ಶಿಕ್ಷಕ ಎಂದರೆ ಶಿಕ್ಷಿಸುವವನಲ್ಲ... ಶಿಕ್ಷಣ ಕಲಿಸುವವನು... ಲೇಖಕರು : ಇಸ್ಮತ್ ಪಜೀರ್
Monday, October 3, 2022
Edit
ಪೆರ್ನಪಾಡಿ ಮನೆ , ಪಜೀರು ಅಂಚೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳ ಮೇಲೆ ಹಿರಿಯರು ದೈಹಿಕ ಹಿಂಸೆ ನಡೆಸುವುದು ಮಕ್ಕಳ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂಬ ಕಾನೂನಿದೆಯಾದರೂ ಇಂದಿಗೂ ಕೆಲವೊಂದು ಶಾಲೆ ಮತ್ತು ಮದ್ರಸಾಗಳಲ್ಲಿ ಮಕ್ಕಳಿಗೆ ಹೊಡೆಯುವ ಪರಿಪಾಠ ಮುಂದುವರಿದಿದೆ. ಶಿಕ್ಷಕರು ಮಕ್ಕಳನ್ನು ಹಿಂಸಿಸುವುದರಿಂದ ಮಕ್ಕಳಿಗೆ ಶಿಕ್ಷಕರ ಬಗ್ಗೆ ಗೌರವ ಭಾವ ಹುಟ್ಟುವುದಿಲ್ಲ. ಶಿಕ್ಷಕರೆಂದ ಕೂಡಲೇ ಭಯ ಹುಟ್ಟುತ್ತದೆ. ಅತಿಯಾದರೆ ಶಿಕ್ಷಕರ ಮೇಲೆ ಮಕ್ಕಳಿಗೆ ದ್ವೇಷವೂ ಬೆಳೆಯುತ್ತದೆ...!!
ಇದು ಹೆತ್ತವರಿಗೂ ಅನ್ವಯವಾಗುತ್ತದೆ. ಯಾವುದನ್ನೇ ಆದರೂ ಪ್ರೀತಿಯಿಂದ ತಿಳಿ ಹೇಳಿದರೆ ಮಕ್ಕಳು ಬೇಗನೇ ವಿಷಯವನ್ನು ಗ್ರಹಿಸುತ್ತಾರೆ. ಬೆತ್ತದ ಭಯದಿಂದ ಕಲಿತದ್ದು ಶಿಕ್ಷಕರ ಮುಖಾಮುಖಿ ಪ್ರಶ್ನೆಗೆ ಉತ್ತರಿಸುವಷ್ಟು ಕಾಲ ಮಾತ್ರ ಮಕ್ಕಳ ಬಾಯಲ್ಲಿ ಉಳಿಯುತ್ತದೆ. ಭಯಕ್ಕೆ ಬಿದ್ದ ಮಕ್ಕಳಿಗೆ ವಿಷಯವನ್ನು ಮನನ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಬಾಯಿಪಾಠ ಮಾಡಿ ಶಿಕ್ಷಕರ ಪ್ರಶ್ನೆಗೆ ಗಿಣಿಪಾಠ ಒಪ್ಪಿಸುತ್ತಾರೆ. ಬಾಯಿ ಪಾಠ ಮಾಡಿದ್ದು ಮಕ್ಕಳಿಗೆ ಅವರ ಬದುಕಲ್ಲಿ ನೆನಪುಳಿಯುವುದಿಲ್ಲ. ಮನನ ಮಾಡಿದ್ದು ಮನಸಲ್ಲಿ ಅಚ್ಚೊತ್ತಿ ಉಳಿದು ಬಿಡುತ್ತದೆ.
ನಮ್ಮ ಅನೇಕ ಹೆತ್ತವರು ಮಕ್ಕಳಿಗೆ ಶಿಕ್ಷಕರು ಹೊಡೆಯದೇ ಮತ್ತೆ ಯಾರು ಹೊಡೆಯುವುದು.? ಹೊಡೆಯುವುದು ಬುದ್ಧಿಗಲ್ಲವೇ..? ನಾವೇನು ಶಿಕ್ಷಕರಿಂದ ಪೆಟ್ಟು ತಿಂದಿಲ್ಲವೇ..? ಇನ್ನು ಕೆಲವು ಹೆತ್ತವರು ಮಕ್ಕಳಿಗೆ ಶಿಕ್ಷಕರು ಹೊಡೆದರೆ ಶಿಕ್ಷಕರೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ. ಇವೆರಡೂ ತಪ್ಪು. ಮಕ್ಕಳಿಗೆ ಒಮ್ಮೆ ಮೆತ್ತಗೆ ಹೊಡೆದರೆಂದ ಮಾತ್ರಕ್ಕೆ ರಾದ್ಧಾಂತ ಮಾಡಲೂ ಬಾರದು. ಮಕ್ಕಳಿಗೆ ಶಿಕ್ಷಣವೆಂದರೆ ಶಿಕ್ಷೆ ಎಂಬ ಭಾವ ಬರುವಷ್ಟರ ಮಟ್ಟಿಗೆ ಹೆತ್ತವರು ಮಕ್ಕಳಿಗಾಗುತ್ತಿರುವ ದೈಹಿಕ ಹಿಂಸೆಯ ಬಗ್ಗೆ ತಾತ್ಸಾರ ತಾಳಲೂಬಾರದು.
ಮಕ್ಕಳಿಗೆ ಶಿಕ್ಷಕರಿಂದ ದೈಹಿಕ ಹಿಂಸೆಯಾಗುತ್ತದೆಂದು ತಿಳಿದರೆ ಹೆತ್ತವರು ಮೊದಲು ಮಕ್ಕಳು ಮಾಡಿರಬಹುದಾದ ತಪ್ಪೇನೆಂದು ಮಕ್ಕಳಿಂದಲೇ ಅರಿತುಕೊಳ್ಳುವ ಯತ್ನ ಮಾಡಬೇಕು. ಮಕ್ಕಳಿಂದಾಗಿರುವ ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಹೆತ್ತವರು ಮಕ್ಕಳನ್ನು ಪ್ರೀತಿಯಿಂದ ತಿದ್ದಬೇಕು. ವಾಸ್ತವದಲ್ಲಿ ಇದು ಶಿಕ್ಷಕರೇ ಮಾಡಬೇಕಾದ ಕೆಲಸ. ಶಿಕ್ಷಕರು ಅದನ್ನು ಮಾಡದೇ ಇದ್ದಾಗ ಹೆತ್ತವರಾದರೂ ಮಾಡಬೇಕು. ಯಾಕೆಂದರೆ ಯಾರೂ ಮಾಡದಿದ್ದರೆ ಅದರ ಅಂತಿಮ ಪರಿಣಾಮವಾಗುವುದು ಮಕ್ಕಳ ಮುಗ್ಧ ಮನಸ್ಸಿನ ಮೇಲೆ. ಹೆತ್ತವರು ಶಿಕ್ಷಕರನ್ನು ಭೇಟಿಯಾಗಿ ವಿಷಯ ಮನವರಿಕೆ ಮಾಡಿಕೊಡಬೇಕು. ಆದರೆ ಯಾವತ್ತೂ ಹೆತ್ತವರು ತಮ್ಮ ಮಕ್ಕಳ ಮುಂದೆ ಮಕ್ಕಳ ಶಿಕ್ಷಕರನ್ನು ಗದರಬಾರದು. ಅದರಿಂದ ಶಿಕ್ಷಕರ ಆತ್ಮಗೌರವಕ್ಕೆ ಪೆಟ್ಟು ಬೀಳುತ್ತದೆ, ಮತ್ತು ಮಕ್ಕಳು ತಮ್ಮ ಹೆತ್ತವರು ತಮ್ಮ ಪರವಾಗಿ ವಾದಿಸುತ್ತಾರೆಂಬ ಧೈರ್ಯ ಬೆಳೆಸಿ ಮಾಡಿದ ತಪ್ಪುಗಳನ್ನು ಪುನರಾವರ್ತಿಸುವ ಸಾಧ್ಯತೆಯೂ ಇದೆ...!!
ಮಕ್ಕಳಿಗೆ ಬುದ್ಧಿಗಾಗಿ, ಕಲಿಸಲಿಕ್ಕಾಗಿ ಎರಡೇಟು ಬಿಗಿದಾಕ್ಷಣ ನೋವಾಯಿತು ಎಂಬ ಕಾರಣಕ್ಕೆ ಮಕ್ಕಳು ಕುಗ್ಗುವುದಲ್ಲ. ಇಡೀ ತರಗತಿಯ ಮುಂದೆ ಅವರ ಆತ್ಮಗೌರವಕ್ಕೆ ಪೆಟ್ಟು ಬೀಳುತ್ತದೆ. ಅವರಿಗೆ ಅವಮಾನವಾಗುತ್ತದೆ. ಇದು ಮಕ್ಕಳ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಸಾಮಾನ್ಯವಾಗಿ ಕೆಲ ಶಿಕ್ಷಕರು ಮಕ್ಕಳು ಮಾಡಿದ ಚಿಕ್ಕ ಪುಟ್ಟ ತಪ್ಪುಗಳಿಗೂ ಮಕ್ಕಳನ್ನು ಹೊಡೆಯುವ ಅಭ್ಯಾಸ ಬೆಳೆಸಿರುತ್ತಾರೆ. ಒಂದು ಪ್ರೀತಿಪೂರ್ವಕ ಮಾತಿನಲ್ಲಿ ಪರಿಹರಿಸಬಹುದಾದ ಸಮಸ್ಯೆಯನ್ನು ಶಿಕ್ಷಕರೇ ಜಠಿಲಗೊಳಿಸುತ್ತಾರೆ. ಪ್ರೀತಿಯ ಮಾತಿಗೆ ಎರಡೋ- ಮೂರೋ ಬಾರಿ ಬಗ್ಗದಿದ್ದಾಗ ಆ ಬಳಿಕ ಗದರಿಸುವ ಮೂಲಕ ಬಗ್ಗಿಸಲೆತ್ನಿಸಬೇಕು. ಆಗಲೂ ಬಗ್ಗದಿದ್ದರೆ ವಿದ್ಯಾರ್ಥಿಯ ಹೆತ್ತವರನ್ನು ಕರೆಸಿ ವಿಷಯ ತಿಳಿಸಬೇಕು.
ಕೆಲ ಶಿಕ್ಷಕರು, ಹತ್ತು ಪ್ರಶ್ನೆಯಲ್ಲಿ ಒಂದು ಪ್ರಶ್ನೆಗೆ ತಪ್ಪು ಉತ್ತರ ನೀಡಿದರೆ ಒಂದು ಪೆಟ್ಟು , ಎರಡು ತಪ್ಪಿಗೆ ಎರಡು ಪೆಟ್ಟು, ಮೂರಕ್ಕೆ ಮೂರು ಪೆಟ್ಟು..!! ಮಕ್ಕಳೇನು ಮಾರ್ಕ್ಸ್ ತೆಗೆಯುವ ಯಂತ್ರಗಳೇ....? ಮಕ್ಕಳೇನು ಸೂಪರ್ ಕಂಪ್ಯೂಟರ್‌ಗಳೇ..? ಮಕ್ಕಳೇನು ರೋಬೊಟ್‌ಗಳೇ..?
ಕೆಲ ಮದ್ರಸಾ ಶಿಕ್ಷಕರು, ಅದು ನಮ್ಮ ಕಾಲದಿಂದಲೂ ಚಾಲ್ತಿಯಲ್ಲಿದೆ. ಸುಮ್ಮನೆ ಬೆತ್ತ ಹಿಡಿದು ಸಾಲಾಗಿ ಎಲ್ಲರಿಗೂ ಬಾರಿಸುತ್ತಾ "ಓದಿರ.. ಓದಿರ.." ಎಂದು ಓದಿಸುವುದು. ಈ ಮಕ್ಕಳೇನು ಗಾಡಿಗೆ ಕಟ್ಟಿದ ಎತ್ತುಗಳಾ..? ಗಾಡಿ ಓಡಿಸುವವರು ಎತ್ತಿನ ಗಾಡಿಯನ್ನು ಸರಿಯಾಗಿ ಎಳೆದುಕೊಂಡು ಹೋಗುತ್ತಿದ್ದರೂ ತಮ್ಮ ಅಭ್ಯಾಸ ಬಲದಂತೆ ಚಾಟಿಯನ್ನು ಬೀಸುತ್ತಿರುತ್ತಾರೆ.
ಕೆಲವರು ಮಕ್ಕಳಿಗೆ ಅಡ್ಡ ಹೆಸರಿಟ್ಟು ಕರೆಯುತ್ತಾರೆ. ನಾನು ಅತ್ಯಂತ ಇಷ್ಟಪಡುತ್ತಿದ್ದ ಕೆಲ ಶಿಕ್ಷಕರು, ಮದ್ರಸಾ ಅಧ್ಯಾಪಕರು ಈ ರೀತಿ ಮಕ್ಕಳನ್ನು ಅಡ್ಡ ಹೆಸರಲ್ಲಿ ಕರೆಯುತ್ತಿದ್ದರು. ಇದರಿಂದ ಆತನ/ ಆಕೆಯ ಸಹಪಾಠಿಗಳೂ ಆಕೆ/ ಆತನನ್ನು ಅದೇ ಅಡ್ಡ ಹೆಸರಲ್ಲಿ ಕರೆಯುತ್ತಾರೆ. ಇದೂ ಕೂಡಾ ಮಕ್ಕಳ ಮನಸ್ಸಿನ ಮೇಲೆ ತೀವ್ರತರ ಪರಿಣಾಮ ಬೀರುತ್ತದೆ.
ಒಟ್ಟಿನಲ್ಲಿ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲಾಗದವ, ಮಕ್ಕಳನ್ನು ಪ್ರೀತಿಯಿಂದ ಗೆಲ್ಲಲಾಗದವ ಯಾವತ್ತೂ ಒಳ್ಳೆಯ ಟೀಚರ್ ಆಗುವುದಿಲ್ಲ, ಕೆಟ್ಟ Punisher ಆಗುತ್ತಾನಷ್ಟೆ. ಕೆಟ್ಟ Punisher ನಿಂದ ಮಕ್ಕಳನ್ನು ತಿದ್ದಲಾಗದು. ಒಳ್ಳೆಯ ಟೀಚರ್ ಮಾತ್ರ ಮಕ್ಕಳನ್ನು ತಿದ್ದಬಲ್ಲ, ತಿದ್ದಿ ಬೆಳೆಸಬಲ್ಲ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 98808 42203
*******************************************