-->
ಹಕ್ಕಿ ಕಥೆ : ಸಂಚಿಕೆ - 92

ಹಕ್ಕಿ ಕಥೆ : ಸಂಚಿಕೆ - 92

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
               
               ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ..
     ಕಳೆದ ವಾರವಷ್ಟೇ ಚಾಂದ್ರಮಾನ ಯುಗಾದಿ ಆಯ್ತಲ್ಲ, ಹೀಗೇ ಹತ್ತು ವರ್ಷದ ಹಿಂದೆ ಇದೇ ಚಾಂದ್ರಮಾನ ಯುಗಾದಿ ವಾರದ ಮಧ್ಯೆ ಬಂದಿತ್ತು. ನಮ್ಮ ಮನೆಯಲ್ಲಿ ಸೌರಮಾನ ಯುಗಾದಿ ಆಚರಣೆ ಇರುವುದರಿಂದ ಹಬ್ಬಕ್ಕಾಗಿ ಮನೆಗೆ ಬಂದುಹೋಗುವ ಅವಸರವೂ ಇರಲಿಲ್ಲ. ಎಲ್ಲಾದರೂ ಚಾರಣ ಹೋಗೋಣ ಎಂಬ ಯೋಚನೆ ಬಂತು. ಚಾರಣ ಹೋಗುವಾಗ ಎಂದರೆ ಯಾರಾದರೂ ಜೊತೆಗಿದ್ದರೆ ಚೆನ್ನಾಗಿರುತ್ತದೆ ಎಂದು ಹಲವರನ್ನು ಕೇಳಿದೆ. ಎಲ್ಲರೂ ಹಬ್ಬದ ಬಿಜಿಯಲ್ಲಿದ್ದರು. ನಮ್ಮ ಶಾಲಾ ಚಿತ್ರಕಲಾ ಶಿಕ್ಷಕರಾದ ಸಲೀಂ ಸರ್ ನಾನು ಬರುತ್ತೇನೆ ಎಂದು ಉತ್ಸಾಹದಿಂದಲೇ ಒಪ್ಪಿದರು.  ಸಂಸೆಯಿಂದ ಎಳನೀರು ಜಲಪಾತ ಸಿಗುವ ಮಾರ್ಗದಲ್ಲಿ ನಡೆದು ದಿಡುಪೆ ಸೇರುವುದು ನಮ್ಮ ಗುರಿಯಾಗಿತ್ತು. ಬೇಸಗೆಯಲ್ಲಿ ಜೀಪ್ ಮಾತ್ರ ಕಷ್ಟದಲ್ಲಿ ಹೋಗುವ ದಾರಿ, ಆನೆಗಳು ತಿರುಗಾಡುತ್ತವೆ ಸ್ವಲ್ಪ ಎಚ್ಚರವಾಗಿರಿ ಎಂದು ಹೇಳಿದ್ದರು. ಆದ್ದರಿಂದ ಅರಣ್ಯ ಇಲಾಖೆಯ ಅನುಮತಿ ಪಡೆದೇ ಹೊರಟಿದ್ದೆವು. ಕಳಸದಲ್ಲಿ ತಿಂಡಿ ತಿಂದು ಮಧ್ಯಾಹ್ನಕ್ಕೆ ಬೇಕಾದಷ್ಟು ಚಪಾತಿ ಕಟ್ಟಿಕೊಂಡು ಕ್ಯಾಮರಾ ಮೊದಲಾದ ಸಲಕರಣೆಗಳನ್ನು ತೆಗೆದುಕೊಂಡು ಸಂಸೆ ಕಡೆಗೆ ಹೋಗುವ ಬಸ್ಸಿಗಾಗಿ ಕಾಯುತ್ತ ನಿಂತೆ. ಸಲೀಂಸರ್ ಕೂಡಾ ತಯಾರಾಗಿ ಬಂದಿದ್ದರು. ಬಸ್ ಹತ್ತಿ ಸಂಸೆಯಲ್ಲಿ ಇಳಿದು ಐಟಿಐ ಕಾಲೇಜಿನ ಮಾರ್ಗವಾಗಿ ಎಳನೀರು ಘಾಟಿಯ ಕಡೆ ನಡೆಯಲಾರಂಭಿಸಿದೆವು. ಸುಮಾರು ಎರಡು ಕಿಲೋಮೀಟರ್ ನಡೆದಮೇಲೆ ದಾರಿ ಎರಡು ಪಾಲಾಗುತ್ತದೆ. ಒಂದು ಗುತ್ಯಡ್ಕದ ಕಡೆ ಇನ್ನೊಂದು ಎಳನೀರಿನ ಕಡೆ. ಎಳನೀರು ಜಲಪಾತದ ದಾರಿ ಹಿಡಿದೆವು. ನಿಧಾನಕ್ಕೆ ಇಳಿಜಾರು ಮಾರ್ಗ, ಕೆಳಗೆ ಆಳವಾದ ಕಣಿವೆ, ಆ ಕಣಿವೆಗಳಿಂದ ಎದ್ದು ಸೂರ್ಯನನ್ನು ನೋಡಲು ಮೇಲೇರಿ ಬಂದ ದೊಡ್ಡ ಮರಗಳು. ಬೆಳಗಿನ ಚಂದದ ಬಿಸಿಲು ಅವುಗಳ ಎಡೆಯಿಂದ ಹೊರಟು ಚಂದದ ಚಪ್ಪರ ಮಾಡಿದ್ದವು. ಹಕ್ಕಿಗಳ ಚಿಲಿಪಿಲಿ ಜೋರಾಗಿಯೇ ಇತ್ತು. ಅಷ್ಟರಲ್ಲಿ ತುಂಬ ಪರಿಚಿತವಾದ ಹಕ್ಕಿಯೊಂದರ ಧ್ವನಿ. ಜೋರಾಗಿ ಕೂಗುತ್ತಾ ನಮ್ಮ ಕಡೆಗೆ ಬರುವುದು ಕೇಳಿಸಿತು. ಕಣಿವೆಯ ಇಳಿಜಾರಿನಲ್ಲಿ ನಡೆಯುತ್ತಿದ್ದ ನಮ್ಮ ಮುಂದಿನ ದೊಡ್ಡ ಮರದ ಕೊಂಬೆಯ ಮೇಲೆ ಎರಡು ಹಕ್ಕಿಗಳು ಬಂದು ಕುಳಿತವು. ನೋಡಲು ಊರಿನಲ್ಲಿ ಸಾಮಾನ್ಯವಾಗಿ ಕಾಣಸಿಗುವ ಮಠಪಕ್ಷಿ ಅಥವಾ ಕುದುಗನ ಹಕ್ಕಿಯನ್ನೇ ಹೋಲುತ್ತಿತ್ತು. ಆದರೆ ಮೈಬಣ್ಣ, ಗಾತ್ರದಲ್ಲಿ ಬಹಳ ವ್ಯತ್ಯಾಸ ಇತ್ತು. ಬಹಳ ಚಂದದ ಬಿಳೀ ಬಣ್ಣದ ದೇಹ. ಒಲೆಯೊಳಗೆ ತಲೆ ಹಾಕಲು ಹೋಗಿ ಸುಟ್ಟುಕೊಂಡಂತೆ ಕಪ್ಪುಬಣ್ಣದ ಮುಖ, ಇಡೀ ದೇಹದ ಅರ್ಧದಷ್ಟಕ್ಕೂ ಹೆಚ್ಚು ಉದ್ದದ ಬಾಲ. ಬಿಳೀ ಬಣ್ಣದ ಬಾಲದ ತುದಿಯಲ್ಲಿ ಕಪ್ಪು ಬಣ್ಣ, ಬೆನ್ನಿನ ಭಾಗ ಚಂದದ ಕಂದುಬಣ್ಣ. ರೆಕ್ಕೆಗಳ ಹೊಳೆಯುವ ಕಪ್ಪು ಬಣ್ಣದ ನಡುವೆ ಬಿಳೀ ಮಚ್ಚೆ. ಇಡೀ ದೇಹ ಸುಮಾರು ಅರ್ಧ ಮೀಟರ್ ಆಗಬಹುದಾದಷ್ಟು ಉದ್ದ. ಅಚ್ಚ ಹಸುರಿನ ಕಾಡಿನ ನಡುವೆ ಈ ಹಕ್ಕಿಯ ಬಣ್ಣ ನೋಡುವುದು ಬಹಳ ಸೊಗಸಾಗಿತ್ತು.
        ಅದರ ಫೋಟೋವನ್ನು ನಮ್ಮ ಪಕ್ಷಿವೀಕ್ಷಕರ ಗುಂಪಿನಲ್ಲಿ ಹಾಕಿದಾಗ ತಿಳಿದದ್ದು ಇದು ಗೋವಾದಿಂದ ಕೇರಳದವರೆಗಿನ ಪಶ್ಚಿಮಘಟ್ಟದ ಎತ್ತರವಾದ ಪ್ರದೇಶದ ಕಾಡುಗಳಲ್ಲಿ ಮಾತ್ರ ನೋಡಲು ಸಿಗುವ ಹಕ್ಕಿ. ಈ ಹಕ್ಕಿ ನೋಡುತ್ತ ಸುಮಾರು ಹೊತ್ತು ಹೋದದ್ದೇ ತಿಳಿಯಲಿಲ್ಲ. ಅಲ್ಲಿಂದ ಮುಂದೆ ಹೀಗೇ ಚಂದದ ಕಾಡು ನೋಡುತ್ತ ಸುರಕ್ಷಿತವಾಗಿ ದಿಡುಪೆ ತಲುಪಿ, ಅಲ್ಲಿಂದ ಬೆಳ್ತಂಗಡಿಗೆ ಬಂದು ಬಸ್ಸಿನಲ್ಲಿ ಮರಳಿ ಕಳಸ ತಲುಪಿದಾಗ ರಾತ್ರಿಯಾಗಿತ್ತು. ಆದರೆ ಕಾಡಿನಲ್ಲಿ ಮಾತ್ರ ನೋಡಲು ಸಿಗುವ ಅಪರೂಪದ ಹಕ್ಕಿ ನೋಡಿದ ಸಂತೋಷ ಇನ್ನೂ ಕಣ್ಣಮುಂದೆ ಕಟ್ಟಿದಂತಿದೆ.
ಕನ್ನಡ ಹೆಸರು: ಬಿಳೀ ಹೊಟ್ಟೆಯ ಮಠಪಕ್ಷಿ
ಇಂಗ್ಲೀಷ್ ಹೆಸರು: White-Bellied Treepie
ವೈಜ್ಞಾನಿಕ ಹೆಸರು: Dendrocitta leucogastra
ಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************Ads on article

Advertise in articles 1

advertising articles 2

Advertise under the article