೆ ಎಲ್ಲರು ಮೆಚ್ಚುವಂತೆ ನಡೆದುಕೊಳ್ಳಲು ಸಾಧ್ಯವಿಲ್ಲ. ಕೊನೆಗೆ ಕಲಿಯಬೇಕೆಂಬ ಆಸೆಯಿಂದ ತರಗತಿಗೇನೋ ಬಂದನು, ಆದರೆ ಆ ಮುಗ್ಧ ನಗು ಅವನಲ್ಲಿರಲಿಲ್ಲ. ಅಧ್ಯಾಪಕರಾದ ನಾವು ಗದರುವುದೇನೋ ಸರಿ, ಆದರೆ ಅದರ ಬಾಹ್ಯ ಪರಿಣಾಮವನ್ನು ಕೂಡ ನಾವೇ ಎದುರಿಸಬೇಕೆಂದು ಅರ್ಥವಾಯಿತು. ನಾನು ಗದರಿದಾಗ ಆ ಪುಟ್ಟ ಮನಸ್ಸಿನಲ್ಲಿ ಉಂಟಾದ ನೋವು ಮತ್ತು ಬೇಸರವೇ ಅವನ ಬಾಯಲ್ಲಿ "ನೀವು ಇಷ್ಟವಿಲ್ಲ" ಎಂದು ನುಡಿಸುತ್ತಿತ್ತು.
ಆದರೆ ದಿನಗಳು ಉರುಳಿದಂತೆ ಆ ಮಗು ತಾನಾಗಿಯೇ ಬಂದು ನನ್ನಲ್ಲಿ ಕ್ಷಮೆ ಕೇಳಿತು. ನನಗಂತೂ ತುಂಬಾ ಖುಷಿಯಾಯಿತು. ಆ ಗದರುವಿಕೆಯ ಹಿಂದಿರುವ ಪ್ರೀತಿ ಮತ್ತು ಕಾಳಜಿಯನ್ನು ಅರ್ಥೈಸಿ, ಅವನು ಮೊದಲಿಗಿಂತಲೂ ಚೆನ್ನಾಗಿ ವರ್ತಿಸತೊಡಗಿದನು. ಹಾಗಾದರೆ ಅಧ್ಯಾಪಕರು ಗದರುವುದು ಸರಿಯೇ, ತಪ್ಪೇ??
ಸಹಶಿಕ್ಷಕಿ
ನಾಗರಕಟ್ಟೆ, ಕಾಸರಗೋಡು ಜಿಲ್ಲೆ
Mob : +91 97445 22504
**********************************************