ಮಳೆಯ ವಿಶೇಷ ಅನುಭವ : ಸಂಚಿಕೆ - 05
Friday, August 21, 2026
Edit
ಮಳೆಯ ವಿಶೇಷ ಅನುಭವ : ಸಂಚಿಕೆ - 05
ಎಲ್ಲಾ ಕಾಲಗಳಲ್ಲಿ ನನಗೆ ಮಳೆಗಾಲವೆಂದರೆ ಬಲು ಇಷ್ಟ. ಆದರೆ ಈ ವರ್ಷದ ಮಳೆಗಾಲ ನೆನೆದರೆ ಬಲು ಕಷ್ಟವೆನಿಸುತ್ತದೆ. ನಗರೀಕರಣ, ರಸ್ತೆ ಅಗಲೀಕರಣದ ಹೆಸರಿನಲ್ಲಿ ರಸ್ತೆಯ ಇಕ್ಕೆಲಗಳಲ್ಲಿದ್ದ ಮರಗಳನ್ನು ಕಡಿದು ನಾಶ ಮಾಡಿದ ಪರಿಣಾಮ ಈ ವರ್ಷ ಮಳೆ ಬಹಳ ಕಡಿಮೆಯಾಗಿದೆ. ಈ ವರ್ಷ ಬೆಳಿಗ್ಗೆ ಮಳೆಗಾಲ, ಮದ್ಯಾಹ್ನ ಬೇಸಿಗೆ, ರಾತ್ರಿ ಚಳಿಗಾಲ ಎಂದೆನಿಸುತ್ತಿದೆ. ಗದ್ದೆಗಳೆಲ್ಲ ನೀರಿರದೆ ಒಣಗುತ್ತಿದೆ. ಇಲ್ಲಿಂದ ಬೀಸುವ ತೀವ್ರ ಗಾಳಿ ಇನ್ನೆಲ್ಲೋ ಮಳೆಯನ್ನು ತರಿಸುತ್ತಿದೆ. ಮಳೆಯೇ ಬಾರದೇ ರೈತರಿಗೂ ಬಹಳ ಕಷ್ಟವೆನಿಸುತ್ತಿದೆ.
ಈ ಬಾರಿಯ ಮಳೆಯ ಕುರಿತು ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಮಕ್ಕಳ ಜಗಲಿಯಲ್ಲಿ ಹಂಚಿಕೊಂಡಿದ್ದಾರೆ..
ಜಗಲಿಯ ಮಕ್ಕಳ ಅನುಭವ ಬರಹಗಳು
◾ ಕಿಂಜಲ್, 9ನೇ ತರಗತಿ
◾ ಅವನೀಶ್ ಐತಾಳ್ ಪಿ , 9ನೇ ತರಗತಿ
◾ ಸಾನ್ವಿ ಪಿ ಆಚಾರ್ಯ, 3ನೇ ತರಗತಿ
◾ ಸಿ ಅನಿಕೇಶ್ ಐತಾಳ್ ಪಿ, 5ನೇ ತರಗತಿ
◾ ನವ್ಯಶ್ರೀ ಕೆ, 8ನೇ ತರಗತಿ
◾ ಕಲಾಸ್ಮಿತ ಆರ್, 8ನೇ ತರಗತಿ
◾ ಮಣಿಕಂಠ. ಎಸ್. ಎಂ. ಕುಲಾಲ್, 9ನೇ ತರಗತಿ
◾ ಹಿತಾಶ್ರೀ, 9ನೇ ತರಗತಿ
◾ ದೃತಿ ಎ ಎಂ, 4ನೇ ತರಗತಿ
ನನಗೆ ಮಳೆಗಾಲ ಎಂದರೆ ತುಂಬಾ ಇಷ್ಟ. ಮಳೆಯಲ್ಲಿ ನೆನೆಯುವುದು ನನಗೆ ಅಪಾರ ಸಂತೋಷವನ್ನು ನೀಡುತ್ತದೆ. ಆದರೆ ಈ ವರ್ಷ ನಮ್ಮ ಊರಿನಲ್ಲಿ ಜೂನ್ ತಿಂಗಳಿನಿಂದ ಮಳೆ ಶುರುವಾಗಿದ್ದರೂ, ಬಹಳ ಕಡಿಮೆ ಪ್ರಮಾಣದಲ್ಲಿ ಮಳೆ ಬರುತ್ತಿತ್ತು. ನನಗೆ ಈಗ ಖುಷಿಯಾಗುತ್ತಿದೆ ಏಕೆಂದರೆ ಈಗ ಜೋರಾಗಿ ಮಳೆ ಸುರಿಯುತ್ತಿದೆ. ಎಲ್ಲೆಡೆ ಹಚ್ಚಹಸಿರು, ಹಾಗೂ ಮರಗಿಡಗಳು ಖುಷಿಯಿಂದ ಕುಣಿಯುವ ಹಾಗೆ ಕಾಣುತ್ತಿವೆ. ಹಿಂದಿನ ವರ್ಷ ನನ್ನ ಕೆಲವು ಸ್ನೇಹಿತೆಯರು ಕ್ರೀಡಾಕೂಟದ ಅಭ್ಯಾಸವನ್ನು ಮಳೆಯಲ್ಲಿ ನೆನೆದುಕೊಂಡೆ ಮಾಡುತ್ತಿದ್ದರು. ಅವರನ್ನು ನೋಡುವಾಗ ನನಗೂ ಮಳೆಯಲ್ಲಿ ನೆನೆಯುವ ಆಸೆ ಆಗುತ್ತಿತ್ತು. ಆದರೆ ನಾನು ನವೆಂಬರ್ ತಿಂಗಳಿನಿಂದ ಕ್ರೀಡಾಕೂಟದ ಅಭ್ಯಾಸಕ್ಕೆ ಸೇರಿದ್ದೆನು. ಹಾಗಾಗಿ ಹೋದ ವರ್ಷ ನನಗೆ ಮಳೆಯಲ್ಲಿ ನೆನೆಯುವ ಅವಕಾಶ ಸಿಗಲಿಲ್ಲ. ನವೆಂಬರ್ ತಿಂಗಳಿನಿಂದ ನಿರಂತರವಾಗಿ ಕ್ರೀಡಾಕೂಟದ ಅಭ್ಯಾಸವನ್ನು ಮಾಡುತ್ತಿರುವುದರಿಂದ ನನಗೆ ಈ ವರ್ಷ ಮಳೆಯಲ್ಲಿ ನೆನೆಯುತ್ತಾ, ಆಟವಾಡಲು ಅವಕಾಶ ಸಿಕ್ಕಿತು. ಮೊನ್ನೆ ನಾವು ಕ್ರೀಡಾಕೂಟದ ಅಭ್ಯಾಸವನ್ನು ಮಾಡುತ್ತಿರುವಾಗ ತಂಪಾದ ಗಾಳಿ ಬೀಸುತ್ತಿತ್ತು, ಮರಗಿಡಗಳು ಕುಣಿಯಲು ಶುರು ಮಾಡಿದವು, ಕೊನೆಗೆ ಜೋರಾಗಿ ಮಳೆ ಬಂತು. ನಾನು ಮಳೆಯಲ್ಲಿ ನೆನೆದುಕೊಂಡೆ ಅಭ್ಯಾಸವನ್ನು ಮಾಡಿದೆನು. ಅದರ ಪರಿಣಾಮವಾಗಿ ಮಾರನೆಯ ದಿನ ನನಗೆ ಜೋರಾದ ತಲೆನೋವು ಶುರುವಾಯಿತು. ನಾನು ಆ ದಿನ ಶಾಲೆಗೆ ರಜೆ ಹಾಕಲಿಕ್ಕಿದ್ದೆನು. ಆದರೆ ಅದೇ ದಿನ ಶಾಲೆಗೆ ರಜೆ ಸಿಕ್ಕಿದ್ದರಿಂದ ನನ್ನ ಒಂದು ಹಾಜರಿ ಕಡಿಮೆಯಾಗುವುದರಿಂದ ಉಳಿಯಿತು.
ಈಗಷ್ಟೇ ಮಳೆ ಶುರುವಾಗಿದ್ದರಿಂದ ನನಗೆ ಇಷ್ಟು ಖುಷಿಯಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಚೆನ್ನಾಗಿ ಮಳೆ ಬಂದರೆ ನನಗೆ ಎಷ್ಟು ಖುಷಿಯಾಗಬಹುದು ಎಂದು ಯೋಚಿಸುತ್ತಿದ್ದೇನೆ. ಹೀಗೆ ಮಳೆಗಾಲವು ಪ್ರತಿವರ್ಷ ನನಗೆ ಒಂದೊಂದು ಹೊಸ ಅನುಭವಗಳನ್ನು ನೀಡುತ್ತದೆ. ಅದಲ್ಲದೆ ಮಳೆಗಾಲದಲ್ಲಿನ ಪ್ರತಿಯೊಂದು ದಿನವೂ ನನಗೆ ನೆನಪಿನಲ್ಲಿ ಉಳಿಯುತ್ತದೆ. ಹಿಂದಿನ ವರ್ಷದ ಹಾಗೆ ದಾರಿಯಲ್ಲಿ ಬರುವಾಗ ಗಂಟಿನಷ್ಟು ನೀರು ತುಂಬಿರುವುದು ಈ ವರ್ಷವೂ ಆಗಬೇಕು ಎಂದು ಬೇಡುತ್ತಿದ್ದೇನೆ. ಇನ್ನು ಜೋರಾಗಿ ಮಳೆ ಬಂದರೆ ಅದೂ ಸಾಧ್ಯವಾಗುತ್ತದೆ.
9ನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಎಲ್ಲಾ ಕಾಲಗಳಲ್ಲಿ ನನಗೆ ಮಳೆಗಾಲವೆಂದರೆ ಬಲು ಇಷ್ಟ. ಆದರೆ ಈ ವರ್ಷದ ಮಳೆಗಾಲ ನೆನೆದರೆ ಬಲು ಕಷ್ಟವೆನಿಸುತ್ತದೆ. ನಗರೀಕರಣ, ರಸ್ತೆ ಅಗಲೀಕರಣದ ಹೆಸರಿನಲ್ಲಿ ರಸ್ತೆಯ ಇಕ್ಕೆಲಗಳಲ್ಲಿದ್ದ ಮರಗಳನ್ನು ಕಡಿದು ನಾಶ ಮಾಡಿದ ಪರಿಣಾಮ ಈ ವರ್ಷ ಮಳೆ ಬಹಳ ಕಡಿಮೆಯಾಗಿದೆ. ಈ ವರ್ಷ ಬೆಳಿಗ್ಗೆ ಮಳೆಗಾಲ, ಮದ್ಯಾಹ್ನ ಬೇಸಿಗೆ, ರಾತ್ರಿ ಚಳಿಗಾಲ ಎಂದೆನಿಸುತ್ತಿದೆ. ಗದ್ದೆಗಳೆಲ್ಲ ನೀರಿರದೆ ಒಣಗುತ್ತಿದೆ. ಇಲ್ಲಿಂದ ಬೀಸುವ ತೀವ್ರ ಗಾಳಿ ಇನ್ನೆಲ್ಲೋ ಮಳೆಯನ್ನು ತರಿಸುತ್ತಿದೆ. ಮಳೆಯೇ ಬಾರದೇ ರೈತರಿಗೂ ಬಹಳ ಕಷ್ಟವೆನಿಸುತ್ತಿದೆ.
ಈ ಸಾರಿ ಕೊಂಡುಕೊಂಡ ರೈನ್ ಕೋಟ್ ಕೂಡ ವ್ಯರ್ಥವಾಗಿದೆ. ಅಪ್ಪನ ಗಾಡಿಯಲ್ಲಿ ಹೋಗುವಾಗ ಮಳೆ ಬಂತೆಂದು ರೈನ್ ಕೋಟ್ ಬಿಡಿಸುವುದರೊಳಗೆ ಮಳೆ ನಿಂತಿರುತ್ತದೆ. ಮಳೆಗಾಲದಲ್ಲಿ ಶಾಲೆಗೆ ರಜೆ ಕೊಟ್ಟರೆ, ಬೆಚ್ಚಗೆ ಮನೆಯಲ್ಲೇ ಅಮ್ಮ ಮಾಡಿದ ಕುರು ಕುರು ಗರಿ ಗರಿ ತಿನ್ನುತ್ತಾ ಕಿಟಕಿಯ ಪಕ್ಕ ಕೂತು ಮಳೆಯನ್ನು ನೋಡುವುದೆಂದರೆ ನನಗೆ ಬಲು ಇಷ್ಟ. ಆದರೆ ಈ ವರ್ಷ ಮಳೆಯೇ ಇಲ್ಲದೇ ಒಂದು ರಜೆಯೂ ಸಿಕ್ಕಲಿಲ್ಲವೆನ್ನುವುದೇ ಬೇಸರ ತರಿಸುತ್ತದೆ. ಈ ವರ್ಷ ಒಂದು ದಿನವೂ ಸತತವಾಗಿ ಮಳೆ ಬಂದದ್ದೇ ಇಲ್ಲ ಎನ್ನಬಹುದು. ಕರಾವಳಿಯಲ್ಲಿ ಇಷ್ಟು ಕಡಿಮೆ ಮಳೆ ಇದೇ ಮೊದಲು ಎಂದು ಹಿರಿಯರು ಅಭಿಪ್ರಾಯ ಪಡುತ್ತಾರೆ. ಒಟ್ಟಾರೆ ಸಾಕಷ್ಟು ಮಳೆ ಬರಲಿ, ಮಳೆಯಿಂದ ಬೆಳೆ ಬೆಳೆದು ಸಕಲ ಜೀವಿಗಳ ಜೀವನ ಒಳಿತಾಗಲಿ ಎಂಬುದು ನನ್ನ ಅಭಿಪ್ರಾಯವಾಗಿದೆ.
9ನೇ ತರಗತಿ.
ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆ ತೆಕ್ಕಟ್ಟೆ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
******************************************
ಮಳೆ ನಮಗೆ ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದೆ. ಈ ಬಾರಿ ಮಳೆಯಿಂದ ನಮಗೆ ಸ್ಕೂಲ್ಗೆ ತುಂಬಾ ರಜೆ ಸಿಕ್ಕಿತು. ನಾನು ರಜೆ ದಿವಸ ಅಜ್ಜಿ ಮನೆಗೆ ಹೋಗಿ ಬರುತ್ತೇನೆ. ನನ್ನ ಅಮ್ಮ ಮಳೆ ಬರುವ ಟೈಮಲ್ಲಿ ಡೆಲಿವರಿ ಆಗಿ ಮಳೆಯ ವರ್ಷದಲ್ಲಿ ಪುಟ್ಟ ತಮ್ಮನ ಆಗಮನ, ಅದೇ ನನಗೆ ತುಂಬಾ ಖುಷಿ ಕೊಡುವ ವಿಷಯ. ನನ್ನ ಅಮ್ಮ ಅಜ್ಜಿ ಮನೆಯಲ್ಲಿ ಇರುವುದರಿಂದ ರಜೆಗೆ ಹೋಗಿ ನನ್ನ ಪುಟ್ಟ ತಮ್ಮನ ಜೊತೆ ಆಟ ಆಡಿ ಬರುತ್ತೇನೆ. ನನ್ನ ಮನೆ ಪಕ್ಕ ಹೊಲ ಗದ್ದೆ ತೋಟ ಇರುವುದರಿಂದ ಅಲ್ಲಿಯ ಪರಿಸರ ನೋಡಲು ಮನಸ್ಸಿಗೆ ಏನೋ ಖುಷಿ ಕೊಡುತ್ತದೆ. ಮನೆಯ ಪಕ್ಕದ ಗದ್ದೆಗೆ ನೆರೆ ಬಂದಿದೆ. ಈ ವರ್ಷ ತುಂಬಾ ಮಳೆಯಿಂದಾಗಿ ಆಟ ಆಡಲು ಕಷ್ಟ ಆಗಿದೆ. ದುಃಖದ ವಿಷಯ ಮಳೆಯಿಂದಾಗಿ ಮಣ್ಣು ಬಿದ್ದು ಎಷ್ಟು ಮನೆ ಹಾಳಾಗಿದೆ. ಜನಗಳಿಗೆ ಏಟಾಗಿ ಸಾವು ನೋವು ಉಂಟಾಗಿದೆ. ಅದೆಲ್ಲ ನೆನೆಸಿಕೊಂಡರೆ ದುಃಖವಾಗುತ್ತದೆ. ನಾನು ಸೈಕಲ್‌ನಲ್ಲಿ ಹೋಗಿ ಜಾರಿ ಬಿದ್ದು ತುಂಬಾ ಏಟಾಗಿತ್ತು. ನಮ್ಮ ಮನೆಯಂಗಳದಲ್ಲಿ ಮಳೆಗೆ ಅಕ್ಕ ಜಾರಿ ಬಿದ್ದು ಅವಳನ್ನು ಎತ್ತಲು ಹೋಗಿ ನಾನು ಜಾರಿ ಬಿದ್ದು ಅದೇ ನಮಗೆ ತಮಾಷೆಯಾಗಿ ಬಂದಿತ್ತು.
3ನೇ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ
ಮುಲ್ಕಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನನ್ನ ಇಷ್ಟದ ಕಾಲ ಮಳೆಗಾಲ. ಹನಿಹನಿ ಮಳೆಯಲ್ಲಿ ನೆನೆಯುವುದೆಂದರೆ ನನಗೆ ಎಲ್ಲಿಲ್ಲದ ಇಷ್ಟ. ನಮ್ಮ ಮನೆಯ ಟಾಮಿಗೆ ಮಳೆಯೆಂದರೆ ಬಲು ಕಷ್ಟ. ಅದರಲ್ಲೂ ಗುಡುಗು ಮಿಂಚು ಬಂತೆಂದರೆ ಸಾಕು ಅದಕ್ಕೆ ತುಂಬಾ ಭಯ. ಗುಡುಗಿನ ಶಬ್ದಕ್ಕೆ ಅದು ಹೆದರಿ ಕುಯ್ಯೋ ಮರ್ರೋ ಎಂದು ನಿಧಾನವಾಗಿ ಕೂಗುತ್ತಲೇ ಇರುತ್ತದೆ.
ಟಾಮಿಯನ್ನು ಪ್ರತಿ ದಿನ ವಾಕಿಂಗ್ ಕರೆದುಕೊಂಡು ಹೋಗುವವನು ನಾನು. ಆ ದಿನ ಮಳೆ ಬರುತ್ತಿದ್ದ ಕಾರಣ ಕೊಡೆ ಬಿಡಿಸಿ ವಾಕಿಂಗ್ ಹೊರಟೆವು. ಅರ್ಧ ದಾರಿಗೆ ಹೋಗುತ್ತಿರುವಾಗಲೇ ಇದ್ದಕ್ಕಿದ್ದಂತೆ ಜೋರಾದ ಗುಡುಗೊಂದು ಬಂದಿತು. ಅದನ್ನು ಕೇಳುತ್ತಿದ್ದಂತೆ ಟಾಮಿ ನನ್ನ ಕೈ ಸರಪಳಿ ಬಿಡಿಸಿಕೊಂಡು ಓಡತೊಡಗಿತು. ಅದು ಸರಪಳಿ ಬಿಡಿಸಿಕೊಂಡ ರಭಸಕ್ಕೆ ನಾನೋ ಜಾರಿ ಬಿದ್ದೆ. ತಲೆಯ ಮೇಲಿದ್ದ ಕೊಡೆ ಗಾಳಿ ಮಳೆಗೆ ಹಾರಿ ಹೋಯಿತು. ದೂರದಲ್ಲಿ ನೋಡುತ್ತಿದ್ದ ಅಜ್ಜ ನಗುತ್ತಿದ್ದರು. ನಾನೋ ಮಳೆಯಲಿ ನೆನೆನೆನೆದು ಮನೆ ಸೇರಿದೆ. ಟಾಮಿ ಕಿಟಕಿಯಲ್ಲಿ ನನ್ನನ್ನು ನೋಡುತ್ತಿತ್ತು. ಅಮ್ಮ ಮಳೆಯಲ್ಲಿ ನೆನೆದು ಬಂದ ನನ್ನನ್ನು ನೋಡಿ ಸಿಟ್ಟಿನಿಂದ ತಲೆಯೊರೆಸುತ್ತ ಬೆನ್ನಿಗೆರಡು ಬಿಟ್ಟಳು. ನಾನು ಟಾಮಿಯ ಆವಾಂತರವನ್ನು ಮನೆಮಂದಿಗೆಲ್ಲ ಹೇಳುತ್ತಾ ಕುಳಿತೆ. ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದರು.
5ನೇ ತರಗತಿ.
ವಿಶ್ವವಿನಾಯಕ ಆಂಗ್ಲ ಮಾಧ್ಯಮ ಶಾಲೆ ತೆಕ್ಕಟ್ಟೆ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
******************************************
ಮಳೆ ಬಂದಾಗ ಭೂಮಿ ಹಸಿರಿನಿಂದ ಕಂಗೊಳಿಸುತ್ತದೆ. ತಂಪಾದ ಗಾಳಿ, ಮಣ್ಣಿನ ಸುವಾಸನೆ ಮತ್ತು ಮಳೆಯ ಹನಿಗಳು ಮನಸ್ಸಿಗೆ ಸಂತೋಷ ನೀಡುತ್ತದೆ.
ಒಮ್ಮೆ ನಾನು ನನ್ನ ಸ್ನೇಹಿತರೊಂದಿಗೆ ಮಳೆಯಲ್ಲಿ ನೆನೆದು ಆಟವಾಡಿ ಮಳೆಯ ನಂತರ ಕಾಣಿಸಿಕೊಂಡ ಇಂದ್ರ ಧನಸ್ಸು ತುಂಬಾ ಸುಂದರವಾಗಿತ್ತು. ಆ ದಿನ ನಮ್ಮೆಲ್ಲರಿಗೂ ತುಂಬಾ ಸಂತೋಷವಾಯಿತು.
ಮಳೆಯ ದಿನಗಳು ನನಗೆ ತುಂಬಾ ಇಷ್ಟ. ಅವು ನನ್ನ ಜೀವನದ ಸುಂದರ ನೆನಪುಗಳಲ್ಲಿ ಒಂದಾಗಿವೆ.
8ನೇ ತರಗತಿ
ಮಾರಿಕಾಂಬಾ ಶಾಲೆ ಶಿರಸಿ
ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ
******************************************
ಧೋ.... ಎಂದು ಸುರಿಯುವ ಮಳೆ.. ಗಾಳಿಯ ವೇಗಕ್ಕೆ ಬಾಗಿ ನಮಸ್ಕರಿಸುಂತೆ ಕಾಣುವ ತೆಂಗು-ಕಂಗುಗಳು.. ಮದುವೆ ಮನೆಯಲ್ಲಿ ಪನ್ನೀರು ಚೆಲ್ಲುವಂತೆ.. ಗಾಳಿಯೊಂದಿಗೆ ಮಳೆ ನೀರಿನ ಹನಿಯು ಮನೆಯೊಳಗೆ ಶಾಲಾ ಸಮವಸ್ತ್ರದಲ್ಲಿ ಬೆಚ್ಚಗೆ ಕುಳಿತ ನಮಗೆ ತಾಕಿದಾಗ ಮನೆಯೇ ಹವಾನಿಯಂತ್ರಿತ ಮದುವೆ ಸಭಾಂಗಣದಂತೆ ಬಾಸವಾಗುತ್ತಿತ್ತು...
ಮನೆಯಿಂದ ಹೊರಗೆ ಕಾಲಿಡಲು ಮನಸ್ಸಿಲ್ಲದೆ ಇದ್ದರೂ ಶಾಲೆಗೆ ಹೋಗುವುದು ಅನಿವಾರ್ಯವಾಗಿತ್ತು. ಮೂಟೆ ಗಾತ್ರದ ಬ್ಯಾಗು, ಬಿಸಿನೀರಿನ ಸೀಸೆಯೊಂದಿಗೆ ಭಾರವಾದ ಮನಸ್ಸಿನಲ್ಲಿ ಮನೆಯ ಹೊರಗೆ ಕಾಲಿಡಲು.. ಅಮ್ಮ ಮೊಬೈಲ್ ನೋಡಿ ಕೂಗಿ ಹೇಳಿದರು... ಜೋರು ಮಳೆಯ ಕಾರಣ ಇಂದು ಶಾಲೆಗೆಲ್ಲ ರಜೆ. ನನ್ನ ಖುಷಿ ಗೆ ಪಾರವೇ ಇಲ್ಲದಿದ್ದರೂ... ಅಮ್ಮನಿಗೆ ಗೊತ್ತಾಗಬಾರದು ಎಂದು ರಜೆ ಕೊಟ್ಟ ಡಿ ಸಿ ಸಾಹೇಬರಿಗೆ ಬೈಯುತ್ತಾ.. ಮನದೊಳಗೆ ಧನ್ಯವಾದ ತಿಳಿಸಿದೆ....
8ನೇ ತರಗತಿ
ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆ ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಇಳಿದು ಬಾ ತಾಯೇ ಇಳಿದು ಬಾ ಬೇಂದ್ರೆಯವರ ಹಾಡು ಕಿವಿಯಲ್ಲಿ ಧ್ವನಿಸಿದಂತೆ ಅನ್ಸುತ್ತೆ
ಜೂನ್ ತಿಂಗಳಿನಲ್ಲಿ ಮಳೆಯೇ ಇಲ್ಲ. ಹೆಂಗಪ್ಪ
ಮುಂದೆ ಗದ್ದೆನಾಟಿ ಮಾಡಲು ಜಲವೇ ಆಗಿಲ್ಲ.
ನೀರಿನ ಅಭಾವ ಆದ್ರೆ ಅಂತಾ ಹಿರಿಯವರೆಲ್ಲಾ
ತಲೇ ಮೇಲೆ ಕೈಹೊತ್ತು ಕುಳಿತ್ತಿದ್ದರು. ಆದರೆ ಜುಲಾಯಿ ತಿಂಗಳಿನಲ್ಲಿ ವರುಣನ ಅಬ್ಬರ ನೋಡಿದರೆ ಸುಸ್ತೋ ಸುಸ್ತು!
ಎಲ್ಲಿ ನೋಡಿದರೂ ಅಲ್ಲಿ ನೀರೇ ನೀರು. ಕೆರೆ, ಹೊಳೆ
ಎಲ್ಲಾ ತುಂಬಿ ತುಳುಕುತ್ತಿದೆ. ಗದ್ದೆ ಬಯಲಿನಲ್ಲಿ
ಹೂಟಿ ನಟ್ಟಿ ಟಿಲ್ಲರ್‌ಗಳದೇ ಸಂಭ್ರಮ. ಒಂಥರಾ
ಖುಷಿಯೋ ಖುಷಿ. ಅಲ್ಲಲ್ಲಿ ಸಣ್ಣ ಸಣ್ಣ ಜಲಪಾತಗಳನ್ನು ನೋಡುವುದೇ ಸಡಗರ. ಮತ್ತೆ ಏನು ಗೊತ್ತಾ ಮೀನು, ಏಡಿ ಹಿಡಿಯುವುದು ಮತ್ತೆ ಅಣಬೆ ಹೆಕ್ಕುವುದೇ ಒಂಥರಾ ಮೋಜು. ಕಾಗದ ದೋಣಿ ಮಾಡಿ ತೇಲಿ ಬಿಡುವುದು, ಹನಿಹನಿ ಮಳೆಯಲ್ಲಿ ನೆನೆಯುವುದೇ ಮಸ್ತಿ. ಆದರೆ ಈ ಮಳೆಯ ಸಹವಾಸವೇ ಸಾಕಪ್ಪ ಸಾಕು! ಎಂದು ಬೈದವರೇ ಎಲ್ಲಾ. ಅಲ್ಲಾ ಒಂದು ವಿಷಯ
ಅರ್ಥವೆ ಆಗಲ್ಲ. ಈ ಹಿರಿಯಾರ ಮಾತು
ಮಳೆ ಬಂದರೆ ಬಂತು ಅಂತಾ ಅಳ್ತಾರೇ.
ಬರಲಿಲ್ಲಾ ಅಂದ್ರೆ ಅದಕ್ಕೂ ಅಳ್ತಾರೆ.
ಮಳೆ ಬಂದಾಗ ನೀರನ್ನು ಹಿಡಿದಿಟ್ಟುಕೊಳ್ಳುವಾ
ಕ್ರಮಗಳನ್ನು ಕೈಗೊಳ್ಳಬೇಕು, ಇಂಗುಗುಂಡಿಗಳನ್ನು ತೆಗಿಬೇಕು. ಛಾವಣಿ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಬೇಕು. ಸರಿ ಅಲ್ವಾ ಹಸಿರೇ ಉಸಿರು ಎಂಬಂತೆ ನೀರು ಮತ್ತು ಪರಿಸರವನ್ನು ಕಾಪಾಡೋಣ.
9ನೇ ತರಗತಿ
ಹೋಲಿ ರೆಡೀಮೆರ್ ಸ್ಕೂಲ್
ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ
******************************************
ತಣ್ಣನೆಯ ಗಾಳಿ ಬೀಸಿ, ಮೋಡಗಳೆಲ್ಲ ಜೊತೆಗೂಡಿದಾಗ ಮಳೆ ಬರುತ್ತದೆ. ನನಗೆ ವಸತಿ ನಿಲಯಲದಲ್ಲಿ ಮಳೆ ಬಂದಾಗ ಕಿಟಕಿ ತೆರೆದು ನೋಡುವುದೆಂದರೆ ಬಲು ಇಷ್ಟ. ಎಲ್ಲೆಡೆ ತಂಪಾದ ವಾತಾವರಣ ತುಂಬಿಕೊಂಡಿರುತ್ತದೆ. ಸ್ವಚ್ಛಂದ ವಾದ ಗಾಳಿ, ಹಚ್ಚ ಹಸುರಾಗಿ ತೂಗಾಡುತ್ತಿರುವ ಮರ -ಗಿಡ ಗಳನ್ನು ನಾವು ಮಳೆ ಬಂದ ನಂತರ ಕಾಣಬಹುದು. ಪ್ರಕೃತಿಯೇ ಬದಲಾದ ಹಾಗೆ ಅನಿಸುತ್ತದೆ. ಜೋರಾದ ಮಳೆಗೆ ಮರ ಗಿಡಗಳು ತಲೆ ಬಾಗಿ ಗೌರವ ನೀಡುವಂತಿರುತ್ತದೆ ಹಾಗೂ ಮಳೆಗೆ ಗಿಡ ಮರಗಳು ಸಂಭ್ರಮದಿಂದ ಕುಣಿಯುವ ನೋಟವನ್ನು ನೋಡಲು ಕಿಟಕಿ ತೆರೆದೆ ಇರುತ್ತೇನೆ. ನಮಗೆ ದೂರದಿಂದಲೇ ಮಳೆ ಬರುವುದು ಕಾಣಿಸುತ್ತದೆ. ಆ ಸೌಂದರ್ಯವನ್ನು ಮಾತ್ರ ಬರಹ ರೂಪದಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮರಗಳಡಿ ನಿಂತಾಗ ಮುತ್ತಿನಂತೆ ಮಳೆಯ ಹನಿಗಳು ಬೀಳುವಾಗ ಮೈ ಜುಮ್ಮೆನ್ನಿಸುತ್ತದೆ. ನಾವು ವಸತಿ ನಿಲಯದಲ್ಲಿರುವ ಕಾರಣ ನಮಗೆ ಅಷ್ಟೊಂದು ರಜೆಗಳನ್ನು ನೀಡುತ್ತಿರಲಿಲ್ಲ. ಹಾಗಾಗಿ ನಮಗೆ ಮಳೆಯಲ್ಲಿ ಆಟವಾಡುವ ಅವಕಾಶ ಸಿಗುತ್ತಿತ್ತು. ಮಳೆಯ ನೀರು ದಾರಿಯಲ್ಲಿ ಹರಿಯುವಾಗ ಪೇಪರ್ ದೋಣಿ ಬಿಟ್ಟದ್ದುಂಟು.
ಇಂದಿನ ಮಳೆಯ ಅನುಭವವನ್ನು ಎಂದಿಗೂ ಮರೆಯುವುದಿಲ್ಲ ಹಾಗೂ ನನಗೆ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ತುಂಬಾ ಖುಷಿಯಾಗಿದೆ.
9ನೇ ತರಗತಿ
ಮೊರಾರ್ಜಿ ದೇಸಾಯಿ ವಸತಿ ಶಾಲೆ ವಗ್ಗ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನೆನೆಯುತ ಬಂದೆನು ಚಳಿಯಲಿ
ಮುಂಜಾನೆ ಮಲಗಿದ್ದೆ ಜ್ವರದಲಿ
ಮಧ್ಯಾಹ್ನ ಹೋಗಿದ್ದೆ ವೈದ್ಯನಲಿ
ಮನೆಗೆ ಬಂದೆ ಬಸ್ಸಿನಲಿ
ಸನವ ಮಾಡಿದೆ ಬಿಸಿ ನೀರಲ್ಲಿ
ಊಟ ಮಾಡಿದೆ ಮೊಸರಲ್ಲಿ
ಮಲಗಿದೆ ಹೋಗಿ ಬೆಡ್ಡಿನಲಿ
ಹೊರಗೆ ಜೋರಾದ ಮಳೆಯಲ್ಲಿ ನಾನು ನೆನೆದುಕೊಂಡು ಮನೆಗೆ ಬಂದೆ. ಬಂದೊಡನೆ ನನ್ನ ಅಣ್ಣ ಕೇಳಿದ ಯಾಕೆ ಛತ್ರಿ ತೆಗೆದುಕೊಂಡು ಹೋಗಲಿಲ್ಲ. ಅಕ್ಕ ಹೇಳಿದಳು ಮಳೆ ನಿಲ್ಲುವ ತನಕ ಅಲ್ಲೇ ನಿಲ್ಲಬಾರದಿತ್ತೆ. ಅಲ್ಲೇ ಕುಳಿತಿದ್ದ ತಂದೆ ಹೀಗೆ ಒದ್ದೆಯಾಗು, ಶೀತ ಆದಾಗ ಗೊತ್ತಾಗುತ್ತೆ ಅಂದರು. ಇವರೆಲ್ಲರ ಮಾತು ಕೇಳಿ ಒಳಗೆ ಹೋದೆ. ಅಮ್ಮನನ್ನು ನೋಡಿದ ತಕ್ಷಣ ಟವಲ್ ತಂದು ನನ್ನ ತಲೆ ಒರೆಸುತ್ತಾ ಹಾಳಾದ ಮಳೆ ನನ್ನ ಮಗು ಮನೆಗೆ ಬಂದು ತಲುಪಿದ ನಂತರ ಬರಬಾರದಿತ್ತೆ ಎಂದು ಮಳೆಗೆ ಬಯ್ಯ ತೊಡಗಿದಳು.
4ನೇ ತರಗತಿ
ಪಿ ಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆ ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************