ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 33
Tuesday, June 18, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 33
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.... ಅಮೀಬಾದಂತಹ ಏಕ ಕೋಶಿಕ ಜೀವಿಗಳಲ್ಲಿ ಜೀರ್ಣ ಕ್ರಿಯೆ ಹೇಗಾಗುತ್ತದೆ ಎಂದು ತಿಳಿದೆವು. ಅಲ್ಲಿಂದ ನಾವು ಬಹುಕೋಶೀಯ ಜೀವಿಗಳಿಗೆ ಬಂದಾಗ ಪರಿಸ್ಥಿತಿಯನ್ನು ನಾವು ಅವಲೋಕಿಸೋಣ. ನೀವು ಹೈಡ್ರಾ, ಲೋಳೆ ಮೀನು, ಹವಳದಂತಹ ಸೀಲಿಂಟರೇಟಾಗಳಿಗೆ (ಕುಟುಕು ಕಣ ಜೀವಿಗಳಿಗೆ) ಬಂದಾಗ ಆಹಾರವು ಒಂದು ಖಾಲಿ ಜಾಗದೊಳಗೆ ತಳ್ಳಲ್ಪಡುತ್ತದೆ. ಇದನ್ನು ಗ್ಯಾಸ್ಟ್ರೋ ವ್ಯಾಸ್ಕ್ಯುಲರ್ ಕ್ಯಾವಿಟಿ (gastro vascular cavity) ಎನ್ನುತ್ತೇವೆ. ಇದೊಂದು ಗೋಣಿ ಚೀಲದ ಹಾಗೆ ತುಂಬಿಸಲು ಮತ್ತು ಹೊರ ಸುರಿಯಲು ಒಂದೇ ಬಾಯಿ. ಅಂದರೆ ಬಾಯಿ ಮತ್ತು ಗುದದ್ವಾರ ಒಂದೇ. ಆಹಾರವನ್ನು ಹೊಂದಿರುವ ಈ ಖಾಲಿ ಜಾಗದ ಒಳಗೆ ಜೀರ್ಣ ಕಿಣ್ವಗಳನ್ನು ಸುರಿದು ಆಹಾರವನ್ನು ಜೀರ್ಣಮಾಡಿ ಹೀರಿಕೊಳ್ಳುತ್ತದೆ. ಅಲ್ಲಿಂದ ಮುಂದಕ್ಕೆ ಅಂದರೆ ನೀವು ಚಪ್ಪಟೆ ಹುಳುಗಳಿಗೆ ಬಂದಾಗ ಆಹಾರ ಒಂದು ನಳಿಕೆಯ ಒಳಗೆ ಚಲಿಸುತ್ತದೆ. ಇದರ ಒಳ ಹೋಗುವ ದ್ವಾರ ಬಾಯಿ. ಹೊರ ಹೋಗುವ ದ್ವಾರ ಗುದದ್ವಾರ. ದೇಹದ ಒಳಗೊಂದು ನಳಿಕೆಯನ್ನು ತೂರಿಸಿದ ಹಾಗೆ. ಜೀರ್ಣ ಕ್ರಿಯೆ ನಡೆಯುವುದು ದೇಹದ ಒಳಗಲ್ಲ ಬದಲಾಗಿ ಆ ನಳಿಕೆಯ ಒಳಗೆ. ನಿಮ್ಮ ಬಾಲ್ ಪಾಯಿಂಟ್ ಪೆನ್ ಇರುತ್ತದಲ್ಲ ಹಾಗೆ. ಜೀರ್ಣ ಕ್ರಿಯೆ ನಡೆಯುವುದು ನಿಮ್ಮ ಬಾಲ್ ಪಾಯಿಂಟ್ ಪೆನ್ ನ ಒಳಗಲ್ಲ ಬದಲಾಗಿ ಆ ಪೆನ್ ನ ರಿಫಿಲ್ ಒಳಗೆ. ಈ ಪಚನ ಕ್ರಿಯೆ ನಡೆಯುವ ನಳಿಕೆಯೇ ಜೀರ್ಣ ನಾಳ (elementary canal). ಇದಕ್ಕೆ ಪೂರಕವಾಗಿ ಒಂದಷ್ಟು ಗ್ರಂಥಿಗಳಿರಬಹುದು (glands) ಅಷ್ಟೇ. ಮಾನವನಲ್ಲಿ ಕೂಡಾ ಇದು ಇಷ್ಟೇ ಸರಳ. ಹಾಗಾದರೆ ಮಾನವನಲ್ಲಿ ಇದು ಹೇಗಿದೆ ಒಮ್ಮೆ ನೋಡಿ ಬಿಡೋಣ.
ನಾವು ನಮ್ಮ ಬಾಯಿಯ ಮೂಲಕ ಆಹಾರವನ್ನು ಒಳ ತೆಗೆದುಕೊಳ್ಳುತ್ತೇವೆ. ಬಾಯಿ ಕುಹರದೊಳಗಿರುವ ಹಲ್ಲುಗಳು ಈ ಆಹಾರವನ್ನು ಅರೆದರೆ ನಾಲಿಗೆ ಹಲ್ಲಿನ ಕಡೆಗೆ ಆಹಾರವನ್ನು ದೂಡುತ್ತದೆ. ಬಾಯಿಯಲ್ಲಿರುವ ಮೂರು ಜೊತೆ ಲಾಲಾ ಗ್ರಂಥಿಗಳು ಸ್ರವಿಸುವ ಲಾಲಾರಸ (saliva) ಆಹಾರವನ್ನು ಒದ್ದೆ ಮಾಡಿ ಅನ್ನನಾಳದಲ್ಲಿ ಸರಾಗವಾಗಿ ಚಲಿಸುವಂತೆ ಮಾಡುತ್ತದೆ. ಅಲ್ಲದೇ ಲಾಲಾರಸದಲ್ಲಿರುವ ಅಮೈಲೇಸ್ (salivary amylase) ಪಿಷ್ಟವನ್ನು ಸಕ್ಕರೆಯಾಗಿ ಜೀರ್ಣಿಸಲು ಶುರು ಮಾಡುತ್ತದೆ. ಆದುದರಿಂದಲೇ ಅವಲಕ್ಕಿ ಜಗಿದ ಹಾಗೆ ಅವು ಸಿಹಿ ಅನ್ನಿಸುವುದು. ಬಾಯಿಯ ಕುಹರದಲ್ಲಿರುವ ಅರೆದ ಆಹಾರ ಅನ್ನನಾಳದ ಮೂಲಕ ಜಠರವನ್ನು ತಲುಪುತ್ತದೆ. ಈ ಆಹಾರದ ಚಲನೆ ಜಠರದ ಕಡೆಗೆ ಮಾತ್ರ. ಜಠರ ಸ್ನಾಯಯುಕ್ತವಾದ ಚೀಲ. ಇದರ ಪ್ರಬಲ ಮಾಂಸಖಂಡಗಳು ಆಹಾರವನ್ನು ಮತ್ತಷ್ಟು ಅರೆದು ತೆಳುವಾದ ಪೇಸ್ಟನ್ನಾಗಿಸುತ್ತವೆ. ಜಠರ ಜಠರ ರಸವನ್ನು ಸೃವಿಸುತ್ತದೆ. ಈ ಜಠರ ರಸದಲ್ಲಿ ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ, ಶ್ಲೇಷ್ಮ (mucus) ಮತ್ತು ಪೆಪ್ಸಿನ್ ಎಂಬ ಕಿಣ್ವವನ್ನು ಸೃವಿಸುತ್ತದೆ. ಹೈಡ್ರೋಕ್ಲೋರಿಕ್ ಆಮ್ಲ ಆಹಾರದ ರೋಗಾಣುಗಳನ್ನು ನಾಶಪಡಿಸುತ್ತದೆ. ಪ್ರೋಟೀನುಗಳನ್ನು ಜೀರ್ಣಿಸುವ ಕಿಣ್ವವಾದ ಪೆಪ್ಸಿನ್ ಕೆಲಸ ಮಾಡಬೇಕಾದರೆ ಆಮ್ಲೀಯ ಮಾಧ್ಯಮ ಬೇಕು. ಆದ್ದರಿಂದಲೇ ಹೈಡ್ರೋಕ್ಲೋರಿಕ್ ಆಮ್ಲ ಬೇಕು. ನಿಮಗೆ ಅಜೀರ್ಣವಾದಾಗ ಅಮ್ಮ ಮಜ್ಜಿಗೆ ಅಥವಾ ಲಿಂಬೆರಸ ಕುಡಿಸುವುದು ಏಕೆ ಅಂತ ಗೊತ್ತಾಯ್ತಾ?. ಈ ಅಮ್ಲ ಜಠರದ ಸ್ನಾಯುಗಳ ಮೇಲೆ ವರ್ತಿಸಬಹುದು ಅಥವಾ ಪೆಪ್ಸಿನ್ ಕಿಣ್ವ ಪ್ರೋಟೀನ್ ಗಳಿಂದಾದ ಸ್ನಾಯುಗಳನ್ನು ಜೀರ್ಣಿಸುತ್ತದೆ. ಇದೇ ಜಠರದ ಹುಣ್ಣು (gastric ulcer). ಇದನ್ನು ತಪ್ಪಿಸಲು ಜಠರ ರಸದಲ್ಲಿ ಶ್ಲೇಷ್ಮ ಇರುವುದು. ಇದು ಜಠರದ ಗೋಡೆಗೆ ಹೊದಿಕೆಯಾಗಿ ಅದನ್ನು ರಕ್ಷಿಸುತ್ತದೆ. ಜಠರವನ್ನು ಪ್ರವೇಶಿಸುವ ಎಲ್ಲಾ ಪ್ರೋಟೀನ್ ಗಳೂ ಜಠರದಲ್ಲಿ ಜೀರ್ಣವಾಗಲು ಶುರುವಾಗುತ್ತದೆ. ಪ್ರೋಟೀನ್‌ಗಳಾಗಿರುವ ಹಾವಿನ ವಿಷವನ್ನು ನೀವು ಕುಡಿದಿರಿ ಎಂದಿಟ್ಟುಕೊಳ್ಳೋಣ ನಿಮ್ಮ ಬಾಯಿ ಮತ್ತು ಜಠರದಲ್ಲಿ ಯಾವುದೇ ಹುಣ್ಣುಗಳಿಲ್ಲದಿದ್ದರೆ ನಿಮಗೆ ಏನೂ ಅಪಾಯವಾಗುವುದೇ ಇಲ್ಲ. ಅದಕ್ಕೆ ಸಮುದ್ರ ಮಥನ ಕಾಲದಲ್ಲಿ ಬಂದ ಹಾಲಾಹಲವನ್ನು ಶಿವ ಆಪೋಷಿಸಿದ್ದು. ಪಾಪ ಈ ವೈಜ್ಞಾನಿಕ ಅಂಶ ಪಾರ್ವತಿಗೆ ಗೊತ್ತಿರಲಿಲ್ಲ. ಅವಳು ತನ್ನ ಗಂಡನಿಗೆ ಅಪಾಯವಾಗಬಾರದೆಂದು ಆತನ ಕುತ್ತಿಗೆ ಒತ್ತಿ ಹಿಡಿದಳು. ಪಾಪ ಆತ ನೀಲಕಂಠನಾದ. ಜಠರದಲ್ಲಿ ಅರೆದ ಅರೆ ಜೀರ್ಣವಾದ ಆಹಾರ ಡುಯೋಡಿನಂ ಮೂಲಕ ಹಾದು ಸಣ್ಣ ಕರುಳಿಗೆ ಬರುತ್ತದೆ. ಇಲ್ಲಿ ಸೇರಿಸಲ್ಪಡುವ ಪಿತ್ಥರಸ ಪ್ರತ್ಯಾಮ್ಲೀಯ ವಾಗಿದ್ದು ಹೈಡ್ರೋಕ್ಲೋರಿಕ್ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಇದರಿಂದ ಟ್ರಪ್ಸಿನ್ ಕಿಣ್ವ ತನ್ನ ಕೆಲಸ ಮಾಡುವುದು ಸಾಧ್ಯವಾಗುತ್ತದೆ. ಹಾಗೆಯೇ ಪಿತ್ಥರಸ ಕೊಬ್ಬನ್ನು ನೀರಿನಲ್ಲಿ ಕರಗುವಂತೆ ಮಾಡುತ್ತದೆ. ಇದರೊಂದಿಗೆ ಮೇದೋಜೀರಕ ಗ್ರಂಥಿಯಿಂದ ಬರುವ ಟ್ರಿಪ್ಸಿನ್ ಪ್ರೋಟೀನ್‌ಗಳನ್ನು ಜೀರ್ಣಿಸಿದರೆ ಮೇದೋಜೀರಕದ ಅಮೈಲೇಸ್ ಶರ್ಕರ ಪಿಷ್ಟಗಳನ್ನೂ ಮತ್ತು ಲೈಪೇಸ್ ಕೊಬ್ಬನ್ನೂ ಜೀರ್ಣಿಸುತ್ತದೆ. ಕರುಳಿನ ರಸದಲ್ಲಿರುವ ಕಾರ್ಬಾಕ್ಸಿಪೆಪ್ಟಿಡೇಸ್ ಪಾಲಿಪೆಪ್ಟೈಡ್ಗಳನ್ನು ಅಮೈನೋ ಆಮ್ಲಗಳಾಗಿ ಒಡೆಯುತ್ತದೆ. ಇಲ್ಲಿ ಜೀರ್ಣ ಕ್ರಿಯೆ ಪೂರ್ಣ. ಇನ್ನು ಏನಿದ್ದರೂ ಹೀರಿಕೊಳ್ಳುವುದು. ಇದನ್ನು ಸಣ್ಣ ಕರುಳಿನ ಗೋಡೆ ಮಾಡುತ್ತದೆ. ಆಹಾರದ ಘಟಕಗಳನ್ನು ಹೀರಿಕೊಂಡ ಜೀರ್ಣವಾಗದ ಆಹಾರ ದೊಡ್ಡ ಕರುಳಿಗೆ ನೂಕಲ್ಪಡುತ್ತದೆ. ದೊಡ್ಡ ಕರುಳು ಜೀರ್ಣವಾಗದ ಆಹಾರದಲ್ಲಿರುವ ನೀರನ್ನು ಮಾತ್ರ ಹೀರಿಕೊಳ್ಳುತ್ತದೆ. ಹೀಗೆ ಉಳಿದ ಚರಟವೇ ಮಲ. ಮಲಕೂಪದಲ್ಲಿ (rectum) ಸಂಗ್ರವಾಗುವ ಮಲ ದೇಹದಿಂದ ಹೊರ ಹಾಕಲ್ಪಟ್ಟರೆ ಜೀರ್ಣ ಕ್ರಿಯೆ ಮುಗಿದ ಹಾಗೆ. ಇದು ಸುದೀರ್ಘವಾದ ಆಹಾರದ ಜೀರ್ಣ ಯಾತ್ರೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************